ರಾಜ್ಯಸಭೆ ಬಹುಮತ, ರಾಷ್ಟ್ರಪತಿ ಚುನಾವಣಾ ಗೆಲುವಿಗೆ ಮುನ್ನುಡಿ ಬರೆದ ಬಿಜೆಪಿಯ ದೆಹಲಿ ಗೆಲುವು
2024 ರ ಲೋಕಸಭೆ ಚುನಾವಣೆ ನಂತರ ನಡೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸಂಪೂರ್ಣ ಬಹುಮತದ ಗೆಲುವು ಪಡೆದಿರುವ ಬಿಜೆಪಿಯ ಗೆಲುವಿನ ಅಶ್ವಮೇಧ ಕುದುರೆಯನ್ನು ಸದ್ಯಕ್ಕಂತೂ ಯಾರೂ ಕಟ್ಟಿ ಹಾಕುವ ಲಕ್ಷಣ ಇಲ್ಲ. ಈ ಗೆಲುವು ಮುಂದಿನ ರಾಜ್ಯಸಭೆ ಬಹುಮತ, ರಾಷ್ಟ್ರಪತಿ ಚುನಾವಣಾ ಗೆಲುವಿಗೆ ಮುನ್ನುಡಿ ಬರೆದಬಹುದೇ, ಈ ಬಗ್ಗೆ ಇಲ್ಲಿದೆ ನೋಡಿ.

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದು ಮೊನ್ನೆ ಹೊರಬಿದ್ದಿದ್ದ ಮತಗಟ್ಟೆ ಸಮೀಕ್ಷೆಯ ಫಲಿತಾಂಶವನ್ನು ಹೋಲುವಂತಿದೆ. ಬಿಜೆಪಿ 48 ಸೀಟು ಮತ್ತು ಆಮ್ ಆದ್ಮಿ ಪಕ್ಷ 22 ಸೀಟು ಪಡೆದು, ಕಾಂಗ್ರೆಸ್‌ಗೆ ಯಾವ ಸ್ಥಾನವನ್ನೂ ನೀಡದಿರುವ ಸಾಧ್ಯತೆಯನ್ನು ಈ ಸಮೀಕ್ಷೆಗಳು ಮೊನ್ನೆಯೇ ಹೇಳಿದ್ದವು. ಆದರೂ, ಕಾಂಗ್ರೆಸ್ ಪಕ್ಷ ಮಾತ್ರ ಕನಿಷ್ಠ ಎರಡು ಸೀಟನ್ನಾದರೂ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿತ್ತು. ಆದರೆ ಅದು ಕೊನೆಗೂ ಫಲಿಸದೇ ನೆಲ ಕಚ್ಚುವಂತಾಗಿದೆ.
ಈ ಬಾರಿ, ಎಕ್ಸಿಸ್ ಮೈ ಇಂಡಿಯಾ ಹಾಗೂ ಇನ್ನೂ ಅನೇಕ ಸಂಸ್ಥೆಗಳು, ಚುನಾವಣೆ ಮುಗಿದ ಒಂದು ಗಂಟೆಯೊಳಗೆ ತಮ್ಮ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ನೀಡಿರಲಿಲ್ಲ. ಒಂದು ದಿನ ಕಾದು, ಕೆಲವು ಕಡೆ ಮತ್ತೊಮ್ಮೆ ಮರು ಸಮೀಕ್ಷೆ ಮಾಡಿ ತಮ್ಮ ವಿವೇಚನಾಯುತವಾದ ವಿಶ್ಲೇಷಣೆಯ ವಿವರವನ್ನು ನೀಡಿದ್ದವು. ಸ್ವತಃ ಅರವಿಂದ್ ಕೇಜ್ರಿವಾಲ್ ಅವರು ನಿಂತಿದ್ದ ಹೊಸ ದೆಹಲಿ ಕ್ಷೇತ್ರದಲ್ಲಿ, ಮರು ದಿನ ಮತ್ತೊಮ್ಮೆ ಸಮೀಕ್ಷೆ ನಡೆಸಿ, ಆಮ್ ಆದ್ಮಿ ಪಕ್ಷದ ನೇತಾರನ ಸೋಲಿನ ಬಗ್ಗೆ ಖಚಿತಪಡಿಸಿಕೊಂಡಿದ್ದವು. ಈ ದೃಷ್ಟಿಯಿಂದ ಈ ಚುನಾವಣಾ ಫಲಿತಾಂಶದ ‘ಭವಿಷ್ಯ’ ಮೊನ್ನೆಯೇ ಬಂದಿದ್ದು ಗಮನಾರ್ಹ ಸಂಗತಿ.
ದೆಹಲಿಯ ಜನರನ್ನು ಓಲೈಸಲು, ಮೂರು ಪಕ್ಷಗಳಾದ, ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಪಕ್ಷ ಸ್ಪರ್ಧೆಗಿಳಿದಿದ್ದವು.
ಬಿಜೆಪಿ ಪ್ರಣಾಳಿಕೆ: ಗರ್ಭಿಣಿಯರಿಗೆ 21,000 ರೂ. ಮತ್ತು 6 ತಿಂಗಳು ಪೌಷ್ಠಿಕಾಂಶ ಪದಾರ್ಥಗಳ ಕಿಟ್‌ಗಳನ್ನು ನೀಡಲಾಗುವುದು. ಮೊದಲ ಮಗುವಿಗೆ 5,000 ರೂ. ಮತ್ತು ಎರಡನೇ ಮಗುವಿಗೆ 6,000 ರೂ. ನೀಡಲಾಗುವುದು ಎಂದು ಘೋಷಿಸಿದೆ. ರಾಜಧಾನಿ ದೆಹಲಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ, 1,700ಕ್ಕೂ ಹೆಚ್ಚು ಅನಧಿಕೃತ ವಸಾಹತುಗಳನ್ನು ಕ್ರಮಬದ್ಧಗೊಳಿಸುವುದು, ನ್ಯಾಯಾಂಗ ಪ್ರಾಧಿಕಾರದ ಮೂಲಕ 1,300 ಸೀಲ್ ಮಾಡಲಾದ ಅಂಗಡಿಗಳನ್ನು ಪುನಃ ತೆರೆಯುವುದು ಮತ್ತು ಗುತ್ತಿಗೆ ಪಡೆದ ಆಸ್ತಿಗಳಲ್ಲಿ ವಾಸಿಸುವ ಪಾಕಿಸ್ತಾನಿ ನಿರಾಶ್ರಿತರಿಗೆ ಮಾಲೀಕತ್ವದ ಹಕ್ಕು ನೀಡುವುದು ಬಿಜೆಪಿಯ ಪ್ರಣಾಳಿಕೆಯ ಮುಖ್ಯಾಂಶಗಳು.
ಆಪ್ ಪ್ರಣಾಳಿಕೆ: ಈಗ ಜಾರಿಯಲ್ಲಿರುವ ಅನೇಕ ಕಾರ್ಯಕ್ರಮಗಳ ಜೊತೆಗೆ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮತ್ತು ಇನ್ನಿತರೆ ಸೌಲಭ್ಯಗಳ ಜೊತೆಗೆ ಆಟೋ ಚಾಲಕರಿಗಾಗಿ 5 ಗ್ಯಾರಂಟಿ, ಆಟೋ ಚಾಲಕನ ಮಗಳ ಮದುವೆಗೆ ಒಂದು ಲಕ್ಷ ರೂ., ದೀಪಾವಳಿ ಮತ್ತು ಹೋಳಿ ಹಬ್ಬದಂದು ಆಟೋ ಚಾಲಕರಿಗೆ ಸಮವಸ್ತ್ರವನ್ನು ಪಡೆಯಲು ತಲಾ 2500 ರೂ., ಪ್ರತಿ ಆಟೋ ಚಾಲಕನಿಗೆ 10 ಲಕ್ಷ ರೂ. ಜೀವ ವಿಮೆ ಮತ್ತು 5 ಲಕ್ಷ ರೂ. ಅಪಘಾತ ವಿಮೆ ನೀಡುತ್ತೇವೆ. ಆಟೋ ಚಾಲಕರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರಕಾರವೇ ಶುಲ್ಕ ನೀಡುವ ಭರವಸೆ ನೀಡಿತ್ತು.
ಕಾಂಗ್ರೆಸ್ ಪಟ್ಟಿ: ‘ಜೀವನ ರಕ್ಷಾ ಯೋಜನೆ’ಯಡಿ, ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ 25 ಲಕ್ಷ ರೂ. ಆರೋಗ್ಯ ವಿಮೆ ನೀಡುವುದು. ‘ಪ್ಯಾರಿ ದೀದಿ’ ಯೋಜನೆಯಡಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವುದು.
ಇದನ್ನೂ ಓದಿ: ಸುಳ್ಳಿನ ಆಡಳಿತದ ಅಂತ್ಯ; ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಅಮಿತ್ ಶಾ ಸಂತಸ
‘ರೇವ್‌ಡಿ’ ಸಂಸ್ಕೃತಿ ಬೇಡ ಬೇಡ ಎನ್ನುತ್ತಲೇ, ಸ್ಪರ್ಧೆಗಿಳಿದ ರಾಜಕೀಯ ಪಕ್ಷಗಳು ಒಂದರ ಮೇಲೊಂದರಂತೆ ಕಂತಿನಲ್ಲಿ ಆಶ್ವಾಸನೆ ಕೊಟ್ಟರೂ, ಮತದಾರರು ಹರಿಯಾಣ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬಿಜೆಪಿಯ ಕೈ ಹಿಡಿದಿದ್ದೇಕೆ? ವಿರೋಧ ಪಕ್ಷಗಳ ಆಶ್ವಾಸನೆ ಮತದಾರರ ಮನ ಗೆಲ್ಲಲು ಸಾಧ್ಯವಾಗಿಲ್ಲ ಏಕೆ? ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ತನ್ನ ಸ್ವಂತ ಹೆಸರಿನಲ್ಲಿ ಆಶ್ವಾಸನೆ ನೀಡುತ್ತ ಬಂದಿದ್ದು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸಕ್ಕಿಳಿದಿದ್ದು ಪ್ರಮುಖ ಅಂಶವಾಗಿತ್ತು. ಕಳೆದ ವಾರ ನೀಡಿದ ಕೇಂದ್ರದ ಬಜೆಟ್‌ಲ್ಲಿ ಘೋಷಿಸಿದ ಆದಾಯ ತೆರಿಗೆ ವಿನಾಯಿತಿಯ ಅಂಶ ದೆಹಲಿಯಲ್ಲಿ ಕೆಲಸ ಮಾಡಿದಂತಿದೆ. ಯಾಕೆಂದರೆ, ಸಿಎಸ್‌ಡಿ ಎಸ್ ಮತ್ತು ಸಿ-ವೋಟರ್ ಸಮೀಕ್ಷೆಗಳ ಪ್ರಕಾರ, ಈ ಬಾರಿ ದೆಹಲಿಯಲ್ಲಿ 51 ಪ್ರತಿಶತ ಗಂಡಸರು ಬಿಜೆಪಿಗೆ ಮತ ಹಾಕಿದ್ದಾರೆ ಎಂದರೆ, ಬಜೆಟ್‌ನ ವಿಚಾರ ಕೆಲಸ ಮಾಡಿರುವಂತಿದೆ. ಮೋದಿ ಇಲ್ಲೂ ಕೂಡ ತಮ್ಮ ಹೆಸರಿನಲ್ಲಿಯೇ ಆಶ್ವಾಸನೆ ನೀಡಿದ್ದಾರೆ. ರಾಹುಲ್ ಗಾಂಧಿ, ಕೇಜ್ರೀವಾಲ್ ಕೂಡ ತಮ್ಮ ಹೆಸರಿನಲ್ಲೇ ಆಶ್ವಾಸನೆ ನೀಡಿದ್ದರೂ ಅವರ ಓಲೈಕೆಗೆ ಮತದಾರರು ಓಗೊಡಲಿಲ್ಲ? ರಾಹುಲ್ ಗಾಂಧಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡು ಇನ್ನೂ ಸೀರಿಯಸ್ ರಾಜಕಾರಣಿ ಎಂಬುದನ್ನು ನಿರೂಪಿಸಲು ವಿಫಲವಾಗಿದ್ದು, ಕೇಜ್ರಿವಾಲ್ ಮತ್ತು ಅವರ ತಂಡದ ಮೇಲೆ ಬಂದ ಭ್ರಷ್ಟಾಚಾರದ ಗಂಭೀರ ಆರೋಪ ಜನರನ್ನು ಕೆರಳಿಸಿದಂತಿದೆ. ಇದೇ ಕಾರಣಕ್ಕೆ, ಮೂರು ಪಕ್ಷಗಳು ರೇವ್‌ಡಿ ಸಂಸ್ಕೃತಿಯ ಕೆಳಗೆ ಆಶ್ವಾಸನೆ ನೀಡಿದ್ದರೂ, ಮತದಾರರು ಮಾತ್ರ ಬಿಜೆಪಿ ಆಶ್ವಾಸನೆಗೆ ಮತ ಹಾಕುತ್ತಿದ್ದಾರೆ. ಮಹಾರಾಷ್ಟ್ರ ಹರಿಯಾಣ ಮತ್ತು ಈಗ ದೆಹಲಿಯಲ್ಲಿ ಅದು ನಿರೂಪಿತವಾದಂತಿದೆ, ಅಂದರೆ ಮೋದಿ ಮ್ಯಾಜಿಕ್ ಆಗಿದೆ ಎಂದರ್ಥ. ಇನ್ನೂವರೆಗೂ ಮೋದಿ ಮೇಲೆ ಗಂಭೀರ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪವನ್ನು ನಿರೂಪಿಸಲಾಗದೇ, ಪ್ರತಿ ಬಾರಿಯೂ ಇಂತಹ ಕೇಸನ್ನು ತೆಗೆದುಕೊಂಡು ಹೋಗಿ ಸುಪ್ರೀಂ ಕೋರ್ಟ್‌ನಲ್ಲಿ ತಪರಾಕಿ ತಿಂದು ಹೊರಬರುತ್ತಿರುವ ವಿರೋಧ ಪಕ್ಷಗಳು, ಅತಿರಂಜಿತ ವಾಸ್ತವದ ಗುಂಗಿನಿಂದ ಹೊರಬರಲೇಬೇಕಾಗಿದೆ. ಅವರ ಗುಂಗಿನಲ್ಲಿ ಏನಿತ್ತು ಎಂದರೆ ಮುಂದಿನ ವರ್ಷ ನಡೆಯುವ ರಾಷ್ರಪತಿ ಚುನಾವಣೆಯಲ್ಲಿತಾವೇ ಗೆಲ್ಲೋದು, ಆಡಳಿತ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಬಹಮತ ಸಿಗದಂತೆ ಮಾಡುವುದು, ಇತ್ಯಾದಿ ಇತ್ಯಾದಿ. ದೆಹಲಿ ಚುನಾವಣೆ ನಂತರ ನೋಡುವುದಾದಲ್ಲಿ, ಈ ಎರಡೂ ವಿಚಾರಗಳಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸುವ ಸಾಧ್ಯತೆ ನಿಚ್ಚಳವಾಗಿ ಕಾಣುತ್ತಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Sat, 8 February 25