Tamil Nadu Elections 2021: ಕಳಪೆ ಗುಣಮಟ್ಟದ ಅಕ್ಕಿಯ ತಟ್ಟೆಯಲ್ಲಿ ಆರತಿ ಬೆಳಗಿ ಎಐಎಡಿಎಂಕೆ ಶಾಸಕರನ್ನು ಸ್ವಾಗತಿಸಿದ ಮದುರೈ ಗ್ರಾಮಸ್ಥರು
AIADMK MLA K Manickam: ಕಳಪೆ ಗುಣಮಟ್ಟದ ಅಕ್ಕಿ ಬಗ್ಗೆ ಸ್ಥಳೀಯ ನಗರಸಭೆಯಲ್ಲಿ ಹಲವಾರು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ಈ ಅಕ್ಕಿಯಿಂದ ಅನ್ನ ಮಾಡಿ ತಿನ್ನುವುದಾದರೂ ಹೇಗೆ? ನಾವೂ ಅವರಂತೆಯೇ ಮನುಷ್ಯರು ಎಂದು ಸ್ಥಳೀಯರು ಹೇಳಿದ್ದಾರೆ.
ಮದುರೈ: ತಮಿಳುನಾಡಿದ ಮದುರೈ ಜಿಲ್ಲೆಯ ಶೋಲವಂದನ್ ವಿಧಾನಸಭಾ ಕ್ಷೇತ್ರಕ್ಕೆ ಎಐಎಡಿಎಂಕೆ ಶಾಸಕ ಕೆ. ಮಾಣಿಕಂ ಭೇಟಿ ನೀಡಿದಾಗ ಗ್ರಾಮಸ್ಥರು ತಟ್ಟೆಯಲ್ಲಿ ಕಳಪೆ ಗುಣಮಟ್ಟದ ಅಕ್ಕಿ ತಟ್ಟೆಯಲ್ಲಿ ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ. ಬುಧವಾರ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ತಟ್ಟೆಯಲ್ಲಿ ಅಕ್ಕಿ ಹಿಡಿದು ಸಾಲಾಗಿ ನಿಂತು ಶಾಸಕರಿಗೆ ಆರತಿ ಮಾಡಿದ್ದಾರೆ. ರೇಷನ್ ಅಂಗಡಿಯಿಂದ ಖರೀದಿಸಿದ ಅಕ್ಕಿ ಹಳದಿ ಮತ್ತು ಕಪ್ಪು ಬಣ್ಣದಿಂದ ಕೂಡಿದ್ದು ಕಳಪೆ ಗುಣಮಟ್ಟದ್ದಾಗಿದೆ ಎಂದು ಮಹಿಳೆಯರು ಹೇಳಿದ್ದಾರೆ.
ಈ ರೀತಿಯ ಸ್ವಾಗತ ನೋಡಿ ಮುಜುಗರಕ್ಕೊಳಗಾದ ಶಾಸಕ ತಕ್ಷಣವೇ ಅಲ್ಲಿಂದ ಹಿಂತಿರುಗಿದ್ದಾರೆ. ಶಾಸಕರ ಜತೆಗಿದ್ದ ಎಐಎಡಿಎಂಕೆ ಕಾರ್ಯಕರ್ತರು ಮಹಿಳೆಯರ ಜತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಕಳಪೆ ಗುಣಮಟ್ಟದ ಅಕ್ಕಿ ಬಗ್ಗೆ ಸ್ಥಳೀಯ ನಗರಸಭೆಯಲ್ಲಿ ಹಲವಾರು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ಈ ಅಕ್ಕಿಯಿಂದ ಅನ್ನ ಮಾಡಿ ತಿನ್ನುವುದಾದರೂ ಹೇಗೆ? ನಾವೂ ಅವರಂತೆಯೇ ಮನುಷ್ಯರು, ಇಂಥ ಅಕ್ಕಿಯನ್ನು ನಾವು ಹೇಗೆ ತಿನ್ನಲು ಸಾಧ್ಯ? ತಿನ್ನಲು ಆಗದೇ ಇರುವ ಕಾರಣ ನಾವು ಈ ಅಕ್ಕಿಯನ್ನು ಹೊರಗೆ ಚೆಲ್ಲುತ್ತೇವೆ ಎಂದು ಮಹಿಳೆಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Women hold ‘aarti’ plates filled with poor quality of ration rice to welcome AIADMK MLA & Sholavandan candidate during his campaign in #Madurai pic.twitter.com/bSMiTFm7dq
— Shabbir Ahmed (@Ahmedshabbir20) March 17, 2021
ನಾವು ನಿಮ್ಮ ಪಕ್ಷಕ್ಕೆ ಮತ ನೀಡಿದರೂ ನೀವು ನಮಗೆ ಮಾಡುತ್ತಿರುವ ಕೆಲಸ ಇದೇನಾ? ಶಾಸಕ ಮಾಣಿಕಂ ಅವರು 5 ವರ್ಷಗಳ ನಂತರ ಇಲ್ಲಿಗೆ ಬಂದಿದ್ದಾರೆ. ಇಲ್ಲಿ ಯಾವುದಾದರೂ ನೀರಿನ ನಲ್ಲಿಯಿದೆಯೇ? ಸರಿಯಾದ ರಸ್ತೆ ಇದೆಯೇ? ನಿಮ್ಮ ಕಾರು ಕೂಡಾ ಈ ರಸ್ತೆಯಲ್ಲಿ ಸರಿಯಾಗಿ ಬರುವುದಿಸಲ್ಲ ಎಂದು ಗ್ರಾಮದ ಜನರು ಮಾಣಿಕಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮಸ್ಥರ ಟೀಕೆಗಳಿಂದ ಮುಜುಗರಕ್ಕೊಳಾದ ಶಾಸಕ, ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಹೇಳಿದ್ದಾರೆ. ಈ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಅಕ್ಕಿಯ ಗುಣಮಟ್ಟ ಕಳಪೆ ಆಗಿದ್ದರೂ ಜನರು ಅದನ್ನು ಖರೀದಿಸುತ್ತಿರುವುದೇಕೆ? ನೀವು ನೇರವಾಗಿ ನನಗೆ ಕರೆ ಮಾಡಬೇಕಿತ್ತು. ನಾನು ತಕ್ಕ ಕ್ರಮ ಕೈಗೊಳ್ಳುತ್ತಿದ್ದೆ. ನಾನು ತಕ್ಷಣವೇ ಅಧಿಕಾರಗಳ ಜತೆ ಮಾತನಾಡಿ ಕ್ರಮ ತೆಗೆದುಕೊಳ್ಳುವೆ. ನಾನು ನಾಳೆ ಇಲ್ಲಿಗೆ ಮತ್ತೆ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ.
ತಮಿಳುನಾಡಿನಲ್ಲಿ 234 ವಿಧಾನಸಭೆ ಸೀಟುಗಳಿಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.
ಸಿ- ವೋಟರ್ ಸಮೀಕ್ಷೆ ಟೈಮ್ಸ್ ನೌ- ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಡಿಎಂಕೆ-ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 154ರಿಂದ 162 ಸೀಟುಗಳನ್ನು ಗೆಲ್ಲಲಿದೆ. ಅದೇ ವೇಳೆ ಯುಪಿಎ ಮೈತ್ರಿಕೂಟ 158 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ. 2016ರ ಚುನಾವಣೆಯಲ್ಲಿ ಲಭಿಸಿದ ಸೀಟುಗಳಿಗಿಂತ 60 ಸೀಟುಗಳು ಯುಪಿಎಗೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಒಟ್ಟು 234 ಕ್ಷೇತ್ರಗಳಲ್ಲಿ, ಎಐಡಿಎಂಕೆ 65 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎಂದು ಹೇಳಿದೆ.
ಇದನ್ನೂ ಓದಿ: Tamil Nadu Elections 2021: ಮತದಾರರ ಓಲೈಕೆಗಾಗಿ ಟಿವಿ, ವಾಷಿಂಗ್ ಮೆಷೀನ್ ಏನೇ ಕೇಳಿದರೂ ಕೊಡುತ್ತಿವೆ ರಾಜಕೀಯ ಪಕ್ಷಗಳು
ಇದನ್ನೂ ಓದಿ: ತಮಿಳುನಾಡಿನಲ್ಲಿ ಚಿನ್ನಮ್ಮ ಶಶಿಕಲಾಗೆ ಮತ್ತೊಂದು ಶಾಕ್ ನೀಡಿದ ಪಳನಿಸ್ವಾಮಿ ನೇತೃತ್ವದ AIADMK ಸರ್ಕಾರ
Published On - 2:47 pm, Thu, 18 March 21