ಅಹಮದಾಬಾದ್: ಬಿಜೆಪಿಯ(BJP) ಪ್ರದೀಪ್‌ಸಿಂಗ್ ವಘೇಲಾ (Pradipsinh Vaghela) ಇಂದು (ಶನಿವಾರ) ಗುಜರಾತ್ (Gujarat) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ. “ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ” ಎಂದು ಅವರು ಅಲ್ಲಿನ ಜನರಲ್ಲಿ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ವಘೇಲಾ ಅವರನ್ನು ಆಗಸ್ಟ್ 10, 2016 ರಂದು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ವಘೇಲಾ ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಹೊಡೆತವಾಗಿದೆ. ಸಮೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು, ಗುಜರಾತ್ ಬಿಜೆಪಿ ಇತ್ತೀಚೆಗೆ ‘ಮಹಾ ಜನ ಸಂಪರ್ಕ ಅಭಿಯಾನ’ ಅಥವಾ ಸಾಮೂಹಿಕ ಸಂಪರ್ಕ ಕಾರ್ಯಕ್ರಮವನ್ನು ನಡೆಸಿತು. ಇದರಲ್ಲಿ ತಜ್ಞರ ಸಭೆ ಮತ್ತು ವಿವಿಧ ವ್ಯಾಪಾರ ಸಮುದಾಯಗಳ ಸಮಾವೇಶಗಳನ್ನು ಇತರ ವಿಷಯಗಳ ಜೊತೆಗೆ ಆಯೋಜಿಸಿತು.
ಈ ಸಾಮೂಹಿಕ ಪ್ರಚಾರದ ಉಪಕ್ರಮದ ಅಡಿಯಲ್ಲಿ, ಪಕ್ಷವು ಬೌದ್ಧಿಕ ನಾಗರಿಕರ 100 ಕೂಟಗಳು, ವಿವಿಧ ವ್ಯಾಪಾರ ಸಮುದಾಯಗಳ ಸಮಾವೇಶಗಳು, ರಾಜ್ಯ ಬಿಜೆಪಿಯ ವಿವಿಧ ಕೋಶಗಳಿಂದ ಕಾರ್ಯಕ್ರಮಗಳು ಮತ್ತು ಎಲ್ಲಾ 26 ಲೋಕಸಭಾ ಕ್ಷೇತ್ರಗಳಲ್ಲಿ ದೊಡ್ಡ ರ್ಯಾಲಿಗಳನ್ನು ಆಯೋಜಿಸಿದೆ.
2024 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಬಿಜೆಪಿ ತನ್ನ ಕೇಂದ್ರ ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ಮತ್ತು ಹೊಸ ಸೇರ್ಪಡೆಗಳನ್ನು ಮಾಡಿದೆ.
ವಘೇಲಾ ಅವರು ಗಾಂಧಿನಗರದಲ್ಲಿರುವ ಪಕ್ಷದ ರಾಜ್ಯ ಪ್ರಧಾನ ಕಚೇರಿಯಾದ ಶ್ರೀ ಕಮಲಂನ ಉಸ್ತುವಾರಿಯನ್ನೂ ಹೊತ್ತಿದ್ದರು.
ದಕ್ಷಿಣ ಗುಜರಾತ್‌ನಲ್ಲಿ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್ ವಿರುದ್ಧ ಬಂಡಾಯವೆದ್ದಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಈ ವಾರದ ಆರಂಭದಲ್ಲಿ ದಕ್ಷಿಣ ಗುಜರಾತ್‌ನ ಮೂವರು ಪಕ್ಷದ ಕಾರ್ಯಕರ್ತರನ್ನು ಸೂರತ್ ಕ್ರೈಂ ಬ್ರಾಂಚ್ ಬಂಧಿಸಿತ್ತು. ವಿವಿಧ ಪಕ್ಷದ ನಾಯಕರಿಗೆ ಖಾತೆ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎಂದು ಪಾಟೀಲ್ ಮೇಲೆ ಆರೋಪ ಹೊರಿಸಿ ಮಾನಹಾನಿ ಮಾಡಿದ ಆರೋಪದಲ್ಲಿ ಇವರನ್ನು ಬಂದಿಸಲಾಗಿತ್ತು. ಚೋರಿಯಾಸಿ ಕ್ಷೇತ್ರದ ಬಿಜೆಪಿ ಶಾಸಕ ಸಂದೀಪ್ ದೇಸಾಯಿ ಅವರು ಎಫ್‌ಐಆರ್ ದಾಖಲಿಸಿದ ನಂತರ ಈ ಬಂಧನಗಳು ನಡೆದಿವೆ.
ಇದನ್ನೂ ಓದಿ: ಹರ್ಯಾಣದ ನುಹ್ನಲ್ಲಿ ಮೂರನೇ ದಿನವೂ ಬುಲ್ಡೋಜರ್ ಕ್ರಮ; 2 ಡಜನ್ ಮೆಡಿಕಲ್ ಸ್ಟೋರ್‌ಗಳು ನೆಲಸಮ
ಕಳೆದ ತಿಂಗಳು ಇದೇ ರೀತಿಯ ಪ್ರಕರಣದಲ್ಲಿ, ಪಾಟೀಲ್ ಅವರ ಪ್ರತಿಷ್ಠೆಗೆ ಮಾನಹಾನಿ ಮಾಡಿದ ಪ್ರಕರಣದಲ್ಲಿ ಜಿನೇಂದ್ರ ಶಾ ಅವರನ್ನು ಸೂರತ್ ಕ್ರೈಂ ಬ್ರಾಂಚ್ ಬಂಧಿಸಿತ್ತು.
ಪಾಟೀಲ್ ನೇತೃತ್ವದಲ್ಲಿ ರಾಜ್ಯ ಸಂಘಟನೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಪ್ರಬಲ ಹುದ್ದೆ ಕಳೆದುಕೊಂಡಿರುವುದು ಇದು ಎರಡನೇ ಬಾರಿ. ಈ ವರ್ಷದ ಏಪ್ರಿಲ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಭಾರ್ಗವ್ ಭಟ್ ಅವರನ್ನು ಪಕ್ಷದ ಹೈಕಮಾಂಡ್ ಉನ್ನತ ಹುದ್ದೆಯಿಂದ ಬಿಡುಗಡೆ ಮಾಡಿತ್ತು. ಹುದ್ದೆ ಇನ್ನೂ ಖಾಲಿ ಇದೆ.
ಗುಜರಾತ್ ಬಿಜೆಪಿ ನಾಲ್ಕು ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ಹೊಂದಿದೆ. ವಘೇಲಾ ರಾಜೀನಾಮೆಯೊಂದಿಗೆ, ಪಕ್ಷದಲ್ಲೀಗ ರಜನಿ ಪಟೇಲ್ ಮತ್ತು ವಿನೋದ್ ಚಾವ್ಡಾ ಎಂಬ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ಮಾತ್ರ ಇದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Sat, 5 August 23