AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್​ನಲ್ಲಿ ಮತ್ತೆ ಟ್ರೆಂಡ್​ ಆಯ್ತು #BoycottChina​; ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ನೆಟ್ಟಿಗರು

ಎಲ್​ಎಸಿಯಲ್ಲಿ ಈಗ ಎಲ್ಲವೂ ಸರಿ ಆಗಿದೆಯಾ? ಅಲ್ಲಿ ಗಡಿತಂಟೆ ತೆಗೆಯುತ್ತಿರುವ ಚೀನಾ ಸುಮ್ಮನಾಗಿದೆಯಾ? ಗಲ್ವಾನ್​ನಲ್ಲಿ ಹುತಾತ್ಮರಾದ ಯೋಧರ ಮರಣಕ್ಕೆ ಪ್ರತೀಕಾರ ತೀರಿಸಿಕೊಂಡು ಮುಗಿಯಿತಾ? ಇಲ್ಲ.. ಇದ್ಯಾವುದೂ ಆಗದೆ ಹೇಗೆ ನೀವು ಮತ್ತೆ ಚೀನಾ ಕಂಪನಿಯೊಂದಿಗೇ ಒಪ್ಪಂದ ಮಾಡಿಕೊಂಡಿರಿ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ಟ್ವಿಟರ್​ನಲ್ಲಿ ಮತ್ತೆ ಟ್ರೆಂಡ್​ ಆಯ್ತು #BoycottChina​; ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ನೆಟ್ಟಿಗರು
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Jan 04, 2021 | 7:35 PM

Share

ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯಾಗಿ, ಭಾರತೀಯ ಯೋಧರು ಹುತಾತ್ಮರಾದ ಬಳಿಕ ದೇಶದಲ್ಲಿ ಚೀನಾ ವಿರೋಧಿ ಅಲೆ ಹೆಚ್ಚಾಗಿದೆ. ಯೋಧರ ಸಾವಿನ ಬೆನ್ನಲ್ಲೇ #BoycottChina ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತ್ತು. ಹಾಗೇ ಕೇಂದ್ರ ಸರ್ಕಾರವೂ ಚೀನಾದ ಟಿಕ್​​ಟಾಕ್​, ಶೇರ್​ ಇಟ್​ ಸೇರಿ ಹಲವು ಪ್ರಮುಖ ಆ್ಯಪ್​ಗಳನ್ನೂ ದೇಶದಲ್ಲಿ ನಿಷೇಧ ಮಾಡಿದೆ.

ಇಷ್ಟೆಲ್ಲ ಆದ ಮೇಲೆ ಕೂಡ ಇದೀಗ ಮತ್ತೆ ಟ್ವಿಟರ್​ನಲ್ಲಿ #BoycottChina  ಟ್ರೆಂಡ್ ಆಗುತ್ತಿದೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೊಂದು ಪ್ರಮುಖ ಕಾರಣವೂ ಇದೆ.

ದೆಹಲಿ-ಮೀರತ್ RRTS ಯೋಜನೆಯಡಿ (ಪ್ರಾದೇಶಿಕ ಕ್ಷಿಪ್ರ ಸಾರಿಗೆ ಯೋಜನೆ) ನ್ಯೂ ಅಶೋಕ್ ನಗರದಿಂದ ಸಾಹಿಬಾಬಾದ್​ವರೆಗೆ 5.6 ಕಿ.ಮೀ.ದೂರ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC), ಚೀನಾದ ಶಾಂಘೈ ಟನಲ್ ಎಂಜಿನಿಯರಿಂಗ್​ ಕಂಪನಿ ಲಿಮಿಟೆಡ್​ಗೆ ಗುತ್ತಿಗೆ ನೀಡಿದೆ. ದೇಶದೆಲ್ಲೆಡೆ ಚೀನಾ ವಿರೋಧಿ ಭಾವನೆಗಳೇ ಇರುವಾಗ ಮತ್ತೆ ಮಹತ್ವದ ರೈಲು ಯೋಜನೆಯ ಗುತ್ತಿಗೆಯನ್ನು ಚೀನಾದ ಕಂಪನಿಗೇ ನೀಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನಿಮ್ಮ ಆತ್ಮನಿರ್ಭರ ಭಾರತ್​ ಮತ್ತು ವೋಕಲ್ ಫಾರ್ ಲೋಕಲ್​ ಪರಿಕಲ್ಪನೆಗಳು ಎಲ್ಲಿ ಹೋದವು ಎಂದು ಕೇಂದ್ರ ಸರ್ಕಾರವನ್ನು ಟ್ವಿಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಚೀನಾ ವಿರೋಧಿ ಎಂದು ಹೇಳುತ್ತ, ಇದೀಗ ಮತ್ತೆ ಆ ದೇಶದ ಕಂಪನಿಗೇ ಗುತ್ತಿಗೆ ಕೊಟ್ಟಿದ್ದೀರಲ್ಲ.. ಇದು ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದವರಿಗೆ ಮಾಡುತ್ತಿರುವ ದೊಡ್ಡ ಅವಮಾನ. ಅವರ ಜೀವಕ್ಕೆ ಎಲ್ಲಿ ಬೆಲೆ ಕೊಟ್ಟಂತಾಯಿತು ಎಂದು ಕಿಡಿ ಕಾರಿದ್ದಾರೆ.

ಎಲ್​ಎಸಿಯಲ್ಲಿ ಈಗ ಎಲ್ಲವೂ ಸರಿ ಆಗಿದೆಯಾ? ಅಲ್ಲಿ ಗಡಿತಂಟೆ ತೆಗೆಯುತ್ತಿರುವ ಚೀನಾ ಸುಮ್ಮನಾಗಿದೆಯಾ? ಗಲ್ವಾನ್​ನಲ್ಲಿ ಜೀವ ಬಿಟ್ಟ ನಮ್ಮ ಯೋಧರ ಮರಣಕ್ಕೆ ಪ್ರತೀಕಾರ ತೀರಿಸಿಕೊಂಡು ಮುಗಿಯಿತಾ? ಇಲ್ಲ.. ಇದ್ಯಾವುದೂ ಆಗದೆ ಹೇಗೆ ನೀವು ಮತ್ತೆ ಚೀನಾ ಕಂಪನಿಯೊಂದಿಗೇ ಒಪ್ಪಂದ ಮಾಡಿಕೊಂಡಿರಿ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಹಾಗೇ, ನಮ್ಮ ಸರ್ಕಾರ ಇನ್ನೂ ಚೀನಾಕ್ಕೆ ಬೆಂಬಲ ನೀಡುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಇಂದು ಟ್ವಿಟರ್​ನಲ್ಲಿ ಚೀನಾ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಟ್ವೀಟ್​ಗಳು ಹರಿದುಬರುತ್ತಿದ್ದು, ಅದಕ್ಕೆ BoycottChina ಎಂಬ ಹ್ಯಾಷ್​ಟ್ಯಾಗ್ ಬಳಸಲಾಗುತ್ತಿದೆ.

ದೇಶದ ಮೊದಲ ರೈಲು ಕಾರಿಡಾರ್ ದೆಹಲಿಯಿಂದ-ಮೀರತ್​ ಪ್ರಯಾಣಕ್ಕೆ 3-4 ತಾಸು ಬೇಕಿತ್ತು. ಈ ಸಮಯವನ್ನು ತಗ್ಗಿಸುವ ಸಲುವಾಗಿ ದೆಹಲಿ-ಘಾಜಿಯಾಬಾದ್​-ಮೀರತ್​ RRTS ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ದೇಶದಲ್ಲಿಯೇ ಮೊದಲ ಬಾರಿಗೆ ಅನುಷ್ಠಾನಕ್ಕೆ ಬರುತ್ತಿರುವ ರೈಲು ಕಾರಿಡಾರ್​ ವ್ಯವಸ್ಥೆ.