BJP National Executive Meeting: ಹೈದರಾಬಾದ್​ನಲ್ಲಿ ಮೋದಿ; ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಷಣ

ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಮಾಹಿತಿ ಕೊಡಲು ಬಿಜೆಪಿ ಈ ಸಭೆಯನ್ನು ನೆಪವಾಗಿಸಿಕೊಂಡು ವ್ಯಾಪಕ ಪ್ರಚಾರಕ್ಕೆ ಕ್ರಮಕೈಕೊಂಡಿದೆ.

BJP National Executive Meeting: ಹೈದರಾಬಾದ್​ನಲ್ಲಿ ಮೋದಿ; ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಷಣ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 03, 2022 | 7:33 AM

ಹೈದರಾಬಾದ್: ನಗರದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (BJP National Executive Meeting) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿನ್ನೆ (ಜುಲೈ 2) ಹೈದರಾಬಾದ್​ಗೆ (Hyderabad) ಆಗಮಿಸಿದರು. ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ದಿನವಾದ ಭಾನುವಾರ (ಜುಲೈ 3) ಮೋದಿ ಅವರು ಸಭೆಯಲ್ಲಿ ಮಾತನಾಡಬಹುದು ಎಂದು ಹೇಳಲಾಗಿದೆ. ನಗರದ ಹೈದರಾಬಾದ್ ಇಂಟರ್​ನ್ಯಾಷನಲ್ ಕನ್​ವೆನ್ಷನ್ ಸೆಂಟರ್​ನಲ್ಲಿ ನಡೆಯುವ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಆಡಳಿತವಿರುವ 19 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಕೊರೊನಾ ಪಿಡುಗು ವ್ಯಾಪಕವಾಗಿ ಹರಡಿದ್ದ ಕಾರಣ, ಕಳೆದ ವರ್ಷ ರಾಷ್ಟ್ರೀಯ ಕಾರ್ಯಕಾರಿಣಿಯು ಆನ್​ಲೈನ್​ ವೇದಿಕೆಯಲ್ಲಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಧ್ವಜ ಮತ್ತು ಬ್ಯಾನರ್​ಗಳು ರಾರಾಜಿಸುತ್ತಿವೆ. ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಮಾಹಿತಿ ಕೊಡಲು ಬಿಜೆಪಿ ಈ ಸಭೆಯನ್ನು ನೆಪವಾಗಿಸಿಕೊಂಡು ವ್ಯಾಪಕ ಪ್ರಚಾರಕ್ಕೆ ಕ್ರಮಕೈಕೊಂಡಿದೆ.

ಹೈದರಾಬಾದ್​ನ ಪೆರೇಡ್ ಗ್ರೌಂಡ್ಸ್​​ನಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಮೋದಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೈದರಾಬಾದ್​ನಲ್ಲಿ ಎಲ್ಲೆಡೆ ಬಿಜೆಪಿ ಬಾವುಟ, ಕೇಸರಿ ತೋರಣಗಳು ರಾರಾಜಿಸುತ್ತಿವೆ. ರಾಷ್ಟ್ರೀಯ ಕಾರ್ಯಕಾರಿಣಿ ಪ್ರಯುಕ್ತ ವಿಶೇಷ ಫೋಟೊ ಗ್ಯಾಲರಿಯನ್ನೂ ಆಯೋಜಿಸಲಾಗಿದ್ದು, ಹಿಂದಿನ ಕಾರ್ಯಕಾರಿಣಿ ಸಭೆಗಳು ಮತ್ತು ಪ್ರಮುಖ ಘಟನೆಗಳು, ನಾಯಕರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಮೋದಿ ಅವರ ಭೇಟಿಯನ್ನು ಈ ಬಾರಿಯೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ತಪ್ಪಿಸಿದ್ದಾರೆ. ಕಳೆದ 6 ತಿಂಗಳ ಅವಧಿಯಲ್ಲಿ 3ನೇ ಬಾರಿ ಕೆಸಿಆರ್​ ಹೀಗೆ ನಡೆದುಕೊಂಡಿದ್ದಾರೆ. ಪ್ರಧಾನಿ ಯಾವುದೇ ರಾಜ್ಯಕ್ಕೆ ಬಂದಾಗ ಅವರನ್ನು ಸ್ವಾಗತಿಸಲು ಅಲ್ಲಿನ ಮುಖ್ಯಮಂತ್ರಿಯೇ ವಿಮಾನ ನಿಲ್ದಾಣಕ್ಕೆ ಬರುವುದು ವಾಡಿಕೆ. ಆದರೆ ಶಿಷ್ಟಾಚಾರವನ್ನು ಕೆಸಿಆರ್ ಪಾಲಿಸುತ್ತಿಲ್ಲ. ದಿನದಿಂದ ದಿನಕ್ಕೆ ತೆಲಂಗಾಣದಲ್ಲಿ ಬಿಜೆಪಿಯು ಪ್ರಬಲವಾಗುತ್ತಿರುವುದು ಕೆಸಿಆರ್ ಅಸಮಾಧಾನಕ್ಕೆ ಕಾರಣ ಎಂದು ಹಲವು ಮಾಧ್ಯಮಗಳು ವಿಶ್ಲೇಷಿಸಿವೆ. ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ಮೈತ್ರಿಕೂಟ ರೂಪಿಸಲೂ ಕೆಸಿಆರ್ ಪ್ರಯತ್ನಿಸುತ್ತಿದ್ದಾರೆ. ಕಳೆದ ಫೆಬ್ರುವರಿ 5 ಹಾಗೂ ಮೇ 26ರಂದು ಮೋದಿ ಹೈದರಾಬಾದ್​ಗೆ ಬಂದಿದ್ದರು.

ತೆಲಂಗಾಣದ ಮಾಜಿ ಸಂಸದ ಕೆ.ವಿಶ್ವೇಶ್ವರ ರೆಡ್ಡಿ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಅವರು ಕಳೆದ ವರ್ಷ ಕಾಂಗ್ರೆಸ್ ತೊರೆದಿದ್ದರು. ತೆಲಂಗಾಣವು ಇದೀಗ ವಿಧಾನಸಭಾ ಚುನಾವಣೆಯ ಹೊಸಿಲಿನಲ್ಲಿದೆ. 2023ರಲ್ಲಿ ಅಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್​ಎಸ್) ಬಿಜೆಪಿ ಪ್ರಬಲ ಪ್ರತಿರೋಧ ತೋರುತ್ತಿದೆ. ಮುಂದಿನ ಚುನಾವಣೆಯಲ್ಲಿ ಟಿಆರ್​ಎಸ್ ಪದಚ್ಯುತಿಗೆ ಬಿಜೆಪಿ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರವು ಇದೀಗ ಜಾರಿಗೊಳಿಸಿರುವ ಹಲವು ಜನಪ್ರಿಯ ಯೋಜನೆಗಳನ್ನು ತೆಲಂಗಾಣ ಸರ್ಕಾರ ಮೊದಲು ಜಾರಿ ಮಾಡಿತ್ತು. ನಂತರ ಬಿಜೆಪಿ ಅದನ್ನು ಹೊಸ ಹೆಸರಿನೊಂದಿಗೆ ದೇಶವ್ಯಾಪಿ ಅನುಷ್ಠಾನ ಮಾಡಿತು ಎಂದು ಟಿಆರ್​ಎಸ್ ಆರೋಪಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada