ಮಧುರೈ: ಡಿಎಂಕೆ ಯುವ ಸಂಘಟನೆ ನಾಯಕ, ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಇಟ್ಟಿಗೆ ಕದ್ದಿದ್ದಾರೆಂದು ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಉದಯನಿಧಿ ಅವರು ಪ್ರಚಾರದ ವೇಳೆ ಇಟ್ಟಿಗೆಯನ್ನು ಹಿಡಿದುಕೊಂಡಿದ್ದರು. ಅದಾದ ಬಳಿಕ ಠಾಣೆ ಮೆಟ್ಟಿಲೇರಿದ ಬಿಜೆಪಿ ಕಾರ್ಯಕರ್ತ, ಏಮ್ಸ್ ನಿರ್ಮಾಣ ಆಗುತ್ತಿರುವ ಸ್ಥಳದಿಂದ ಇಟ್ಟಿಗೆ ಕಳವಾಗಿದೆ ಎಂದು ದೂರಿದ್ದಾರೆ.
ಮಧುರೈನಲ್ಲಿ ಚುನಾವಣಾ ರ‍್ಯಾಲಿ ನಡೆಸಿದ್ದ ಉದಯನಿಧಿ, ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಯನ್ನು ಟೀಕಿಸಿದ್ದರು. ಮಧುರೈನಲ್ಲಿ ಏಮ್ಸ್ ನಿರ್ಮಾಣ ಕಾರ್ಯ ಇಟ್ಟಿಗೆವರೆಗೆ ಬಂದಿದೆ ಎಂದು ವ್ಯಂಗ್ಯವಾಡಿದ್ದರು. ನೀವು ಈ ಇಟ್ಟಿಗೆಗಳನ್ನೇ ಏಮ್ಸ್ ಅಂದುಕೊಳ್ಳಬಹುದು ಎಂದಿದ್ದರು. ಅಲ್ಲದೆ, ಇಟ್ಟಿಗೆಯನ್ನು ಹಿಡಿದು ಜನಸಮೂಹಕ್ಕೆ ತೋರಿಸಿದ್ದಾರೆ. ಆಗ ನೆರೆದಿದ್ದ ಜನರು ನಕ್ಕಿದ್ದಾರೆ. ನಂತರ ಅದನ್ನು ತಮ್ಮ ಟ್ವಿಟರ್ನಲ್ಲಿ ಕೂಡ ಉದಯನಿಧಿ ಶೇರ್ ಮಾಡಿಕೊಂಡಿದ್ದರು.
ಇಟ್ಟಿಗೆಯನ್ನು ಪ್ರಚಾರಕ್ಕೆ ತೆಗೆದುಕೊಂಡುಹೋಗಿದ್ದ ಉದಯನಿಧಿ, ನೋಡಿ ನನ್ನೊಂದಿಗೆ ಏಮ್ಸ್ ಆಸ್ಪತ್ರೆಯನ್ನು ತಂದಿದ್ದೇನೆ. ಏಮ್ಸ್ಗಾಗಿ ನಿಗದಿಪಡಿಸಲಾದ 250 ಎಕರೆ ಭೂಮಿಯಲ್ಲಿ ಎಲ್ಲ ಇಟ್ಟಿಗೆಗಳೇ ಇದ್ದವು. ಅದರಲ್ಲಿ ಒಂದನ್ನು ನಾನು ಇಲ್ಲಿ ತಂದಿದ್ದೇನೆ. ಏಮ್ಸ್ ನಿರ್ಮಾಣ ಮಾಡುತ್ತೇವೆ ಎಂದಿದ್ದ ಬಿಜೆಪಿ ಮತ್ತು ಎಐಎಡಿಎಂಕೆಗಳು ಕಳೆದ 2ವರ್ಷಗಳಲ್ಲಿ ಏನು ಮಾಡಿದವು? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಈ ಮೂಲಕ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಬರೀ ಭರವಸೆಯನ್ನಷ್ಟೇ ಕೊಡುತ್ತದೆ ಹೊರತು, ಅದನ್ನು ನೆರವೇರಿಸುವುದಿಲ್ಲ ಎಂದು ದೂಷಿಸಿದ್ದರು. ಈಗ ಅದನ್ನೇ ಮುಂದಾಗಿಟ್ಟುಕೊಂಡ ಬಿಜೆಪಿ ಕಾರ್ಯಕರ್ತನೊಬ್ಬ, ಏಮ್ಸ್ ನಿರ್ಮಾಣವಾಗುತ್ತಿರುವ ಜಾಗದಿಂದ ಇಟ್ಟಿಗೆ ಕಳವಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಬಿಜೆಪಿ ಕಾರ್ಯಕರ್ತ ನೀಡಿದ ದೂರಿಗೆ ಪ್ರತಿಕ್ರಿಯೆ ನೀಡಿದ ಉದಯನಿಧಿ ಸ್ಟಾಲಿನ್, ನಾನು ಒಂದು ಇಟ್ಟಿಗೆ ಹಿಡಿದುಕೊಂಡು ಬಂದಿದ್ದಕ್ಕೆ ಬಿಜೆಪಿ ದೂರು ನೀಡಿದೆ. ಅದರಲ್ಲೇ ಗೊತ್ತಾಗುತ್ತದೆ ಏಮ್ಸ್ ಎಂದರೆ ಕೇವಲ ಇಟ್ಟಿಗೆ ಹೊರತು, ಇನ್ನೇನಲ್ಲ ಎಂಬುದು ಎಂದು ಮತ್ತೆ ಟೀಕಿಸಿದ್ದಾರೆ. ಮಧುರೈನಲ್ಲಿ ಏಮ್ಸ್ ಶಾಖೆ ನಿರ್ಮಾಣ ಮಾಡುವುದಾಗಿ 2019ರಲ್ಲಿಯೇ ಎಐಎಡಿಎಂಕೆ-ಬಿಜೆಪಿ ಘೋಷಣೆ ಮಾಡಿವೆ. ಅದೇ ವರ್ಷ ಜನವರಿಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆಯನ್ನೂ ನೆರವೇರಿಸಿ, ಅಡಿಗಲ್ಲು ಸ್ಥಾಪನೆಯೂ ಆಗಿತ್ತು.
அதிமுக-பாஜக இணைந்து மதுரையில் கட்டிய எய்ம்ஸ் மருத்துவமனையை கையொடு எடுத்துவந்துள்ளேன் என சொல்லி ஒரு செங்கலை காட்டியதும் சாத்தூரில் கூடியிருந்த மக்கள் சிரித்துவிட்டனர். ஆதிக்க-அடிமை கூட்டணியின் இந்த அவலம் முடிவுக்குவர நம் கூட்டணி வேட்பாளர் ரகுராமன் அவர்களை ஆதரிக்க கேட்டுக்கொண்டேன். pic.twitter.com/P1aWvRh8OG
— Udhay (@Udhaystalin) March 23, 2021
ಇದನ್ನೂ ಓದಿ: ತಮಿಳುನಾಡು ವಿಧಾನಸಭಾ ಚುನಾವಣೆ: ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ