ಲಿಂಗ ತಾರತಮ್ಯ: 156 ದೇಶಗಳಲ್ಲಿ ಭಾರತಕ್ಕೆ 140ನೇ ಸ್ಥಾನ, ಇದೊಂದು ದೊಡ್ಡ ಕಪ್ಪುಚುಕ್ಕೆ

ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗಾನುಪಾತ ವರದಿ 2021 ಹೇಳುವ ಪ್ರಕಾರ ಲಿಂಗ ತಾರತಮ್ಯ ಇಲ್ಲವಾಗಿಸಲು ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ 195.4 ವರ್ಷ ಬೇಕು ಹಾಗೂ ಪಶ್ಚಿಮ ಯುರೋಪ್ ದೇಶಗಳಿಗೆ 52.1 ವರ್ಷ ಬೇಕು.

ಲಿಂಗ ತಾರತಮ್ಯ: 156 ದೇಶಗಳಲ್ಲಿ ಭಾರತಕ್ಕೆ 140ನೇ ಸ್ಥಾನ, ಇದೊಂದು ದೊಡ್ಡ ಕಪ್ಪುಚುಕ್ಕೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: ganapathi bhat

Apr 05, 2022 | 12:59 PM

ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗಾನುಪಾತ ವರದಿ 2021ರಲ್ಲಿ ಭಾರತ 28 ಸ್ಥಾನಗಳಷ್ಟು ಕುಸಿತ ಕಂಡಿದೆ. ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಕಳಪೆ ಪ್ರದರ್ಶನ ತೋರಿಸಿ, ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ ಹಾಗೂ ಮಯನ್ಮಾರ್​ಗಿಂತಲೂ ಹಿಂದಿದೆ. ಪಟ್ಟಿಯಲ್ಲಿರುವ 156 ದೇಶಗಳ ಪೈಕಿ ಭಾರತ 140ನೇ ಸ್ಥಾನದಲ್ಲಿದೆ. ವಿಶ್ವ ಆರ್ಥಿಕ ವೇದಿಕೆ ಬುಧವಾರ (ಮಾರ್ಚ್ 31) ಬಿಡುಗಡೆ ಮಾಡಿದ ವರದಿಯ ಪ್ರಕಾರ ದಕ್ಷಿಣ ಏಷ್ಯಾದ ರಾಷ್ಟ್ರಗಳು ಬಹಳ ಹಿಂದಿದೆ. ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ ಮಾತ್ರ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗಿಂತಲೂ ಹಿಂದಿದ್ದು ಉಳಿದೆಲ್ಲಾ ದೇಶಗಳು ಈ ಪಟ್ಟಿಯಲ್ಲಿ ಮುಂದಿವೆ.

ಕಳೆದ ವರ್ಷದ ಲೆಕ್ಕಾಚಾರಗಳನ್ನು ಗಮನಿಸಿದರೆ ಈ ವರ್ಷ ಬಹುತೇಕ ರಾಷ್ಟ್ರಗಳು ಆರ್ಥಿಕ ಕಾರ್ಯಕ್ಷಮತೆಯಲ್ಲಿ ಕಳಪೆಯಾಗಿ ಕಂಡಿವೆ. ಕಳೆದ ವರ್ಷದ ಪಟ್ಟಿಯೊಂದಿಗೆ ಈ ಬಾರಿಯ ಪಟ್ಟಿಯನ್ನು ಹೋಲಿಸಿದರೆ ಬಹುತೇಕ ದೇಶಗಳು ಆರ್ಥಿಕ ಸಮಾನತೆ ಕಾಪಾಡುವ ವಿಚಾರದಲ್ಲಿ ಹಿಂದುಳಿದಿರುವುದು ಅರಿವಿಗೆ ಬರುತ್ತದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಮಾನತೆಯ ಅಂತರ ಶೇ 68ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 0.6ರಷ್ಟು ಕಡಿಮೆಯಾಗಿದೆ. ದೊಡ್ಡದೇಶಗಳು ಆರ್ಥಿಕ ವಿಚಾರದಲ್ಲಿ ಲಿಂಗ ಸಮಾನತೆಗೆ ಗಮನ ನೀಡದಿರುವುದು ಈ ಕುಸಿತಕ್ಕೆ ಕಾರಣ. ಲಿಂಗ ತಾರತಮ್ಯ ಸರಿಯಾಗಲು 135.6 ವರ್ಷ ಬೇಕಾಗುತ್ತದೆ ಎಂದು ವರದಿಯು ಹೇಳಿದೆ.

ರಾಜಕಾರಣದಲ್ಲಿಯೂ ಲಿಂಗ ತಾರತಮ್ಯದ ಅಂತರ ಹೆಚ್ಚಾಗಿದೆ. ವಿಶ್ವದ ವಿವಿಧ ದೇಶಗಳ ಸಂಸತ್ತುಗಳಲ್ಲಿರುವ 35,500 ಸ್ಥಾನಗಳ ಪೈಕಿ ಮಹಿಳೆಯರು ಕೇವಲ ಶೇ 26.1ರಷ್ಟು ಸ್ಥಾನಗಳನ್ನು ಪಡೆದಿದ್ದಾರೆ.  ವಿವಿಧ ದೇಶಗಳ ಒಟ್ಟು  3,400 ಸಚಿವರ ಪೈಕಿ ಕೇವಲ ಶೇ 22.6ರಷ್ಟು ಮಾತ್ರ ಮಹಿಳೆಯರ ಪಾಲು. ಜ.15, 2021ರ ಪ್ರಕಾರ 81 ದೇಶಗಳಲ್ಲಿ ಮಹಿಳಾ ಮುಖ್ಯಸ್ಥರೇ ಇಲ್ಲ ಎಂದೂ ವರದಿ ತಿಳಿಸಿದೆ.

ಭಾರತ ಕೂಡ ರಾಜಕೀಯ ಸಬಲೀಕರಣ ಸೂಚ್ಯಂಕದಲ್ಲಿ ಶೇ 13.5 ಅಂಕಗಳಷ್ಟು ಇಳಿಕೆ ಕಂಡಿದೆ. ಮಹಿಳಾ ಮಂತ್ರಿಗಳ ಸೂಚ್ಯಂಕದಲ್ಲಿ 2019ರಲ್ಲಿ ಭಾರತ ಶೇ 23.1ರಷ್ಟು ಅಂಕ ಪಡೆದಿತ್ತು. ಈ ಪ್ರಮಾಣವು 2021ರ ಹೊತ್ತಿಗೆ ಕೇವಲ ಶೇ 9.1ಕ್ಕೆ ಬಂದಿದೆ. ಇತರ ದೇಶಗಳಿಗೆ ಹೋಲಿಸಿದರೆ ಇದು ಉತ್ತಮ ಪ್ರದರ್ಶನವೇ ಆಗಿದೆ ಎಂಬುದು ವಿಶೇಷ. ಅಂದರೆ, ರಾಜಕಾರಣದಲ್ಲಿ ಮಹಿಳಾ ಪಾತ್ರದ ಅಂಕಪಟ್ಟಿಯಲ್ಲಿ ಭಾರತ 51ನೇ ಸ್ಥಾನದಲ್ಲಿದೆ. ರಾಜ್ಯದ ಮುಖ್ಯಸ್ಥರಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ದೇಶಗಳ ಪೈಕಿ, ಕಳೆದ 50 ವರ್ಷಗಳಲ್ಲಿ ಬಾಂಗ್ಲಾದೇಶ ಮುಂಚೂಣಿಯಲ್ಲಿದೆ ಎಂದು ವರದಿ ತಿಳಿಸಿದೆ.

ಶಿಕ್ಷಣ ಸಾಧನೆಯಲ್ಲಿ ಭಾರತ 114ನೇ ಸ್ಥಾನದಲ್ಲಿದೆ. ಭಾರತದ ಅತಿ ಕಳಪೆ ಪ್ರದರ್ಶನ ಎಂದರೆ ಅದು ಆರೋಗ್ಯ ಮತ್ತು ಬದುಕುವ ವಿಧಾನದ ವಿಭಾಗದಲ್ಲಿ. ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಅವಕಾಶಗಳ ವಿಚಾರದಲ್ಲಿ ಈವರೆಗೆ ಜಾಗತಿಕವಾಗಿ ಮಹಿಳೆಯರಿಗೆ ಕೇವಲ ಶೇ 58.2ರಷ್ಟು ಮಾತ್ರ ಅವಕಾಶ ಸಿಕ್ಕಿದೆ ಎಂದು ವರದಿ ಹೇಳಿದೆ. ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ ಅತ್ಯಂತ ಹೆಚ್ಚು ಲಿಂಗಾನುಪಾತ ವ್ಯತ್ಯಾಸ ಹೊಂದಿರುವ ದೇಶಗಳಲ್ಲಿ ಇರಾನ್, ಪಾಕಿಸ್ತಾನ, ಭಾರತ, ಸಿರಿಯಾ, ಯೆಮನ್, ಇರಾಕ್ ಮತ್ತು ಅಫ್ಗಾನಿಸ್ತಾನ ದೇಶಗಳಿವೆ. ವರದಿ ಸೂಚಿಸುವ ಪ್ರಕಾರ, ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ ಲಿಂಗಾನುಪಾತದ ಅಂತರ ಭಾರತದಲ್ಲಿ ಈ ವರ್ಷ ಶೇ 3ರಷ್ಟು ಹೆಚ್ಚಿದೆ.

ವೃತ್ತಿ ಹಾಗೂ ತಾಂತ್ರಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಶೇ 29.2ರಷ್ಟು ಕುಸಿತ ಕಂಡಿದೆ. ಹಿರಿಯ ಮತ್ತು ವ್ಯವಸ್ಥಾಪಕ ಹುದ್ದೆಗಳಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ 14.6 ರಷ್ಟಿದೆ. ದೇಶದ ಶೇ 8.9ರಷ್ಟು ಪ್ರಮುಖ ವ್ಯವಹಾರ ಸಂಸ್ಥೆಗಳಲ್ಲಿ ಮಾತ್ರ ಮಹಿಳಾ ಮ್ಯಾನೇಜರ್​ಗಳು ಇದ್ದಾರೆ.

ಭಾರತದಲ್ಲಿ ಮಹಿಳೆಯರ ಆದಾಯ ಪ್ರಮಾಣ ಪುರುಷರ ಆದಾಯದ 5ನೇ 1 ಭಾಗದಷ್ಟಿದೆ. ಈ ವಿಭಾಗದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಆರೋಗ್ಯ ಹಾಗೂ ಬದುಕಿನ ವಿಭಾಗದಲ್ಲಿ ಭಾರತ 155ನೇ ಸ್ಥಾನದಲ್ಲಿದೆ. ಚೀನಾ ಕೂಡ ಈ ವಿಭಾಗದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಗಂಡು ಮಗು ಬೇಕು ಎಂಬ ಧೋರಣೆ ಹಾಗೂ ಲಿಂಗ ತಾರತಮ್ಯದಲ್ಲಿ ಮಕ್ಕಳನ್ನು ಸಾಕುವ ಕ್ರಮದಿಂದ ಈ ವ್ಯತ್ಯಾಸ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಚೀನಾದಲ್ಲಿ ಪ್ರತಿ ವರ್ಷ ಸುಮಾರು 12 ಲಕ್ಷ ಮತ್ತು ಭಾರತದಲ್ಲಿ ಸುಮಾರು 15 ಲಕ್ಷ ಸ್ತ್ರೀಭ್ರೂಣ ಹತ್ಯೆಯ ನಡೆಯುತ್ತಿದೆ. ವಿಶ್ವದ ಒಟ್ಟು ಸ್ತ್ರೀಭ್ರೂಣ ಹತ್ಯೆಯ ಅಂದಾಜು ಲೆಕ್ಕದಲ್ಲಿ ಭಾರತ ಮತ್ತು ಚೀನಾ ಶೇ 90ರಿಂದ 95ರಷ್ಟು ಪಾಲು ಪಡೆದಿವೆ.

ವರದಿ ಹೇಳುವ ಪ್ರಕಾರ ಲಿಂಗ ತಾರತಮ್ಯ ಇಲ್ಲವಾಗಿಸಲು ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ 195.4 ವರ್ಷ ಬೇಕು ಹಾಗೂ ಪಶ್ಚಿಮ ಯುರೋಪ್ ದೇಶಗಳಿಗೆ 52.1 ವರ್ಷ ಬೇಕು.

ಇದನ್ನೂ ಓದಿ: Body Shaming ; ಸುಮ್ಮನಿರುವುದು ಹೇಗೆ? : ಯಾವ ಕ್ಷೇತ್ರದಲ್ಲಿ ಮಹಿಳೆ ಸದೃಢವಾಗಿ ನಿಲ್ಲಬೇಕೋ ಅಲ್ಲೇ ವಿಕೃತಿ ತಾಂಡವವಾಡುತ್ತಿದೆ

ಇದನ್ನೂ ಓದಿ: ಅಕ್ಕಪಕ್ಕದವರ ನೀರಿನ ಬವಣೆ ತೀರಿಸಲು ಈ ಮಹಿಳೆ ಮಾಡಿದ್ದು ಸಾಹಸಗಾಥೆ! ಎರಡು ಬಾವಿ ತೋಡಿ ಸಾಹಸ ಮೆರೆದ 56 ವರ್ಷದ ಮಹಿಳೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada