ಬಿಹಾರ ಚುನಾವಣೆ; ಮಹಾಘಟಬಂಧನದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಹೆಸರು ಘೋಷಣೆ
ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಬಿಹಾರದಲ್ಲಿ ಎನ್ಡಿಎ ಮತ್ತು ಮಹಾಘಟಬಂಧನದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈಗಾಗಲೇ ಸೀಟು ಹಂಚಿಕೆಯ ಘೋಷಣೆಯಾಗಿದ್ದು, ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ಇನ್ನೂ ಮುಂದುವರೆದಿದೆ. ಇದೆಲ್ಲದರ ನಡುವೆ ಕೊನೆಗೂ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಹೆಸರನ್ನು ಘೋಷಿಸಲಾಗಿದೆ.

ಪಾಟ್ನಾ, ಅಕ್ಟೋಬರ್ 23: ಹಲವು ವಾರಗಳ ವಾಗ್ವಾದ ಮತ್ತು ತೀವ್ರ ಚರ್ಚೆಗಳ ನಂತರ ಕೊನೆಗೂ ಇಂದಿನ ಸುದ್ದಿಗೋಷ್ಠಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಅವರನ್ನು ಬಿಹಾರದ ವಿಧಾನಸಭಾ ಚುನಾವಣೆಯ (Bihar Assembly Elections) ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಸೀಟು ಹಂಚಿಕೆ ಮಾತುಕತೆಗಳ ಸಮಯದಲ್ಲಿ ಸಾಕಷ್ಟು ಹಗ್ಗಜಗ್ಗಾಟ ನಡೆದಿದ್ದು, ಆರ್ಜೆಡಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಹಾಗೇ, ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
“ಎಲ್ಲಾ ಹಿರಿಯ ನಾಯಕರೊಂದಿಗೆ ಚರ್ಚಿಸಿದ ನಂತರ ಮುಂಬರುವ ಬಿಹಾರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ನಾವು ನಿರ್ಧರಿಸಿದ್ದೇವೆ. ಅವರಿಗೆ ಮುಂದೆ ದೀರ್ಘವಾದ ಮತ್ತು ಉತ್ತಮವಾದ ಭವಿಷ್ಯವಿದೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹೋಗಿ ವಾಪಸಾದ ಅರ್ಜಿತ್ ಚೌಬೆ
ನಿಶಾದ್ ಸಮುದಾಯದಲ್ಲಿ ಪ್ರಭಾವ ಹೊಂದಿರುವ ಸಹಾನಿ ಅವರನ್ನು ಮಾತ್ರವಲ್ಲದೆ ಬಿಹಾರದಲ್ಲಿ ಇಂಡಿಯ ಬಣ ಅಧಿಕಾರಕ್ಕೆ ಬಂದರೆ ಮತ್ತೊಬ್ಬ ಹಿಂದುಳಿದ ವರ್ಗದ ನಾಯಕನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಗೆಹ್ಲೋಟ್ ಹೇಳಿದ್ದಾರೆ.
VIDEO | Bihar Assembly Elections 2025: RJD leader and Mahagathbandhan CM candidate Tejashwi Yadav (@yadavtejashwi), addressing the joint press conference, said:
“This question of who will be the CM face of Mahagathbandhan was being raised… We have joined hands to work for the… pic.twitter.com/hsEIUnUrCh
— Press Trust of India (@PTI_News) October 23, 2025
ಬಿಹಾರದ ರಾಘೋಪುರ ಸ್ಥಾನದಿಂದ ಸ್ಪರ್ಧಿಸಲಿರುವ ತೇಜಸ್ವಿ ಯಾದವ್ ತಮ್ಮನ್ನು ಮೈತ್ರಿಕೂಟದ ಮುಖವಾಗಿ ಹೆಸರಿಸಿದ್ದಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಮತದಾರರ ಅಧಿಕಾರ ಯಾತ್ರೆಯ ಸಮಯದಲ್ಲಿ ಆರ್‌ಜೆಡಿ ನಾಯಕ ಮತ್ತು ರಾಹುಲ್ ನಡುವೆ ಸ್ಪಷ್ಟವಾದ ಸೌಹಾರ್ದತೆಯ ಹೊರತಾಗಿಯೂ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸುವುದಕ್ಕೆ ಕಾಂಗ್ರೆಸ್ ಹಿಂದೇಟು ಹಾಕಿತ್ತು.
ಇದನ್ನೂ ಓದಿ: ಬಿಹಾರ ಚುನಾವಣೆಗೆ ಶಹಾಬುದ್ದೀನ್ ಮಗನನ್ನು ಕಣಕ್ಕಿಳಿಸಿದ್ದಕ್ಕೆ ಆರ್‌ಜೆಡಿ ವಿರುದ್ಧ ಅಮಿತ್ ಶಾ ವಾಗ್ದಾಳಿ
ಮಹಾಘಟಬಂಧನದ ಬಣದಲ್ಲಿ ಪ್ರಬಲ ಪಕ್ಷವಾದ ಆರ್‌ಜೆಡಿ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಉಳಿದ ಸ್ಥಾನಗಳನ್ನು ಸಿಪಿಐ(ಎಂಎಲ್), ಸಹಾನಿಯ ವಿಐಪಿ ಮತ್ತು ಸಣ್ಣ ಮಿತ್ರಪಕ್ಷಗಳು ಹಂಚಿಕೊಂಡಿವೆ.
ಚುನಾವಣೆಗೆ ಕೇವಲ ಎರಡು ವಾರಗಳ ಮೊದಲು ಈ ಘೋಷಣೆ ಮಾಡಲಾಗಿದೆ. ಬಿಹಾರದಲ್ಲಿ ಎರಡು ಹಂತದ ಚುನಾವಣೆಗಳು ನವೆಂಬರ್ 6 ಮತ್ತು 11ರಂದು ನಡೆಯಲಿದ್ದು, ನವೆಂಬರ್ 14ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




