ಪಿಎಂ ಕೇರ್ಸ್​ ಯೋಜನೆ ಬಗ್ಗೆ ಪ್ರೆಸ್​ ನೋಟ್ ಬಿಟ್ಟು ಬೇರೆ ವಿವರವಿಲ್ಲ: ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ ಅಮಿಕಸ್ ಕ್ಯೂರಿ

ಪಿಎಂ ಕೇರ್ಸ್​ ಯೋಜನೆ ಬಗ್ಗೆ ಪ್ರೆಸ್​ ನೋಟ್ ಬಿಟ್ಟು ಬೇರೆ ವಿವರವಿಲ್ಲ: ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ ಅಮಿಕಸ್ ಕ್ಯೂರಿ
ಸುಪ್ರೀಂಕೋರ್ಟ್

ಕೇಂದ್ರ ಸರ್ಕಾರವು ಘೋಷಿಸಿರುವ ‘ಪಿಎಂ ಕೇರ್ಸ್​ ಫಾರ್ ಚಿಲ್ಡ್ರನ್’ ಯೋಜನೆಯ ವಿವರಗಳನ್ನು ನೀಡುವಂತೆ ಸುಪ್ರೀಂಕೋರ್ಟ್​ ಮಂಗಳವಾರ ಸೂಚಿಸಿದೆ. ಮೇ 29ರಂದು ಪ್ರಧಾನಿ ನರೇಂದ್ರ ಮೋದಿ ಕೊವಿಡ್​ನಿಂದ ಅನಾಥರಾದ ಮಕ್ಕಳಿಗಾಗಿ ಈ ಯೋಜನೆ ಘೋಷಿಸಿದ್ದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 02, 2021 | 10:42 PM

ದೆಹಲಿ: ಕೇಂದ್ರ ಸರ್ಕಾರವು ಘೋಷಿಸಿರುವ ‘ಪಿಎಂ ಕೇರ್ಸ್​ ಫಾರ್ ಚಿಲ್ಡ್ರನ್’ ಯೋಜನೆಯ ವಿವರಗಳನ್ನು ನೀಡುವಂತೆ ಸುಪ್ರೀಂಕೋರ್ಟ್​ ಮಂಗಳವಾರ ಸೂಚಿಸಿದೆ. ಮೇ 29ರಂದು ಪ್ರಧಾನಿ ನರೇಂದ್ರ ಮೋದಿ ಕೊವಿಡ್​ನಿಂದ ಅನಾಥರಾದ ಮಕ್ಕಳಿಗಾಗಿ ಈ ಯೋಜನೆ ಘೋಷಿಸಿದ್ದರು. ಅನಾಥ ಮಕ್ಕಳ ಬಗ್ಗೆ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಯೋಜನೆಯ ಬಗ್ಗೆ ಪತ್ರಿಕಾ ಹೇಳಿಕೆ ಹೊರತುಪಡಿಸಿದರೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ ಎಂದು ಅಮಿಕಸ್ ಕ್ಯೂರಿ ಗೌರವ್ ಅಗರ್​ವಾಲ್ ಹೇಳಿದರು.

ಯೋಜನೆಯ ಬಗ್ಗೆ ಹೆಚ್ಚುವರಿ ಸಾಲಿಸಿಟರ್ (ಎಎಸ್​ಜಿ) ಜನರಲ್ ಐಶ್ವರ್ಯಾ ಭತಿ ಯೋಜನೆಯ ಮಾಹಿತಿಯನ್ನು ಸುಪ್ರೀಂಕೋರ್ಟ್​ಗೆ ಒದಗಿಸುವ ಜವಾಬ್ದಾರಿ ಹೊತ್ತುಕೊಂಡಿರುವುದನ್ನು ಕೋರ್ಟ್​ ಗಮನಿಸಿತು. ಫಲಾನುಭವಿಗಳನ್ನು ಗುರುತಿಸುವುದು, ನಿಗಾವಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ಒದಗಿಸಬೇಕು ಕೋರ್ಟ್ ಹೇಳಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಿಸಿಕೊಂಡಿದ್ದ ಅಮಿಕಸ್ ಕ್ಯೂರಿ ಪಿಎಂ ಕೇರ್ಸ್​ ಫಾರ್​ ಚಿಲ್ಡರ್ನ್​ ಯೋಜನೆಯ ವಿವರಗಳನ್ನು ಎಎಸ್​ಜಿ ಒದಗಿಸಿಲ್ಲ ಎಂಬ ಸಂಗತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು. ಯೋಜನೆಯ ವಿವರಗಳನ್ನು ಒದಗಿಸಿಲ್ಲ ಎನ್ನುವುದನ್ನು ಗಮನಿಸಿದ ಅಮಿಕಸ್, ಎಲ್ಲ ವಿವರ ಒದಗಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಿನಂತಿಸಿದರು.

ಲಭ್ಯ ಮಾಹಿತಿ ಪ್ರಕಾರ ಕೊವಿಡ್​ನಿಂದ ತಂದೆ-ತಾಯಿಯನ್ನು ಅಥವಾ ತಮ್ಮನ್ನು ಪೋಷಿಸುತ್ತಿದ್ದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರ್ಕಾರ ಹಲವು ಸೌಲಭ್ಯ ಒದಗಿಸಲಿದೆ ಎಂದು ಅಮಿಕಸ್ ಕ್ಯೂರಿ ನೀಡಿದ ಮಾಹಿತಿಯನ್ನು ನ್ಯಾಯಪೀಠ ಪುನರುಚ್ಚರಿಸಿತು. ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ನಾಗೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರಿದ್ದ ವಿಭಾಗೀಯ ಪೀಠ ಇಂದು ಆರಂಭಿಸಿತು. ಈ ವೇಳೆ ಮಾಹಿತಿ

ಪತ್ರಿಕಾ ಹೇಳಿಕೆಯ ಪ್ರಕಾರ ಈ ಯೋಜನೆಯು ಇಂಥ ಮಕ್ಕಳು ಶಿಕ್ಷಣ ಮುಂದುವರಿಸಲು ನೆರವಾಗುತ್ತದೆ. ಪುಸ್ತಕ, ಸಮವಸ್ತ್ರ ಇತರ ಸೌಲಭ್ಯ ಒದಗಿಸಲಿದೆ. ಇದರ ಜೊತೆಗೆ ಉನ್ನತ ಶಿಕ್ಷಣಕ್ಕೆ ಹಣಕಾಸಿನ ನೆರವನ್ನೂ ಒದಗಿಸುತ್ತದೆ. ಮಗುವಿನ ಹೆಸರಿನಲ್ಲಿ ಎತ್ತಿಡುವ ₹ 10 ಲಕ್ಷ ಮೊತ್ತವನ್ನು ಆ ಹುಡುಗ ಅಥವಾ ಹುಡುಗಿ 23 ವರ್ಷದವರಾದಾಗ ಅವರಿಗೆ ಸಿಗುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಎಷ್ಟು ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂಬುದು ತಿಳಿದಿಲ್ಲ. ಭಾರತ ಸರ್ಕಾರವು ಈ ಯೋಜನೆಯನ್ನು ಹೇಗೆ ಜಾರಿ ಮಾಡಲಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಈ ಬಗ್ಗೆ ಎಎಸ್​ಜಿ ಮಾಹಿತಿ ನೀಡಬೇಕು’ ಎಂದು ಅಮಿಕಸ್ ಹೇಳಿದರು. ಭಾರತ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಎಎಸ್​ಜಿ ಭತಿ ಸಹ ಈ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಿಲ್ಲ. ಸರ್ಕಾರ ಈ ಬಗ್ಗೆ ನಿಯಮಗಳನ್ನು ರೂಪಿಸಬೇಕಿದೆ ಎಂದು ಹೇಳಿದರು. ‘ಸೋಮವಾರ ಪ್ರಕರಣವನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇವೆ. ನೀವು ಆಗ ನಮಗೆ ಮಾಹಿತಿ ಒದಗಿಸಬೇಕು’ ಎಂದು ನ್ಯಾಯಪೀಠ ಹೇಳಿತು.

ಮಕ್ಕಳ ರಕ್ಷಣಾ ಮಂದಿರದಲ್ಲಿ ಕೊವಿಡ್​ ಬಾಧಿತ ಮಕ್ಕಳನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿದೆ. ಮಾರ್ಚ್​ 2020ರ ನಂತರ ಅನಾಥರಾದ ಮಕ್ಕಳ ಮಾಹಿತಿಯನ್ನು ಎಲ್ಲ ಜಿಲ್ಲಾಡಳಿತಗಳು ಎನ್​ಸಿಪಿಸಿಆರ್​ ಬಾಲ್​ ಸ್ವರಾಜ್ ಪೋರ್ಟಲ್​ನಲ್ಲಿ ಅಪ್​ಡೇಟ್ ಮಾಡಬೇಕು ಎಂದು ಮೇ 28ರಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅನಾಥ ಮಕ್ಕಳಿಗೆ ಅಗತ್ಯ ನೆರವು ನೀಡಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.

(Give Details of PM CARES Scheme For Children Orphaned Due To COVID Asks Supreme Court to Government)

ಇದನ್ನೂ ಓದಿ: ದೇಶದಲ್ಲಿ ಕೊವಿಡ್​ನಿಂದ 577 ಮಕ್ಕಳು ಅನಾಥರಾಗಿದ್ದಾರೆ: ಸಚಿವೆ ಸ್ಮೃತಿ ಇರಾನಿ

ಇದನ್ನೂ ಓದಿ: ಕೊವಿಡ್​ನಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ ಫಂಡ್​ನಿಂದ ಪ್ರತಿ ತಿಂಗಳು ಸ್ಟೈಫಂಡ್, ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರ

Follow us on

Related Stories

Most Read Stories

Click on your DTH Provider to Add TV9 Kannada