ಬಿಹಾರದ ಮುಜಾಫರ್ಪುರದ ನ್ಯೂಡಲ್ಸ್ ತಯಾರಿಕಾ ಕಂಪನಿಯೊಂದರಲ್ಲಿ ಬಾಯ್ಲರ್ ಸ್ಫೋಟವುಂಟಾಗಿ 6 ಕಾರ್ಮಿಕರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾಯ್ಲರ್ ಸ್ಫೋಟಿಸುವ ಸಂದರ್ಭದಲ್ಲಿ ಫ್ಯಾಕ್ಟರಿಯಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮೃತಪಟ್ಟವರನ್ನು ಗುರುತಿಸುವ ಕೆಲಸ ಇನ್ನೂ ನಡೆಯುತ್ತಿದೆ.
ಕಾರ್ಖಾನೆಯಲ್ಲಿ ಉಂಟಾದ ಸ್ಫೋಟ ಪ್ರಬಲವಾಗಿದ್ದು, ಅದರ ಶಬ್ದ ಸುಮಾರು 5 ಕಿಮೀ ದೂರದವರೆಗೆ ಕೇಳಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾರ್ಖಾನೆಯ ಬೆಂಕಿ ನಂದಿಸಲು ಸುಮಾರು 5 ಅಗ್ನಿಶಾಮಕದಳಗಳು ಸ್ಥಳಕ್ಕೆ ಧಾವಿಸಿವೆ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ರಭಸಕ್ಕೆ ಅಲ್ಲಿಯೇ ಸುತ್ತಮುತ್ತ ಇದ್ದ ಕೆಲವು ಕಟ್ಟಡಗಳೂ ಧ್ವಂಸಗೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಯಾರನ್ನೂ ಹತ್ತಿರ ಬಿಡುತ್ತಿಲ್ಲ. ಸ್ಫೋಟಗೊಂಡು, ಧ್ವಂಸವಾದ ಬಾಯ್ಲರ್ನಿಂದ ಇನ್ನೂ ಹೊಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಬಿಹಾರ ಮುಖ್ಯಮಂತ್ರಿ ಘಟನೆ ಬಗ್ಗೆ ಸಂಪೂರ್ಣ ವಿವರ ತರಿಸಿಕೊಂಡಿದ್ದಾರೆ. ಹಾಗೇ, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದ್ದಾರೆ.
ಇದನ್ನೂ ಓದಿ: ಏರಲೇ ಇಲ್ಲ ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ಕಲೆಕ್ಷನ್; ಇದಕ್ಕೆ ಕಾರಣಗಳೇನು?
Published On - 3:44 pm, Sun, 26 December 21