West Bengal Elections 2021: ಪಶ್ಚಿಮ ಬಂಗಾಳದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

| Updated By: Skanda

Updated on: Mar 18, 2021 | 6:38 PM

ಇಂದು ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇನ್ನೊಂದು ಪ್ರಮುಖ ಹೆಸರು ರುದ್ರಾನಿಲ್ ಘೋಷ್. ಕೋಲ್ಕತ್ತಾದ ಭಾಬಾನಿಪುರ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಅವರು ಟಿಎಂಸಿ ಪಕ್ಷದ ಮೊದಲ ಶಾಸಕ ಎಂಬ ಹೆಗ್ಗಳಿಕೆ ಹೊಂದಿರುವ ಸೊವಂದೆಬ್ ಚಟ್ಟೋಪಾಧ್ಯಾಯ ಅವರ ವಿರುದ್ಧ ಕಣಕ್ಕಿಳಿಯಬೇಕಿದೆ.

West Bengal Elections 2021: ಪಶ್ಚಿಮ ಬಂಗಾಳದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ
ಬಿಜೆಪಿ ಹಿರಿಯ ನಾಯ, ರಾಷ್ಟ್ರಿಯ ಉಪಾಧ್ಯಕ್ಷ ಮುಕುಲ್ ರಾಯ್
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ 5,6,7 ಮತ್ತು 8 ನೇ ಸುತ್ತಿನ ಚುನಾವಣೆಗೆ ಬಿಜೆಪಿ ತನ್ನ  ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಒಂದು ಕಾಲದಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಅತ್ಯಾಪ್ತರಾಗಿದ್ದ, ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಕೃಷ್ಣಾನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರ ವಿರುದ್ಧ ಟಿಎಂಸಿಯಿಂದ ನಟಿ ಕೌಶಾನಿ ಮುಖರ್ಜಿ ಸ್ಪರ್ಧಿಸಲಿದ್ದಾರೆ.

ಇಂದು ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇನ್ನೊಂದು ಪ್ರಮುಖ ಹೆಸರು ರುದ್ರಾನಿಲ್ ಘೋಷ್. ಕೋಲ್ಕತ್ತಾದ ಭಾಬಾನಿಪುರ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಅವರು ಟಿಎಂಸಿ ಪಕ್ಷದ ಮೊದಲ ಶಾಸಕ ಎಂಬ ಹೆಗ್ಗಳಿಕೆ ಹೊಂದಿರುವ ಸೊವಂದೆಬ್ ಚಟ್ಟೋಪಾಧ್ಯಾಯ ಅವರ ವಿರುದ್ಧ ಕಣಕ್ಕಿಳಿಯಬೇಕಿದೆ. ಅಂದಹಾಗೆ 2016ರಲ್ಲಿ ಭಾಬಾನಿಪುರ್ ವಿಧಾನಭಾಕ್ಷೇತ್ರದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಅವರೇ ಕಣಕ್ಕಿಳಿದು ವಿಜೇತರಾಗಿದ್ದರು.

ಮಾರ್ಚ್ 14ರಂದು 3ನೇ ಹಂತದ ಚುನಾವಣೆ ನಡೆಯಲಿರುವ 27 ಕ್ಷೇತ್ರಗಳು ಮತ್ತು 4ನೇ ಹಂತದಲ್ಲಿ ಮತದಾನ ನಡೆಯಲಿರುವ 38 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಹಾಲಿ ಸಂಸದರು, ಚಿತ್ರತಾರೆಯರು ಮತ್ತು ಅರ್ಥಶಾಸ್ತ್ರಜ್ಞ ಸಹ ಬಿಜೆಪಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈ ಚುನಾವಣೆಯನ್ನು ಬಿಜೆಪಿ ಅದೆಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಈ ಪಟ್ಟಿಯೇ ಒಂದು ನಿದರ್ಶನ ಎನ್ನಲಾಗಿತ್ತು. ಟಿವಿ9 ಚುನಾವಣಾ ಅಧ್ಯಯನ ತಂಡದ ಪಾರ್ಥ ಪ್ರತಿಮಾ ದಾಸ್ ಈ ಪಟ್ಟಿಯನ್ನು ವಿಶ್ಲೇಷಿಸಿ ವಿಶೇಷ ಲೇಖನ ಬರೆದಿದ್ದರು.

ಮರುಓದಿಗಾಗಿ ಪಾರ್ಥ ಪ್ರತಿಮಾ ದಾಸ್ ಲೇಖನ

4 ನೇ ಹಂತದವರೆಗಿನ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ನಾಲ್ವರು ಹಾಲಿ ಸಂಸದರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಅವರೆಂದರೆ ನಿತೀಶ್ ಪ್ರಾಮಾಣಿಕ್ ದಿನ್ಹಾಟಾ, ಬಾಬೂಲಾಲ್ ಸುಪ್ರಿಯೊ, ಸ್ವಪನ್ ದಾಸ್​ಗುಪ್ತ ಮತ್ತು ಲಾಕೆಟ್ ಚಟರ್ಜಿ.

ದಿನ್ಹಾಟಾ ವಿಧಾನಸಭಾ ಕ್ಷೇತ್ರದಿಂದ ಕೂಚ್​ಬೆಹಾರ್ (ಎಸ್​ಸಿ ಮೀಸಲು) ಕ್ಷೇತ್ರದ ಸಂಸದ ನಿತೀಶ್ ಪ್ರಾಮಾಣಿಕ್ ಸ್ಪರ್ಧಿಸುತ್ತಿದ್ದಾರೆ. ದಿನ್ಹಾಟಾ ಕ್ಷೇತ್ರದಲ್ಲಿ ಎಸ್​ಸಿ ಶೇ 41, ಎಸ್​ಟಿ ಶೇ 0.4 ಮತ್ತು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಶೇ 32ರಷ್ಟು ಮತದಾರರಿದ್ದಾರೆ. ದಿನ್ಹಾಟಾ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಎನಿಸಿರುವ ಉದಯನ್ ಗುಹಾ ಟಿಎಂಸಿ ಪಕ್ಷದ ಹುರಿಯಾಳು. ಈ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ರಾಜ್​ಬೊನ್​ಶಿ (ಎಸ್​ಸಿ) ಸಮುದಾಯಕ್ಕೆ ಸೇರಿದವರು ಬಿಜೆಪಿ ನಿತೀಶ್​ ಪ್ರಾಮಾಣಿಕ್. ಇಬ್ಬರು ಘಟಾನುಘಟಿಗಳು ಸ್ಪರ್ಧಿಸಿರುವ ದಿನ್ಹಾಟಾದಲ್ಲಿ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿತ.

ಟೊಲ್ಲಿಗಂಜ್ ಕ್ಷೇತ್ರದಿಂದ ಬಾಬುಲಾಲ್ ಸುಪ್ರಿಯೊ ಸ್ಪರ್ಧಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿಯ ನಂಬಿಕಸ್ಥ ಬಂಟ ಎನಿಸಿದ ಆರೂಪ್ ಬಿಸ್ವಾಸ್ ಇಲ್ಲಿನ ಟಿಎಂಸಿ ಹುರಿಯಾಳು. ಮಮತಾ ಬ್ಯಾನರ್ಜಿಯ ಅತ್ಯಾಪ್ತರನ್ನು ಕಟ್ಟಿಹಾಕಲು ಪಣತೊಟ್ಟಿರುವ ಬಿಜೆಪಿ, ಬಾಬುಲಾಲ್ ಸುಪ್ರಿಯೊ ಮೂಲಕ ಅರೂಪ್ ಬಿಸ್ವಾಸ್​ರನ್ನು ಮಣಿಸಲು ತಂತ್ರ ಹೂಡಿದೆ. ಟೊಲ್ಲಿಗಂಜ್ ಕ್ಷೇತ್ರದಲ್ಲಿ ಎಸ್​ಸಿ ಶೇ 4, ಎಸ್​ಟಿ ನಗಣ್ಯ, ಮುಸ್ಲಿಂ ಸಮುದಾಯಕ್ಕೆ ಸೇರಿದವರು ಶೇ 4ರಷ್ಟು ಮತದಾರರಿದ್ದಾರೆ.

ಧಾರ್ಮಿಕ ಪ್ರವಾಸಿಗರನ್ನು ದೊಡ್ಡಸಂಖ್ಯೆಯಲ್ಲಿ ಆಕರ್ಷಿಸುವ ಪಶ್ಚಿಮ ಬಂಗಾಳದ ತಾರಕೇಶ್ವರ ಶಿವದೇವಾಲಯ ನಿಮಗೆ ಗೊತ್ತಿರಬಹುದು. ತಾರಕೇಶ್ವರ ಕ್ಷೇತ್ರದಿಂದ ಈ ಬಾರಿ ಬಿಜೆಪಿಯ ಹಿರಿಯ ನಾಯಕ ಸ್ವಪನ್ ದಾಸ್​ಗುಪ್ತ ಕಣಕ್ಕಿಳಿದಿದ್ದಾರೆ. ಅವರೆದುರು ಟಿಎಂಸಿಯ ರಾಮೇಂದು ಸಿಂಘರಾಯ್ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಎಸ್​ಸಿ ಶೇ 27, ಎಸ್​ಟಿ ಶೇ 5 ಮತ್ತು ಮುಸ್ಲಿಂ ಸಮುದಾಯದ ಶೇ 10ರಷ್ಟು ಮತದಾರರಿದ್ದಾರೆ. ಚುಂಚುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ನಟ, ಹಾಲಿ ಸಂಸದ ಲಾಕೆಟ್ ಚಟರ್ಜಿ ಸ್ಪರ್ಧಿಸುತ್ತಿದ್ದಾರೆ. ಇವರು ಪ್ರಸ್ತುತ ಹೂಗ್ಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಚುಂಚುರಾ ಕ್ಷೇತ್ರದಲ್ಲಿ ಎಸ್​ಸಿ ಶೇ 22, ಎಸ್​ಟಿ ಶೇ 4 ಮತ್ತು ಮುಸ್ಲಿಂ ಸಮುದಾಯದ ಶೇ 7ರಷ್ಟು ಮತದಾರರಿದ್ದಾರೆ.

ಹೂಗ್ಲಿ ಜಿಲ್ಲೆಯ ತಾರಕೇಶ್ವರ ಮತ್ತು ಚುಂಚುರಾ ಕ್ಷೇತ್ರಗಳಲ್ಲಿ ಬಿಜೆಪಿಯು ಇಬ್ಬರು ಹಾಲಿ ಸಂಸದರನ್ನೇ ಕಣಕ್ಕಿಳಿಸುತ್ತಿದೆ. ಈ ಜಿಲ್ಲೆಯಲ್ಲಿ ಬಿಜೆಪಿಯು ಕಠಿಣ ಪರಿಶ್ರಮ ವಹಿಸಲಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ?

ಇದನ್ನೂ ಓದಿ: 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿಯ ಮೊಣಕಾಲು, ಬಲ ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿವೆ: ವೈದ್ಯರ ಹೇಳಿಕೆ

 ‘ಏಪ್ರಿಲ್​ 5ರಂದು ಪಶ್ಚಿಮಬಂಗಾಳಕ್ಕೆ ತೆರಳಲಿವೆ ನಮ್ಮ ಟ್ರ್ಯಾಕ್ಟರ್​ಗಳು..ಪ್ರಧಾನಿ ಮೋದಿಯವರು ಹೆಲಿಕಾಪ್ಟರ್​​ನಿಂದ ಬಗ್ಗಿ ನೋಡಲಿ’-ರಾಕೇಶ್ ಟಿಕಾಯತ್​