ಸಾರ್ವಜನಿಕರ ಗಮನಕ್ಕೆ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ
ಕರ್ನಾಟಕದಲ್ಲಿ ಈ ಬಾರಿ ಬೇಸಿಗೆ ಬಿಸಿಲ ಪ್ರತಾಪ ಶುರುವಾಗಿದೆ. ಇದರಿಂದ ಜನರು ಆಚೆ ಬರಲು ಪರದಾಡುವಂತಾಗಿದೆ. ಇನ್ನು ಬಿಸಿಲಿನಿಂದ ಅನಾರೋಗ್ಯ ಕಾಡುವ ಆತಂಕ ಎದುರಾಗಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ರಾಜ್ಯ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ. ಹಾಗಾದ್ರೆ, ಯಾವ ಭಾಗದಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆಯಾಗಿದೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು (ಏಪ್ರಿಲ್. 02): ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣದ ಬಿಸಿಲ ತಾಪ ( Summer heat) ಕಂಡು ಬರುತ್ತಿದೆ. ಇದರಿಂದ ಈ ಬಿರು ಬೇಸಿಗೆಯಲ್ಲಿ (Summer) ಅವಧಿಯಲ್ಲಿ ಮಧ್ಯಾಹ್ನದ ನಂತರ ಕಚೇರಿಗಳಲ್ಲಿ ನೌಕರರು (government employees) ಕೆಲಸ ಮಾಡುವುದು ಕಷ್ಟಪಡುತ್ತಿದ್ದಾರೆ. ಹಾಗೇ ಸಾರ್ವಜನಿಕರು ಸಹ ಬಿಸಿಲಿ ಝಳಕ್ಕೆ ಹೆದರಿ ಆಚೆ ಬರುತ್ತಿಲ್ಲ. ಹೀಗಾಗಿ ನೌಕರರು ಹಾಗೂ ಜನರು ಹಿತದೃಷ್ಟಿಯಿಂದ ರಾಜ್ಯ ಸರ್ಕಾರಿ ಕಚೇರಿಗಳ (Government Office )ಸಮಯವನ್ನು ಬದಲಾವಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ (Kalyana Karnataka Region) 7 ಜಿಲ್ಲೆಗಳು ಹಾಗೂ ಕಿತ್ತೂರು ಕರ್ನಾಟಕದ 2 ಜಿಲ್ಲೆಗಳು ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇನ್ಮುಂದೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ.
ಏಪ್ರಿಲ್ ಮತ್ತು ಮೇ ಈ ಎರಡು ತಿಂಗಳು ಅವಧಿಯಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಳಗಿನ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕೆಲಸದ ಅವಧಿ ನಿಗದಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳು ಹಾಗೂ ಕಿತ್ತೂರು ಕರ್ನಾಕದ (ಬೆಳಗಾವಿ ವಿಭಾಗ) ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಬದಲಾವಣೆ ಅವಧಿ ಅನ್ವಯವಾಗಲಿದೆ.
ಇದನ್ನೂ ಓದಿ: ನೆತ್ತಿ ಸುಡುತ್ತಿರುವ ಬಿಸಲು: ವಿದ್ಯುತ್ ಅವಶ್ಯವಿಲ್ಲದ ಬಡವರ ಫ್ರಿಜ್ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ಕಳೆದ ಹಲವು ದಶಕಗಳಿಂದ ಬೇಸಿಗೆಯ ಕಚೇರಿ ಸಮಯದಲ್ಲಿ ಬದಲಾವಣೆ ಇತ್ತು. ಆದಾಗ್ಯೂ ಕಳೆದ 2 ವರ್ಷದಿಂದ ಎಲೆಕ್ಷನ್ ಹಾಗೂ ಇತರೆ ಕಾರಣಗಳಿಂದಾಗಿ ಸರ್ಕಾರಿ ಕಚೇರಿ ಸಮಯದ ಬದಲಾವಣೆ ಮಾಡಿರಲಿಲ್ಲ. ಈ ಸಂಬಂಧ ಈ ಬಾರಿಯೂ ಸಹ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಸಮಯದ ಬದಲಾವಣೆಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ, ಕಚೇರಿ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿದೆ.
ಈಗಾಗಲೇ ಕಲಬುರಗಿಯಲ್ಲಿ ಬೇಸಿಗೆಯ ಅತ್ಯಧಿಕ ತಾಪಮಾನ 42.8 ಡಿಗ್ರಿ ಸೆಲ್ಸಿಯಸ್ ದಾಖಲು ಆಗಿದೆ. ಜೊತೆಗೆ, ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನ ಕಳೆದ 15 ದಿನದಿಂದ ಸರಾಸರಿ 41 ಡಿಗ್ರಿ ದಾಖಲಾಗುತ್ತಿದೆ. ಇದರಿಂದ ಕಚೇರಿ ಕೆಲಸದ ಸಮಯ ಬದಲಾವಣೆಯಿಂದಾಗಿ ಸರ್ಕಾರಿ ನೌಕರರು, ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಇಬ್ಬರಿಗೂ ಅನುಕೂಲವಾಗಿದೆ.
ಇನ್ನು ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತಗಳು ಚುರುಕುಗೊಂಡಿರುವುದರಿಂದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Published On - 4:47 pm, Wed, 2 April 25