ಡಿಎಂಕೆ ತಿರಸ್ಕರಿಸಲು 100 ಕಾರಣಕೊಟ್ಟ ಬಿಜೆಪಿ; ಡಿಎಂಕೆ ಪ್ರಜಾಪ್ರಭುತ್ವ ವಿರೋಧಿ: ಸಿ.ಟಿ.ರವಿ ಆರೋಪ

|

Updated on: Mar 21, 2021 | 6:48 PM

Tamil Nadu Assembly Elections 2021: ಡಿಎಂಕೆ ಅಂದರೆ ವಂಶಾಡಳಿತ ರಾಜಕಾರಣ ಮಾಡುವ ಪಕ್ಷ. ಎಂ.ಕರುಣಾನಿಧಿ ಅವರ ನಿಧನ ನಂತರ ಸ್ಟಾಲಿನ್ ಪಕ್ಷದ ನಾಯಕರಾದರು. ಇನ್ನು ಮುಂದೆ ಉದಯನಿಧಿ ಪಕ್ಷದ ಮಾಲೀಕರಾಗಲಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ಪಕ್ಷವಾಗಿರುವುದರಿಂದ ಡಿಎಂಕೆ ಮತ್ತು ಕಾಂಗ್ರೆಸ್​ನಲ್ಲಿ ಸಾಮ್ಯತೆ ಇದೆ ಎಂದ ಸಿ.ಟಿ.ರವಿ.

ಡಿಎಂಕೆ ತಿರಸ್ಕರಿಸಲು 100 ಕಾರಣಕೊಟ್ಟ ಬಿಜೆಪಿ; ಡಿಎಂಕೆ ಪ್ರಜಾಪ್ರಭುತ್ವ ವಿರೋಧಿ: ಸಿ.ಟಿ.ರವಿ ಆರೋಪ
ಡಿಎಂಕೆಯನ್ನು ತಿರಸ್ಕರಿಸಲು 100 ಕಾರಣಗಳು ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
Follow us on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಅಬ್ಬರ ಪ್ರಚಾರ ನಡೆಸುತ್ತಿರುವ ಬಿಜೆಪಿ ಭಾನುವಾರ ದ್ರಾವಿಡ ಮುನ್ನೇಟ್ರ ಕಳಗಂ (DMK) ತಿರಸ್ಕರಿಸಲು 100 ಕಾರಣಗಳ ಪಟ್ಟಿ ಬಿಡುಗಡೆ ಮಾಡಿದೆ. ಚೆನ್ನೈನಲ್ಲಿ ಪಟ್ಟಿ ಬಿಡುಗಡೆ ಮಾಡಿ  ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಬಿಜೆಪಿ ಉಸ್ತುವಾರಿ ವಹಿಸಿರುವ ಸಿ.ಟಿ.ರವಿ, ಡಿಎಂಕೆ ವಂಶಾಡಳಿತವಿರುವ, ಪ್ರಜಾಪ್ರಭುತ್ವ ವಿರೋಧಿ ಪಕ್ಷ ಎಂದು ಆರೋಪಿಸಿದ್ದಾರೆ.

ಡಿಎಂಕೆ ಅಂದರೆ ವಂಶಾಡಳಿತ ರಾಜಕಾರಣ ಮಾಡುವ ಪಕ್ಷ. ಎಂ.ಕರುಣಾನಿಧಿ ಅವರ ನಿಧನ ನಂತರ ಸ್ಟಾಲಿನ್ ಪಕ್ಷದ ನಾಯಕರಾದರು. ಇನ್ನು ಮುಂದೆ ಉದಯನಿಧಿ ಪಕ್ಷದ ಮಾಲೀಕರಾಗಲಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ಪಕ್ಷವಾಗಿರುವುದರಿಂದ ಡಿಎಂಕೆ ಮತ್ತು ಕಾಂಗ್ರೆಸ್ ನಲ್ಲಿ ಸಾಮ್ಯತೆ ಇದೆ. ಡಿಎಂಕೆಯಲ್ಲಿ ಇರುವ ಎಂ ಅಕ್ಷರದ ಅರ್ಥ ಮನಿ ಮೇಕಿಂಗ್ (ಹಣ ಮಾಡುವುದು). ಡಿಎಂಕೆ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರತಿದಿನ ಹಗರಣಗಳು ನಡೆಯುತ್ತಿತ್ತು. ತಮಿಳುನಾಡು ಯಾವತ್ತೂ 2ಜಿ ಹಗರಣವನ್ನು ಮರೆಯುವುದಿಲ್ಲ. ಡಿಎಂಕೆ ಭೂ ಸ್ವಾಧೀನ ಪಡಿಸುವುದಕ್ಕೆ ಖ್ಯಾತಿ ಪಡೆದಿದೆ ಎಂದು ರವಿ ಹೇಳಿದ್ದಾರೆ.


ಡಿಎಂಕೆ ವಿರೋಧಿಸಲು 100 ಕಾರಣಗಳು ಎಂಬ ಪಟ್ಟಿ ತಯಾರಿಸಿದ ಎಸ್.ಜಿ.ಸೂರ್ಯ ಅವರು, ಭೂಸ್ವಾಧೀನ ಮತ್ತು ಭ್ರಷ್ಟಾಚಾರ ಆರೋಪದಿಂದಾಗಿ 2011 ಮತ್ತು 2016ರಲ್ಲಿ ಡಿಎಂಕೆ ಪರಾಭವಗೊಂಡಿತ್ತು. ದ್ರಾವಿಡ ತತ್ವಗಳ ಹೆಸರಿನಲ್ಲಿ ತಮಿಳು ಜನರನ್ನು ಹಾದಿ ತಪ್ಪಿಸುತ್ತಿದೆ. ಅವರು ಆರ್ಯರು ದ್ರಾವಿಡರು ಎಂದು ವಿಭಜಿಸಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

234 ಸೀಟುಗಳಿರುವ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಜಟಾಪಟಿ; 19 ಮಂದಿಗೆ ಗಾಯ

ಮಾರ್ಚ್ 20ರಂದು ರಾತ್ರಿ ಚುನಾವಣಾ ಪ್ರಚಾರದ ವೇಳೆ ಎಐಎಡಿಎಂಕೆ ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಕರೂರ್ ವಿಧಾನಸಭೆ ಕ್ಷೇತ್ರದಲ್ಲಿ ಸಂಘರ್ಷವುಂಟಾಗಿದ್ದು ಎಐಎಡಿಎಂಕೆ ಪಕ್ಷದ 16 ಮಂದಿ ಮತ್ತು ಡಿಎಂಕೆ ಪಕ್ಷದ ಮೂವರಿಗೆ ಗಾಯಗಳಾಗಿವೆ.  ಕರೂರ್ ಚುನಾವಣೆ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ವಿ. ಸೆಂಥಿಲ್ ಬಾಲಾಜಿ ಅವರ ಬೆಂಬಲಿಗರು ಮತ್ತು ಎಐಎಡಿಎಕೆ ಅಭ್ಯರ್ಥಿ, ಸಾರಿಗೆ ಸಚಿವ ಎಂ.ಆರ್ ವಿಜಯಭಾಸ್ಕರ್ ಅವರ ಬೆಂಬಲಿಗರ ನಡುವೆ ಮಾವಡಿಯನ್ ದೇವಾಲಯದ ರಸ್ತೆಯಲ್ಲಿ ಜಟಾಪಟಿ ನಡೆದಿದೆ.

ಚುನಾವಣಾ ಪ್ರಚಾರ ಸಮಯ ಮುಗಿದ ನಂತರವೂ ಎಐಎಡಿಎಂಕೆ ಪ್ರಚಾರ ನಡೆಸಿದ್ದನ್ನು ಡಿಎಂಕೆ ಬೆಂಬಲಿಗರು ಪ್ರಶ್ನಿಸಿದ್ದು ಜಟಾಪಟಿಗೆ ಕಾರಣವಾಗಿತ್ತು. ಚುನಾವಣೆ ಪ್ರಚಾರ ನಡೆಸಿ ನಾವು ಬರುತ್ತಿರುವಾಗ ಡಿಎಂಕೆ ವಿರೋಧ ಪಡಿಸಿತ್ತು. ಎಲ್ಲರೂ ಅಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಡಿಎಂಕೆ ಒತ್ತಾಯಿಸಿದ್ದು ಈ ನಡುವೆ ವಿಜಯಭಾಸ್ಕರ್ ಅಲ್ಲಿಂದ ಹೊರಟು ಹೋಗಿದ್ದಾರೆ. ಇದಾದನಂತರ ಡಿಎಂಕೆ ಬೆಂಬಲಿಗರು ಮರದ ದೊಣ್ಣೆಯಿಂದ ಹೊಡೆದರು. ಕಲ್ಲು ತೂರಾಟ ನಡೆಸಿದರು. ಈ ಜಗಳದಲ್ಲಿ 16 ಮಂದಿಗೆ ಗಾಯಗಳಾಗಿವೆ ಎಂದು ಎಐಎಡಿಎಂಕೆ ಹೇಳಿದೆ.

ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳದಲ್ಲಿ ಗಾಯಗೊಂಡ ಡಿಎಂಕೆ ಬೆಂಬಲಿಗರನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಸಶಶ್ತ್ರ ಪೊಲೀಸರು ತಕ್ಷಣವೇ ಘಟನಾಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಈ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: Tamil Nadu Elections 2021: ಕಳಪೆ ಗುಣಮಟ್ಟದ ಅಕ್ಕಿಯ ತಟ್ಟೆಯಲ್ಲಿ ಆರತಿ ಬೆಳಗಿ ಎಐಎಡಿಎಂಕೆ ಶಾಸಕರನ್ನು ಸ್ವಾಗತಿಸಿದ ಮದುರೈ ಗ್ರಾಮಸ್ಥರು

Published On - 6:34 pm, Sun, 21 March 21