ಬ್ರಾಹ್ಮಣ ಮತ್ತು ಬನಿಯಾ ಸಮುದಾಯ ನನ್ನ ಜೇಬಿನಲ್ಲಿಯೇ ಇದೆ; ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ ಮುರಳೀಧರ್ ರಾವ್
ಮುರಳೀಧರ್ ರಾವ್ ಮಾತನಾಡಿದ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟೆ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ನ ಹಲವು ನಾಯಕರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಬ್ರಾಹ್ಮಣ ಮತ್ತು ಬನಿಯಾ ಸಮಾಜದ ಬಗ್ಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಮಧ್ಯಪ್ರದೇಶ ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಪಿ.ಮುರಳೀಧರ್ ರಾವ್, ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ಜನರು ನನ್ನ ಜೇಬಿನಲ್ಲಿದ್ದಾರೆ ಎಂದು ಹೇಳಿದ ಮಾತಿಗೆ ಇದೀಗ ವಿರೋಧ ವ್ಯಕ್ತವಾಗಿದೆ. ಪಿ.ಮುರಳೀಧರ್ ರಾವ್ ಕೂಡಲೇ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಆದರೆ ಮುರಳೀಧರ್ ರಾವ್ ಅವರು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ನವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಮುರಳೀಧರ್ ರಾವ್, ನಮ್ಮ ಪಕ್ಷ ಮತ್ತು ಬಿಜೆಪಿ ಸರ್ಕಾರಗಳು ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳ ಮೇಲೆ ವಿಶೇಷ ಗಮನ ಹರಿಸಲು ಮುಂದಾಗಿವೆ. ಅವರುಗಳನ್ನು ಮತ ಬ್ಯಾಂಕ್ಗಳೆಂದು ಪರಿಗಣಿಸದೆ, ಆ ಹಿಂದುಳಿದ ವರ್ಗದವರ ಶಿಕ್ಷಣ, ಉದ್ಯೋಗ ಮತ್ತು ಶಿಕ್ಷಣದ ಬಗ್ಗೆ ವಿಶೇಷ ಆಸ್ಥೆ ವಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಆಗ ಪತ್ರಕರ್ತರೊಬ್ಬರು ರಾವ್ ಅವರ ಬಳಿ, ಬಿಜೆಪಿಯನ್ನು ಬ್ರಾಹ್ಮಣರು ಮತ್ತು ಬನಿಯಾ ಸಮುದಾಯಗಳ ನಾಯಕರನ್ನು ಒಳಗೊಂಡ ಪಕ್ಷ ಎಂದೇ ನಂಬಲಾಗಿದೆ. ಆದರೆ ಇದೀಗ ನೀವು ಎಸ್ಸಿ/ಎಸ್ಟಿ ಬಗ್ಗೆ ವಿಶೇಷ ಗಮನ ಹರಿಸುತ್ತೇವೆ ಎಂದು ಹೇಳುತ್ತಿದ್ದೀರಿ. ಇನ್ನು ಬಿಜೆಪಿ ಹೇಳುವುದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯನ್ನು. ಇಲ್ಲಿ ವಿರೋಧಾಭಾಸ ಕಾಣುತ್ತಿದೆ ಎಂದು ಹೇಳಿದರು.
ಅದಕ್ಕೆ ಉತ್ತರಿಸಿದ ಬಿಜೆಪಿ ನಾಯಕ ರಾವ್ ತಮ್ಮ ಕುರ್ತಾದ ಜೇಬನ್ನು ತೋರಿಸುತ್ತ, ಬ್ರಾಹ್ಮಣರು ಮತ್ತು ಬನಿಯಾ ಸಮುದಾಯದ ಜನರು ನನ್ನ ಜೇಬಿನಲ್ಲಿಯೇ ಇದ್ದಾರೆ. ಈ ಸಮುದಾಯದವರೇ ನಮ್ಮ ಪಾಲಿಗೆ ಮತ ಬ್ಯಾಂಕ್ ಆಗಿರುವಾಗ ನೀವು ಮಾಧ್ಯಮದವರು ನಮ್ಮ ಪಕ್ಷವನ್ನು ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ಪಕ್ಷ ಎಂದು ಕರೆಯುತ್ತಿದ್ದೀರಿ. ಬಿಜೆಪಿ ಎಲ್ಲ ವರ್ಗದವರ ಅಭಿವೃದ್ಧಿಗಾಗಿಯೂ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮುರಳೀಧರ್ ರಾವ್ ಮಾತನಾಡಿದ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟೆ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ನ ಹಲವು ನಾಯಕರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಿಎಂ ಕಮಲನಾಥ್ ಕೂಡ ಮುರಳೀಧರ್ ರಾವ್ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿಯನ್ನು ಕಟ್ಟಲು ಬಹುಮುಖ್ಯ ಪಾತ್ರ ವಹಿಸಿದ ಈ ಎರಡೂ ವರ್ಗದವರಿಗೆ ಪಕ್ಷ ಮಾಡಿದ ಅವಮಾನ ಇದು. ಬಿಜೆಪಿಯ ಹಲವು ನಾಯಕರು ಹೀಗೆ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
Published On - 1:10 pm, Tue, 9 November 21