ಹೈದರಾಬಾದ್ನಲ್ಲಿ ನಡೆಯುತ್ತಿರುವ ಎರಡನೇ ದಿನದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಪ್ರಮುಖ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಲಿದೆ. ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿ ಹತ್ಯೆಗೊಳಗಾದ ಉದಯ್ಪುರದ ಟೈಲರ್ ವಿಚಾರ, ಬಿಜೆಪಿ ವಿರುದ್ಧ ಸದಾ ಕಿಡಿ ಕಾರುತ್ತಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ ಬಗ್ಗೆಯೂ ಚರ್ಚೆ ನಡೆಯಲಿದೆ.
ದೇಶದ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಗೃಹ ಸಚಿವ ಅಮಿತ್ ಶಾ ಹಾಗೂ ಕರ್ನಾಟಕ ಹಾಗೂ ಅಸ್ಸಾಂ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಮಾಹಿತಿ ನೀಡಲಿದ್ದಾರೆ.ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿದ್ದ ರಿಯಾಜ್ ಅಖ್ತರಿ, ಗೋಸ್ ಮೊಹಮ್ಮದ್ನನ್ನು ಬಂಧಿಸಲಾಗಿದೆ ಇವೆಲ್ಲವುಗಳ ಬಗ್ಗೆಯೂ ಪ್ರಧಾನಿ ಮಾಹಿತಿ ನೀಡಲಿದ್ದಾರೆ.
ಕಳೆದ ಐದು ವರ್ಷಗಳಲ್ಲೇ ಮೊದಲ ಬಾರಿಗೆ ಬಿಜೆಪಿಯು ಮುಖಾಮುಖಿ ಸಭೆಯನ್ನು ನಡೆಸುತ್ತಿದೆ. 2014ರಲ್ಲಿ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಿಜೆಪಿಯು ಮೂರನೇ ಬಾರಿಗೆ ದಕ್ಷಿಣ ರಾಜ್ಯಗಳಲ್ಲಿ ಸಭೆ ನಡೆಸುತ್ತಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಎರಡು ದಿನಗಳ ಕಾರ್ಯಕಾರಿಣಿ ಸಭೆಗೆಂದು ಪ್ರಧಾನಿ ಮೋದಿ ತೆಲಂಗಾಣಕ್ಕೆ ಬಂದರೂ ಅವರನ್ನು ಸ್ವಾಗತಿಸಲಿಲ್ಲ. ಬದಲಾಗಿ ಕೆಲವೇ ಗಂಟೆಗಳ ಹಿಂದೆ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬರಮಾಡಿಕೊಳ್ಳಲು ಅದೇ ಏರ್ಪೋರ್ಟ್ಗೆ ತೆರಳಿದ್ದರು.
ಅಷ್ಟೇ ಅಲ್ಲದೆ ಕೆಸಿಆರ್ ಪ್ರಧಾನಿ ಮೋದಿಯನ್ನು ಸೇಲ್ಸ್ಮೆನ್ ಎಂದು ಕರೆದಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿರುವ ತೆಲಂಗಾಣ ಬಿಜೆಪಿ ನಾಯಕ ಬಂಡಿ ಸಂಜಯ್ ಹೌದು ಪ್ರಧಾನಿ ಮೋದಿ ಓರ್ವ ಸೇಲ್ಸ್ಮೆನ್ ಹೀಗಾಗಿಯೇ ಬೇರೆ ದೇಶಗಳಿಗೆ ಕೊರೊನಾ ಲಸಿಕೆಗಳನ್ನು ರಫ್ತು ಮಾಡಿದ್ದಾರೆ ಎಂದು ಹೇಳಿದ್ದಾರೆ.