ಬಿಜೆಪಿಗರು ಕಾಶ್ಮೀರೀ ಪಂಡಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ. ಕಾಶ್ಮೀರಿ ಪಂಡಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡ ಬಿಜೆಪಿ ತಿರುಗಿ ಅವರಿಗೆ ಏನೂ ಅನುಕೂಲ ಮಾಡಿಕೊಡಲಲಿಲ್ಲ ಎಂದು ಅಬ್ದುಲ್ಲಾ ಹೇಳಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಸಂಬಂಧಪಟ್ಟಂತೆ ಜಮ್ಮು ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್ (NC)ನ ಅಲ್ಪಸಂಖ್ಯಾತರ ಘಟಕ ಮೂರು ನಿರ್ಣಯಗಳನ್ನು ಅಂಗೀಕರಿಸಿದೆ. ಈ ನಿರ್ಣಯಗಳ ಮೂಲಕ ಕಾಶ್ಮೀರಿ ಪಂಡಿತರಿಗೆ ರಾಜಕೀಯ ಮೀಸಲಾತಿ, ಕಾಶ್ಮೀರಿ ಹಿಂದೂ ದೇವಾಲಯದ ಸಂರಕ್ಷಣಾ ಮಸೂದೆ ಅಂಗೀಕರಿಸಬೇಕು ಮತ್ತು ಕಾಶ್ಮೀರ ಪಂಡಿತರು ಮರಳುವಂತೆ ಮಾಡಿ, ಅವರಿಗೆ ಪುನರ್ವಸತಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದೆ.
ಕ್ಷಮೆ ಕೇಳಿದ ಫಾರೂಕ್ ಅಬ್ದುಲ್ಲಾ
ಈ ವೇಳೆ ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರಿ ಪಂಡಿತ ಸಮುದಾಯದ ಕ್ಷಮೆ ಕೋರಿದ್ದಾರೆ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಇಲ್ಲಿಂದ ಹೊರಡುವಾಗ ಅವರನ್ನು ರಕ್ಷಿಸಲು ಸಾಧ್ಯವಾಗದೆ ಇರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದೇವೆ. ಪಂಡಿತ್ ಸಮುದಾಯದವರನ್ನು ಕಾಶ್ಮೀರಿ ಕಣಿವೆಗೆ ವಾಪಸ್ ಕರೆತರಲು ಹರಸಾಹಸ ಪಟ್ಟಿದ್ದೇವೆ. ಆದರೆ ಕೆಲವರು ಪಂಡಿತರ ಹತ್ಯಾಕಾಂಡ ನಡೆಸುವ ಮೂಲಕ ಇಡೀ ಪ್ರಕ್ರಿಯೆಯನ್ನೇ ಹಾಳು ಮಾಡಿದರು. ಅವರ ನೋವು ಅಪಾರವಾದದ್ದು ಎಂದು ಹೇಳಿದ್ದಾರೆ.
ಹಾಗೇ, ಕೆಲವರು ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ಸೌಹಾರ್ದತೆಯನ್ನು ಕದಡಿವೆ. ಪಂಡಿತರನ್ನು ಕಾಶ್ಮೀರದಿಂದ ಓಡಿಸಿದ್ದು ಮುಸ್ಲಿಮರಲ್ಲ. ಬದಲಿಗೆ ಸ್ವಾರ್ಥ ಜನರು. ಕಾಶ್ಮೀರಿ ಪಂಡಿತರನ್ನು ಹೊರನೂಕಿದರೆ ಇಡೀ ಪ್ರದೇಶ ತಮ್ಮದಾಗುತ್ತದೆ ಎಂದು ಅವರು ನಂಬಿದ್ದರು. ಆದರೆ ಅದೆಂದೂ ಸಾಧ್ಯವಾಗಲಿಲ್ಲ. ಮುಂದೆಯೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರೈತರ ಮಸೂದೆಯನ್ನು ವಿರೋಧದ ನಡುವೆಯೂ ಅಂಗೀಕರಿಸಲಾಯಿತು. ಆದರೆ ನಂತರ ತನ್ನ ರಾಜಕೀಯ ಹಿತಾಸಕ್ತಿಗಾಗಿ ಅದನ್ನು ಹಿಂದಕ್ಕೆ ತೆಗೆದುಕೊಂಡಿತು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ; ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚಲ್ಲ: ಬಿ.ಸಿ ನಾಗೇಶ್ ಸ್ಪಷ್ಟನೆ