ಕೃಷಿ ಕೆಲಸಕ್ಕೆ ಬಂದವರಿಗೆ ಡ್ರಗ್ಸ್: ಜೀತದಾಳುಗಳ ಸಂಕಷ್ಟ ಸ್ಥಿತಿಯ ಬಗ್ಗೆ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದ ಕೇಂದ್ರ ಗೃಹ ಇಲಾಖೆ

|

Updated on: Apr 02, 2021 | 4:53 PM

MHA Letter to Punjab Govt: ಕಳೆದ ವರ್ಷ ಸುಮಾರು 58 ಮಂದಿಯನ್ನು ಗಡಿ ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದು, ವಿಚಾರಣೆಗೆಂದು ಇತರ ಭದ್ರತಾ ದಳಗಳಿಗೆ ಒಪ್ಪಿಸಿದ್ದರು. ವಿಚಾರಣೆ ವೇಳೆ ಈ ಪೈಕಿ ಬಹುತೇಕರು ಮಾನಸಿಕ ಅಸ್ವಸ್ಥರಾಗಿರುವುದು ತಿಳಿದುಬಂದಿತ್ತು.

ಕೃಷಿ ಕೆಲಸಕ್ಕೆ ಬಂದವರಿಗೆ ಡ್ರಗ್ಸ್: ಜೀತದಾಳುಗಳ ಸಂಕಷ್ಟ ಸ್ಥಿತಿಯ ಬಗ್ಗೆ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದ ಕೇಂದ್ರ ಗೃಹ ಇಲಾಖೆ
ಹಸಿರು ಸಿರಿಯ ಕಣ್ಣೀರು... ಪಂಜಾಬ್​​ನಲ್ಲಿ ಕೃಷಿ ಜೀತದಾಳುಗಳಿಗೆ ಡ್ರಗ್ಸ್​ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ಉತ್ತರ ಪ್ರದೇಶ ಮತ್ತು ಬಿಹಾರಗಳಿಂದ ಕೆಲಸ ಹುಡುಕಿಕೊಂಡು ಬಂದಿರುವ ಬಡ ಕೃಷಿ ಕೂಲಿ ಕಾರ್ಮಿಕರಿಂದ ಹೆಚ್ಚಿನ ಅವಧಿ ಕೆಲಸ ಮಾಡಿಸಲೆಂದು ಡ್ರಗ್ಸ್​ ನೀಡಲಾಗುತ್ತಿದೆ. ಅವರನ್ನು ಬಲವಂತವಾಗಿ ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತಿದೆ. ಈ ವಿಷಯದ ಬಗ್ಗೆ ತುರ್ತಾಗಿ ಗಮನಹರಿಸಿ ಎಂದು ಕೇಂದ್ರ ಗೃಹ ವ್ಯವಹಾರಗಳ ಇಲಾಖೆ (Ministry of Home Affairs – MHA) ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದು, ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದೆ. ಪಂಜಾಬ್​ನ ಗಡಿ ಜಿಲ್ಲೆಗಳಲ್ಲಿ ಇಂಥ ಶೋಷಣೆ ಹೆಚ್ಚಾಗಿ ನಡೆಯುತ್ತಿದೆ ಎಂದೂ ಕೇಂದ್ರ ಗೃಹ ಇಲಾಖೆಯ ಪತ್ರ ಉಲ್ಲೇಖಿಸಿದೆ.

ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಬಡ ಕುಟುಂಬಗಳ ಹಿನ್ನೆಲೆಯ ಜನರಿಗೆ ಮಾನವಸಾಗಣೆದಾರರ ಗುಂಪುಗಳು ಉತ್ತಮ ಸಂಬಳ ಮತ್ತು ಜೀವನಶೈಲಿಯ ಆಮಿಷವೊಡ್ಡಿ ಪಂಜಾಬ್​ಗೆ ಕರೆತರುತ್ತವೆ. ಆದರೆ ಪಂಜಾಬ್​ನ ಹಳ್ಳಿಗಳನ್ನು ತಲುಪಿದ ನಂತರ ಈ ಕಾರ್ಮಿಕರಿಗೆ ಕಡಿಮೆ ಸಂಬಳಕೊಟ್ಟು, ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆಯು ಪಂಜಾಬ್​​ನ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮಾರ್ಚ್ 17ರಂದು ಬರೆದಿರುವ ಪತ್ರದಲ್ಲಿ ಹೇಳಿದೆ. ಈ ಪತ್ರದ ಪ್ರಮುಖ ಅಂಶಗಳನ್ನು ಪಿಟಿಐ ಸುದ್ದಿಸಂಸ್ಥೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಪತ್ರವನ್ನು ಪರಿಶೀಲಿಸಿದ್ದೇವೆ ಎಂದು ‘ಹಿಂದೂಸ್ತಾನ್ ಟೈಮ್ಸ್​’ನಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ಪತ್ರಿಕೆಯ ಪ್ರತಿನಿಧಿ ಸಹ ಹೇಳಿದ್ದಾರೆ.

ಹೊಲಗಳಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಿಸಬೇಕೆಂದು ಕೃಷಿ ಕಾರ್ಮಿಕರಿಗೆ ಆಗಾಗ ಡ್ರಗ್ಸ್​ ಕೊಡಲಾಗುತ್ತಿದೆ. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯಲ್ಲಿರುವ ಹಲವು ಆಯಾಮಗಳು ಮತ್ತು ಅಗಾಧತೆಯನ್ನು ಗಮನದಲ್ಲಿರಿಸಿಕೊಂಡು ಆದ್ಯತೆ ಮೇರೆಗೆ ಪರಿಹಾರ ಕ್ರಮಗಳನ್ನು ರೂಪಿಸಿ. ಮಾನವ ಕಳ್ಳಸಾಗಣೆ, ಜೀತ ಪದ್ಧತಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸಾಧ್ಯವಾದಷ್ಟೂ ಬೇಗ ವರದಿ ಕಾರ್ಯಪಾಲನೆ ವರದಿ ಸಲ್ಲಿಸಿ ಎಂದು ಕೇಂದ್ರ ಗೃಹ ಇಲಾಖೆಯು ಸೂಚಿಸಿದೆ.

ಉತ್ತಮ ವಾತಾವರಣದಲ್ಲಿ ಕೆಲಸ ಮಾಡಲು ಅವಕಾಶ ಮತ್ತು ಉತ್ತಮ ಸಂಬಳದ ಆಮಿಷವೊಡ್ಡಿ ಬಡವರನ್ನು ಸೆಳೆಯುವ ತಂತ್ರದ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಯು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಮೂಲಕ ಎಲ್ಲ ರಾಜ್ಯಗಳಿಗೂ ಸೂಚನೆ ಕಳಿಸಿದೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಛತ್ತೀಸಗಡ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಪಂಜಾಬ್​ನ ಗುರುದಾಸ್​ಪುರ, ಅಮೃತ್​ಸರ, ಫಿರೋಜ್​ಪುರ ಮತ್ತು ಅಬೊಹಾರ್​ ಪ್ರದೇಶದಲ್ಲಿ 2019 ಮತ್ತು 2020ರಲ್ಲಿ ಭದ್ರತಾ ಪಡೆಗಳ ಕೈಗೆ ಸಿಕ್ಕಿಬಿದ್ದವರ ವಿಚಾರಣೆ ವೇಳೆ ಇಂಥ ಹಲವು ಮನಕಲಕುವ ವಿಚಾರಗಳು ಬೆಳಕಿಗೆ ಬಂದಿದ್ದವು. ಪಾಕಿಸ್ತಾನದ ಗಡಿಯಲ್ಲಿ ಕಳೆದ ವರ್ಷ ಸುಮಾರು 58 ಮಂದಿಯನ್ನು ಗಡಿ ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದು, ವಿಚಾರಣೆಗೆಂದು ಇತರ ಭದ್ರತಾ ದಳಗಳಿಗೆ ಒಪ್ಪಿಸಿದ್ದರು.

ವಿಚಾರಣೆ ವೇಳೆ ಈ ಪೈಕಿ ಬಹುತೇಕರು ಮಾನಸಿಕ ಅಸ್ವಸ್ಥರಾಗಿರುವುದು ತಿಳಿದುಬಂದಿತ್ತು. ಇವರು ಎಲ್ಲಿಂದ ಬಂದರು ಎಂದು ಪತ್ತೆಹಚ್ಚಲು ಯತ್ನಿಸಿದಾಗ ಬಹುತೇಕರು ಪಂಜಾಬ್​​ನ ಗಡಿ ಪ್ರದೇಶದ ರೈತರ ಬಳಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ಸಂಗತಿ ಅರಿವಾಗಿತ್ತು. ನಂತರ ಅವರನ್ನು ಸ್ಥಳೀಯ ಪೊಲೀಸರು ಮುಂದಿನ ಕ್ರಮ ಜರುಗಿಸಿ, ಮೂಲ ಊರುಗಳಿಗೆ ಕಳಿಸಲು ಕ್ರಮವಹಿಸುತ್ತಿದ್ದರು ಎಂದು ಗೃಹ ಇಲಾಖೆಯು ಹೇಳಿದೆ.

(Bonded Labourers from Uttar Pradesh and Bihar given drugs to get more work from them MHA writes letter to Punjab government)

ಇದನ್ನೂ ಓದಿ: ಪಂಜಾಬ್ ಸರ್ಕಾರದಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ

ಇದನ್ನೂ ಓದಿ: IPL 2021: ಆರ್​ಸಿಬಿ ಮೇಲೆ ಪಂಜಾಬ್​ಗೆ ಸಿಕ್ಕಾಪಟ್ಟೆ ಲವ್.. ಬೆಂಗಳೂರು ತಂಡದ ಜೆರ್ಸಿ ಕಾಪಿ ಹೊಡೆದ ಕಿಂಗ್ಸ್​ಗೆ ಈಗ ಟ್ರೋಲಿಗರ ಕಾಟ!

Published On - 4:26 pm, Fri, 2 April 21