‘ಮೋದಿ ಅಪ್ಪನೂ ಅಧಿಕಾರದಿಂದ ಇಳಿಯುತ್ತಾರೆ’ ಎಂಬ ಖರ್ಗೆ ಹೇಳಿಕೆಗೆ ಆಕ್ರೋಶ; ಕಾಂಗ್ರೆಸ್ ಮಾಫಿಯಾ ಗ್ಯಾಂಗ್ ಎಂದ ಬಿಜೆಪಿ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ "ಮೋದಿ ಅಷ್ಟೇ ಅಲ್ಲ, ಅವರ ಅಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ" ಎಂಬ ಹೇಳಿಕೆಗೆ ಬಿಜೆಪಿ ಇಂದು ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಪಕ್ಷವು ರೌಡಿಗಳು ಮತ್ತು ಗೂಂಡಾಗಳ ಭಾಷೆಯನ್ನು ಬಳಸುತ್ತಿದ್ದು, ರಾಜಕೀಯ ಪಕ್ಷದಂತಲ್ಲದೆ 'ಮಾಫಿಯಾ ಗ್ಯಾಂಗ್'ನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಬಿಜೆಪಿ ನಾಯಕರಾದ ಅಮಿತ್ ಶಾ, ನಿತಿನ್ ನವೀನ್ ಕೂಡ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಅಪ್ಪನೂ ಅಧಿಕಾರದಿಂದ ಇಳಿಯುತ್ತಾರೆ ಎಂಬ ಖರ್ಗೆ ಹೇಳಿಕೆಗೆ ಆಕ್ರೋಶ; ಕಾಂಗ್ರೆಸ್ ಮಾಫಿಯಾ ಗ್ಯಾಂಗ್ ಎಂದ ಬಿಜೆಪಿ
Mallikarjun Kharge And Pm Modi

Updated on: Oct 25, 2026 | 8:08 PM

ನವದೆಹಲಿ, ಅಕ್ಟೋಬರ್ 25: ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿವಂಗತ ತಂದೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯೊಂದು ಭಾರಿ ರಾಜಕೀಯವಿವಾದಕ್ಕೆ ಕಾರಣವಾಗಿದೆ. ಸಭಿಕರಲ್ಲಿದ್ದ ವ್ಯಕ್ತಿಯೊಬ್ಬರು “ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ” ಎಂದು ಕಿರುಚಿದಾಗ ತಾಳ್ಮೆ ಕಳೆದುಕೊಂಡ ಖರ್ಗೆ “ಮೋದಿ ಮಾತ್ರವಲ್ಲ, ಅವರ ಅಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ” ಎಂದು ಹೇಳಿದ್ದರು. ಖರ್ಗೆ ಅವರ ಈ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ತನ್ನ ಎಲ್ಲಾ ಮಿತಿಗಳನ್ನು ಮೀರಿದೆ ಎಂದು ತಿರುಗೇಟು ನೀಡಿದೆ.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, “ಹಿಂದೆ ಗೂಂಡಾಗಳು ಮತ್ತು ರೌಡಿಗಳು ಬಳಸುತ್ತಿದ್ದ ಭಾಷೆಯನ್ನು ಇಂದು ಕಾಂಗ್ರೆಸ್ ಅಧ್ಯಕ್ಷರು ಬಳಸುತ್ತಿದ್ದಾರೆ. ಹತಾಶೆಯಿಂದ ಅವರ ‘ಯುವರಾಜ’ (ರಾಹುಲ್ ಗಾಂಧಿ) ಒಮ್ಮೆ ರಸ್ತೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಮತ್ತೊಮ್ಮೆ ಸ್ವಪಕ್ಷದ ನಾಯಕರೊಂದಿಗೇ ಗಲಾಟೆ ಮಾಡಿಕೊಳ್ಳುತ್ತಾರೆ” ಎಂದು ಲೇವಡಿ ಮಾಡಿದೆ.


ಇದನ್ನೂ ಓದಿ: ‘ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ’; ವೇದಿಕೆಯಲ್ಲೇ ರೊಚ್ಚಿಗೆದ್ದ ಮಲ್ಲಿಕಾರ್ಜುನ ಖರ್ಗೆ

“ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ 10 ವರ್ಷಗಳ ಕಾಲ ಖರ್ಗೆ ಅವರ ಕನಸನ್ನು ನನಸು ಮಾಡಲು ಎಲ್ಲಾ ಕಸರತ್ತು ನಡೆಸಿದರೂ ಅಧಿಕಾರದಿಂದ ದೂರವಾದರು. ಇಂದು ಅವರ ಮಗ ಅದೇ ಕನಸನ್ನು ಹೊತ್ತು ವಿಯೆಟ್ನಾಂ, ಕೊಲಂಬಿಯಾಗಳಲ್ಲಿ ಅಲೆಯುತ್ತಿದ್ದಾರೆ. ದೇಶದ ಜನತೆ ಎಂದಿಗೂ ಈ ಕನಸನ್ನು ನನಸಾಗಲು ಬಿಡುವುದಿಲ್ಲ” ಎಂದು ಬಿಜೆಪಿ ಸವಾಲು ಹಾಕಿದೆ.

ಅಮಿತ್ ಶಾ ಮತ್ತು ಬಿಜೆಪಿ ನಾಯಕರ ಆಕ್ರೋಶ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕರು ರಾಜಕೀಯ ಶಿಸ್ತಿನ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಟೀಕಿಸಿದ್ದಾರೆ. “ಮೋದಿ ಅವರ ದಿವಂಗತ ತಾಯಿಯವರನ್ನು ನಿಂದಿಸುವುದು, ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆಯುವುದು ಹಾಗೂ ಬಡತನವನ್ನು ‘ಚಾಯ್‌ವಾಲಾ’ ಎಂದು ಗೇಲಿ ಮಾಡುವುದು ಕಾಂಗ್ರೆಸ್‌ಗೆ ಅಭ್ಯಾಸವಾಗಿದೆ” ಎಂದು ಕಿಡಿಕಾರಿದ್ದಾರೆ.


ಬಿಜೆಪಿ ನಾಯಕ ನಿತಿನ್ ನವೀನ್ ಮಾತನಾಡಿ, “ರಾಜಕೀಯ ವಿರೋಧಕ್ಕೂ ಒಂದು ಘನತೆ ಇರುತ್ತದೆ. ದಿವಂಗತರಾದ ಕುಟುಂಬಸ್ಥರನ್ನು ಸಾರ್ವಜನಿಕ ಭಾಷಣಕ್ಕೆ ಎಳೆದು ತರುವುದು ರಾಹುಲ್ ಗಾಂಧಿ ಮತ್ತು ಇಡೀ ವಿರೋಧ ಪಕ್ಷದ ಸಂಸ್ಕೃತಿಯಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.


ಖರ್ಗೆ ಹೇಳಿದ್ದೇನು?:

ಬಿಹಾರದ ಪಾಟ್ನಾದಲ್ಲಿ ಮೊದಲ ಮುಖ್ಯಮಂತ್ರಿ ಡಾ. ಶ್ರೀ ಕೃಷ್ಣ ಸಿಂಗ್ ಅವರ 139ನೇ ಜಯಂತಿ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದಾಗ, ಸಭಿಕರಲ್ಲಿದ್ದ ವ್ಯಕ್ತಿಯೊಬ್ಬರು “ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ (ಅಧಿಕಾರದಿಂದ ಕೆಳಗಿಳಿಯುವುದಿಲ್ಲ)” ಎಂದು ಕೂಗಿದ್ದರು. ಅದಕ್ಕೆ ಪ್ರತಿಯಾಗಿ ಖರ್ಗೆ, “ಮೋದಿ ಮಾತ್ರವಲ್ಲ, ಅವರ ಅಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ” ಎಂದು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: ವಾರಾಣಸಿಯ ನಮೋ ಘಾಟ್‌ನ ಆಗಸದಲ್ಲಿ ವಾಯುಪಡೆಯ ಸಾಹಸ; ಮೋದಿಯ ಮನಸೆಳೆದ ಏರ್ ಶೋ

ಇದೇ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ 100 ದಿನಗಳಲ್ಲಿ ಕಪ್ಪು ಹಣ ತರುವುದಾಗಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದ ಖರ್ಗೆ, ಆರ್‌ಎಸ್‌ಎಸ್‌ನ ಕೋಮುವಾದಿ ಚಿಂತನೆಗಳು ಕೊನೆಗೊಳ್ಳುವವರೆಗೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದೂ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಸಮರ್ಥನೆ:

ಮುಂಬೈನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ, ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಳೆದ 12-13 ವರ್ಷಗಳಲ್ಲಿ ಸರ್ಕಾರ ಮಾಡಿರುವ ತಪ್ಪುಗಳು, ಅಕ್ರಮಗಳು ಮತ್ತು ವಿದೇಶಾಂಗ ನೀತಿಯ ಲೋಪಗಳ ಕುರಿತು ಖರ್ಗೆ ಮಾತನಾಡಿದ್ದಾರೆ. 2029ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಎಲ್ಲಾ ತಪ್ಪುಗಳಿಗೆ ಲೆಕ್ಕ ಕೇಳಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us