
ಪಾಟ್ನಾ, ಅಕ್ಟೋಬರ್ 23: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ (Bihar Assembly Elections) ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮತ್ತು ವಿಕಾಸ್ಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಹಾಘಟಬಂಧನ್ ಮೈತ್ರಿಕೂಟ ಇಂದು ಘೋಷಿಸಿದೆ. ಪಾಟ್ನಾದಲ್ಲಿ ನಡೆದ ಇಂಡಿಯ ಬ್ಲಾಕ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಈ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಆಡಳಿತಾರೂಢ ಎನ್‌ಡಿಎ ವಿರುದ್ಧ ವಾಗ್ದಾಳಿ ನಡೆಸಿದರು, ಬಿಹಾರದ ಬೆಳವಣಿಗೆಗೆ ಸ್ಪಷ್ಟ ದೃಷ್ಟಿಕೋನವಿಲ್ಲ ಎಂದು ಅವರು ಆರೋಪಿಸಿದ್ದಾರೆ. “ಬಿಹಾರದ ಅಭಿವೃದ್ಧಿಗೆ ಎನ್‌ಡಿಎ ಬಳಿ ಯಾವುದೇ ಮಾರ್ಗಸೂಚಿ ಇಲ್ಲ” ಎಂದು ಅವರು ಹೇಳಿದ್ದಾರೆ. ಈ ಮೈತ್ರಿಕೂಟವು ಇಂಡಿಯ ಬಣದ ಚುನಾವಣಾ ಭರವಸೆಗಳನ್ನು ನಕಲು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೀಟು ಹಂಚಿಕೆ ಬಿಕ್ಕಟ್ಟಿನ ನಡುವೆ 143 ಅಭ್ಯರ್ಥಿಗಳನ್ನು ಘೋಷಿಸಿದ ಆರ್‌ಜೆಡಿ; ರಾಘೋಪುರದಿಂದ ತೇಜಸ್ವಿ ಯಾದವ್ ಸ್ಪರ್ಧೆ
ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರ ಹೆಸರನ್ನು ಘೋಷಿಸದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೇಜಸ್ವಿ ಯಾದವ್ ಟೀಕಿಸಿದ್ದಾರೆ. “ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ. ಮಹಾಘಟಬಂಧನದ ಗುರಿ ಬಿಹಾರದಲ್ಲಿ ಸರ್ಕಾರ ರಚಿಸುವುದು ಮಾತ್ರವಲ್ಲ, ಬಿಹಾರವನ್ನು ಪುನರ್ನಿರ್ಮಿಸುವುದು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
VIDEO | Bihar Assembly Elections 2025: RJD leader and Mahagathbandhan CM candidate Tejashwi Yadav (@yadavtejashwi), addressing the joint press conference, said:
“This question of who will be the CM face of Mahagathbandhan was being raised… We have joined hands to work for the… pic.twitter.com/hsEIUnUrCh
— Press Trust of India (@PTI_News) October 23, 2025
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರ ನಿರಂತರ ಬೆಂಬಲಕ್ಕಾಗಿ ಅವರು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ; ಮಹಾಘಟಬಂಧನದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಹೆಸರು ಘೋಷಣೆ
ಮಹಾಘಟಬಂಧನದ ಪಾಲುದಾರರ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಕ್ಷದ ಹೈಕಮಾಂಡ್ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರನ್ನು ಪಾಟ್ನಾಕ್ಕೆ ಕಳುಹಿಸಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದೆ. ಆರ್‌ಜೆಡಿ ನಾಯಕರಾದ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರನ್ನು ಭೇಟಿಯಾದ ನಂತರ ಇಂಡಿಯ ಮೈತ್ರಿಕೂಟವು ಸಂಪೂರ್ಣವಾಗಿ ಒಗ್ಗಟ್ಟಿನಿಂದ ಕೂಡಿದೆ ಎಂದು ಅಶೋಕ್ ಗೆಹ್ಲೋಟ್ ಭರವಸೆ ನೀಡಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯು ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷವಾದ ಮಹಾಘಟಬಂಧನದ ನಡುವಿನ ನೇರ ಸ್ಪರ್ಧೆಯಾಗುವ ನಿರೀಕ್ಷೆಯಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನದಲ್ಲಿ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಇದ್ದಾರೆ. ಎನ್‌ಡಿಎಯಲ್ಲಿ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷಗಳು ಸೇರಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ