5 ಜಿ ಕನೆಕ್ಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜೂಹಿ ಚಾವ್ಲಾ; ವರ್ಚುವಲ್ ವಿಚಾರಣೆಯ ವೇಳೆ ಸಿನಿಮಾ ಹಾಡು ಹಾಡಿದ ಅಭಿಮಾನಿಗೆ ನ್ಯಾಯಾಲಯದ ಎಚ್ಚರಿಕೆ

Juhi Chawla 5G Petition ನ್ಯಾಯಾಲಯದ ವಿಚಾರಣೆಯ ನಡುವೆ ಜೂಹಿ ಚಾವ್ಲಾ ಅವರ ಅಭಿಮಾನಿಯೊಬ್ಬರು ಆಕೆಯ ಬಗ್ಗೆ ವಿಚಾರಿಸಿ, "ಜೂಹಿ ಮ್ಯಾಮ್ ಎಲ್ಲಿ, ನನಗೆ ಜೂಹಿ ಮ್ಯಾಮ್ ಅವರು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

5 ಜಿ ಕನೆಕ್ಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜೂಹಿ ಚಾವ್ಲಾ; ವರ್ಚುವಲ್ ವಿಚಾರಣೆಯ ವೇಳೆ ಸಿನಿಮಾ ಹಾಡು ಹಾಡಿದ ಅಭಿಮಾನಿಗೆ ನ್ಯಾಯಾಲಯದ ಎಚ್ಚರಿಕೆ
ಜೂಹಿ ಚಾವ್ಲಾ (ಕೃಪೆ:ಟ್ವಿಟರ್)
Edited By:

Updated on: Jun 02, 2021 | 6:45 PM

ದೆಹಲಿ: ಬಾಲಿವುಡ್ ನಟಿ ಮತ್ತು ಪರಿಸರವಾದಿ ಜೂಹಿ ಚಾವ್ಲಾ ಅವರು ದೇಶದಲ್ಲಿ 5 ಜಿ ಟೆಲಿಕಾಂ ಸೇವೆಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು, ಬುಧವಾರ ಅರ್ಜಿ ವಿಚಾರಣೆ ವೇಳೆ ನಟಿಯ ಅಭಿಮಾನಿಯೊಬ್ಬರು ಸಿನಿಮಾ ಹಾಡು ಹಾಡಿದ್ದಾರೆ. ವರ್ಚುವಲ್ ವಿಚಾರಣೆ ನಡೆಯುತ್ತಿದ್ದಂತೆ ಅಭಿಮಾನಿಯೊಬ್ಬರು ಜೂಹಿ ನಟಿಸಿದ ಸಿನಿಮಾ ಹಾಡು ಹಾಡಿದ್ದಾರೆ. ಹೀಗಾಗಿ ವಿಚಾರಣೆಗೆ ಎರಡು ಬಾರಿ ಅಡ್ಡಿಯುಂಟಾಯಿತು. ವಿಚಾರಣೆಗೆ ಅಡ್ಡಿಪಡಿಸಿದ ವ್ಯಕ್ತಿಯ ಮೇಲೆ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.

ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಬುಧವಾರ ದೆಹಲಿ ಹೈಕೋರ್ಟ್ ಕೈಗೆತ್ತಿಕೊಂಡಿದ್ದು , ವರ್ಚುವಲ್ ವಿಚಾರಣೆಯ ಆರಂಭದಿಂದಲೇ ಅಡೆತಡೆಗಳುಂಟಾಯಿತು. ನ್ಯಾಯಾಲಯದ ವಿಚಾರಣೆಯ ನಡುವೆ ನಟಿಯ ಅಭಿಮಾನಿಯೊಬ್ಬರು ಆಕೆಯ ಬಗ್ಗೆ ವಿಚಾರಿಸಿ, “ಜೂಹಿ ಮ್ಯಾಮ್ ಎಲ್ಲಿ, ನನಗೆ ಜೂಹಿ ಮ್ಯಾಮ್ ಅವರು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಜೆ.ಆರ್. ಮಿಧಾ ಅವರು ಮೊದಲಿಗೆ ನ್ಯಾಯಾಲಯದ ಸಿಬ್ಬಂದಿಯನ್ನು ಸಂಬಂಧಪಟ್ಟ ವ್ಯಕ್ತಿಯನ್ನು ಮ್ಯೂಟ್ ಮಾಡಲು ಕೇಳಿಕೊಂಡರು. ಚಾವ್ಲಾ ಪರವಾಗಿ ಹಾಜರಾದ ದೀಪಕ್ ಖೋಸ್ಲಾ, ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು, “ಇವು ಪ್ರತಿವಾದಿಗಳ ಕಡೆಯಿಂದ ಉಂಟಾದ ಅಡೆತಡೆಯಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.


ನ್ಯಾಯಾಲಯದ ಎಚ್ಚರಿಕೆಗಳ ಹೊರತಾಗಿಯೂ ಅಭಿಮಾನಿ ಮುಂದುವರೆದಿದ್ದರಿಂದ, “ದಯವಿಟ್ಟು ಗುರುತಿಸಿ ನ್ಯಾಯಾಂಗ ನಿಂದನೆ ನೋಟಿಸ್ ನೀಡಿ. ದೆಹಲಿ ಪೊಲೀಸ್ ಐಟಿ ಇಲಾಖೆಯನ್ನು ಸಂಪರ್ಕಿಸಿ. ನಾವು ನೋಟಿಸ್ ನೀಡುತ್ತೇವೆ” ಎಂದು ನ್ಯಾಯಮೂರ್ತಿ ಮಿಧಾ ಹೇಳಿದ್ದಾರೆ.

ವಿಚಾರಣೆಯ ನಂತರ ಚಾವ್ಲಾ ಸ್ವತಃ ವಿಚಾರಣೆಗೆ ಲಿಂಕ್ ಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೂಹಿ ಅವರೇ ತಮ್ಮ ಇನ್​ಸ್ಟಾಗ್ರಾಮ್ ಮತ್ತು ಟ್ವಿಟರ್ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ವಿಚಾರಣೆಯ ವೇಳೆ ಜನರು ಕೂಡಾ ಸೇರಬಹುದು ಎಂದು ಆಹ್ವಾನಿಸಿದ್ದರು.

ಇದನ್ನೂ ಓದಿ: 5G ತಂತ್ರಜ್ಞಾನ ಭಾರತದಲ್ಲಿ ಜಾರಿ ಆಗಬಾರದೆಂದು ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ; ಆಕೆ ನೀಡಿದ ಕಾರಣಗಳು ಇಲ್ಲಿವೆ

 

Published On - 6:40 pm, Wed, 2 June 21