
ನವದೆಹಲಿ, ಡಿಸೆಂಬರ್ 21: ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷ ಅಸ್ಸಾಂ ಹಾಗೂ ಈಶಾನ್ಯ ಪ್ರದೇಶಗಳನ್ನು ಕಡೆಗಣಿಸಿದೆ. ವಲಸಿಗರನ್ನು ಬರಲು ಬಿಟ್ಟು ಪ್ರಾದೇಶೀಕ ಭದ್ರತೆಗೆ ಧಕ್ಕೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಭಾನುವಾರ ತಿರುಗೇಟು ನೀಡಿದ್ದಾರೆ. ಅಸ್ಸಾಮ್ನಲ್ಲಿ ಡಬಲ್ ಎಂಜಿನ್ ಸರ್ಕಾರ ಹೊಂದಿರುವ ಬಿಜೆಪಿ, ಆ ರಾಜ್ಯದಲ್ಲಿ ಆಗಿರುವ ತನ್ನ ವೈಫಲ್ಯಗಳಿಗೆ ಜವಾಬ್ದಾರಿ ಹೊರುವುದು ಬಿಟ್ಟು ವಿಪಕ್ಷಗಳತ್ತಲೇ ಬೊಟ್ಟು ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅವರು ಅದ್ಹೇಗೆ ವಿಪಕ್ಷಗಳ ಮೇಲೆ ಆಪಾದಿಸುತ್ತಾರೆ? ಕೇಂದ್ರದಲ್ಲಿ ಅವರ ಸರ್ಕಾರ ಇದೆ. ಅಸ್ಸಾಮ್ನಲ್ಲೂ ಅವರದ್ದೇ ಸರ್ಕಾರ ಇದೆ. ಡಬಲ್ ಎಂಜಿನ್ ಸರ್ಕಾರ ಆಗಿದೆ. ಅವರು ರಾಜ್ಯವನ್ನು ರಕ್ಷಿಸಲು ವಿಫಲರಾದರೆ, ವಿಪಕ್ಷಗಳನ್ನು ಹೇಗೆ ದೂಷಿಸುತ್ತಾರೆ? ನಾವಾ ಅಲ್ಲಿ ಆಡಳಿತ ನಡೆಸುತ್ತಿರುವುದು?’ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ
ಪ್ರಧಾನಿ ಮೋದಿ ಅವರಿಗೆ ತಮ್ಮ ಸರ್ಕಾರ ವಿಫಲ ಆದಾಗೆಲ್ಲಾ ಎಲ್ಲಾ ಸಮಸ್ಯೆಗಳಿಗೆ ವಿಪಕ್ಷಗಳನ್ನು ದೂಷಿಸುವುದನ್ನೇ ಪರಿಪಾಟವಾಗಿ ಹೋಗಿದೆ ಎಂದೂ ಖರ್ಗೆ ಆರೋಪಿಸಿದ್ದಾರೆ.
‘ಅವರು ವಿಫಲರಾದಾಗ ಎಲ್ಲವನ್ನೂ ವಿಪಕ್ಷಗಳ ತಲೆ ಮೇಲೆ ಹಾಕುತ್ತಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ದೇಶದ್ರೋಹಿಗಳು ಅವರೇ ಹೊರತು ನಾವಲ್ಲ. ನಾವ್ಯಾರನ್ನೂ ರಕ್ಷಿಸುತ್ತಲ್ಲ. ದೇಶದ ಹಿತಕ್ಕೆ ಏನು ಒಳ್ಳೆಯದೋ ಅದನ್ನು ಮಾಡುತ್ತೇವೆ. ಭಯೋತ್ಪಾದಕರನ್ನೂ ಅಥವಾ ನುಸುಳುಕೋರರನ್ನೋ ಅಥವಾ ಇನ್ನಾರನ್ನೋ ನಾವು ಬೆಂಬಲಿಸುವುದಿಲ್ಲ. ಇವರನ್ನು ನಿಗ್ರಹಿಸಲು ವಿಫಲರಾಗಿದ್ದಕ್ಕೆ ನಮ್ಮನ್ನು ದೂಷಿಸುತ್ತಿದ್ದಾರೆ ಅಷ್ಟೇ’ ಎಂದು ಕಾಂಗ್ರೆಸ್ ಅಧ್ಯಕ್ಷರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?
ನರೇಂದ್ರ ಮೋದಿ ಅವರು ನಿನ್ನೆ ಶನಿವಾರ (ಡಿ. 20) ಅಸ್ಸಾಮ್ ರಾಜಧಾನಿ ಗುವಾಹಟಿಯ ಏರ್ಪೋರ್ಟ್ನ ಹೊಸ ಟರ್ಮಿನಲ್ ಉದ್ಘಾಟನೆ ಮಾಡಿ ಮಾತನಾಡುತ್ತಾ, ಅಸ್ಸಾಮ್ ಹಾಗೂ ಈಶಾನ್ಯವನ್ನು ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸುತ್ತಾ ಬಂದಿತ್ತೆಂದು ಆಪಾದಿಸಿದ್ದರು.
ದಶಕಗಳ ಕಾಲ ಈಶಾನ್ಯ ಪ್ರದೇಶಗಳಿಗೆ ನುಸುಳುಕೋರರನ್ನು ಬರಲು ಬಿಟ್ಟು ಅಲ್ಲಿನ ಭದ್ರತೆ ಮತ್ತು ಸಾಂಸ್ಕೃತಿಕ ಗುರುತನ್ನು ದುರ್ಬಲಗೊಳಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಮೋದಿ ಹೇಳೀದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ