ಬ್ರೇಕಪ್ ಆದ ಕೋಪದಲ್ಲಿ ಮಾಜಿ ಗೆಳತಿಯ ಎರಡು ಸಾಕು ನಾಯಿಗಳನ್ನು ಕೊಂದು ವಿಡಿಯೋ ಕಾಲ್ ಮಾಡಿ ತೋರಿಸಿದ ವ್ಯಕ್ತಿ
ಬ್ರೇಕಪ್ ಸೇಡಿಗೆ ಕೋಲ್ಕತ್ತಾದ ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಯ ಎರಡು ಸಾಕು ನಾಯಿಗಳನ್ನು ಕ್ರೂರವಾಗಿ ಕೊಂದು ಹಾಕಿದ್ದಾನೆ. ನಾಯಿಗಳನ್ನು ಹತ್ಯೆ ಮಾಡಿದ ಬಳಿಕ ವಿಡಿಯೋ ಕಾಲ್ ಮೂಲಕ ಆಕೆಗೆ ತೋರಿಸಿ ಮನಬಂದಂತೆ ಹಿಂಸಿಸಿದ್ದಾನೆ. ಈ ಆಘಾತಕಾರಿ ಘಟನೆಗೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.

ಕೋಲ್ಕತ್ತಾ, ನವೆಂಬರ್ 16: ಬ್ರೇಕಪ್ ಆದ ಬಳಿಕ ಕೆಲವರು ದೂರವಾಗುತ್ತಾರೆ, ಮತ್ತೆ ಕೆಲವರು ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಾಜಿ ಗೆಳತಿಯ ಮೇಲೆ ಸೇಡು ತೀರಿಸಿಕೊಳ್ಳಲು ಎರಡು ಮೂಕಪ್ರಾಣಿಗಳನ್ನೇ ಕೊಲೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಆಕೆಯ ಎರಡು ಸಾಕು ನಾಯಿಗಳನ್ನು ಕ್ರೂರವಾಗಿ ಕೊಂದು, ಅದರ ದೃಶ್ಯಗಳನ್ನು ವಿಡಿಯೋ ಕಾಲ್ ಮೂಲಕ ಮಾಜಿ ಗೆಳತಿಗೆ ತೋರಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರೇಕಪ್ ಬಳಿಕ ನಾಯಿಗಳೇ ಟಾರ್ಗೆಟ್
ಪೊಲೀಸರ ಮಾಹಿತಿ ಪ್ರಕಾರ, ಸಂಜಿಬ್ ಭಟ್ಟಾಚಾರ್ಯ ದಕ್ಷಿಣ ಕೋಲ್ಕತ್ತಾದ ಬಿಜಯ್‌ಗಢ-ಬಿಕ್ರಮ್‌ಗಢ ಪ್ರದೇಶದಲ್ಲಿ ಡಿಜೆ ಪರಿನೋವಾ ಎಂಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ. ಆದರೆ ಕೆಲವು ಸಮಯದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದಾಗಿ ಮಹಿಳೆ ಆತನಿಂದ ದೂರವಾಗಿ ಬೇರೆಡೆ ವಾಸಿಸಲು ಆರಂಭಿಸಿದ್ದರು.
ಈ ವೇಳೆ ಮಹಿಳೆ ತನ್ನ ಎರಡು ಸಾಕು ನಾಯಿಗಳನ್ನು ಸಂಜಿಬ್ ಆರೈಕೆಯಲ್ಲಿ ಬಿಟ್ಟು ಹೋಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಆರೋಪಿ ನಾಯಿಗಳ ಮೇಲೆ ಹಲ್ಲೆ ನಡೆಸಿ ಅವುಗಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ವಿಡಿಯೋ ಕಾಲ್‌ನಲ್ಲಿ ಭಯಾನಕ ದೃಶ್ಯ
ನಾಯಿಗಳನ್ನು ಕೊಂದ ಬಳಿಕ ಸಂಜಿಬ್ ತನ್ನ ಮಾಜಿ ಸಂಗಾತಿಗೆ ವಿಡಿಯೋ ಕರೆ ಮಾಡಿದ್ದಾನೆ. ಕರೆ ಸ್ವೀಕರಿಸಿದ ಮಹಿಳೆಗೆ ತನ್ನ ಸಾಕು ನಾಯಿಗಳಲ್ಲಿ ಒಂದು ನಾಯಿ ಹಗ್ಗಕ್ಕೆ ನೇತಾಡುತ್ತಿರುವ ದೃಶ್ಯ ಕಾಣಿಸಿದೆ. ಇದನ್ನು ಕಂಡು ಆಕೆ ತೀವ್ರ ಆಘಾತಕ್ಕೊಳಗಾಗಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: 2 ವರ್ಷದ ಪ್ರೀತಿ ಬ್ರೇಕಪ್ನಲ್ಲಿ ಅಂತ್ಯ; ಪ್ರಿಯತಮನಿಗೆ ಬುದ್ಧಿ ಕಲಿಸಲು ಸ್ನೇಹಿತರ ಜತೆ ಸೇರಿ ಹಲ್ಲೆ
ತಕ್ಷಣವೇ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಫ್ಲಾಟ್‌ಗೆ ಹೋಗಿ ಪರಿಶೀಲಿಸುವಂತೆ ಮನವಿ ಮಾಡಿದ್ದಾಳೆ. ಅವರು ಮನೆಗೆ ತೆರಳಿ ನೋಡಿದಾಗ ಎರಡೂ ನಾಯಿಗಳು ಮೃತಪಟ್ಟಿರುವುದು ಕಂಡುಬಂದಿದೆ. ಅಲ್ಲದೆ, ಮನೆಯೊಳಗೆ ರಕ್ತದ ಕಲೆಗಳೂ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಇಟ್ಟಿಗೆಯಿಂದ ಹೊಡೆದು ನಾಯಿಗಳನ್ನು ಕೊಂದಿರುವ ಶಂಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಇಟ್ಟಿಗೆಯಿಂದ ಹೊಡೆದು ನಾಯಿಗಳನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತಪಟ್ಟ ನಾಯಿಗಳಲ್ಲಿ ಒಂದು ಸ್ಥಳೀಯ ತಳಿಯದ್ದಾಗಿದ್ದರೆ, ಮತ್ತೊಂದು ಬೀಗಲ್ ತಳಿಯ ನಾಯಿಯಾಗಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಜಾದವ್‌ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಂಜಿಬ್‌ನನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತರಿಂದ ಆಕ್ರೋಶ
ಈ ಘಟನೆ ತಿಳಿಯುತ್ತಿದ್ದಂತೆ ನಟಿ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಡೆಬ್ಲಿನಾ ದತ್ತಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಾಣಿ ಕಲ್ಯಾಣ ಸಂಘಟನೆಗಳ ಸದಸ್ಯರೂ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡೂ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಸಂಬಂಧ ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಮತ್ತು ಪುರಸಭೆ ವ್ಯವಹಾರಗಳ ಸಚಿವೆ ಅಗ್ನಿಮಿತ್ರ ಪಾಲ್ ಅವರನ್ನೂ ಸಂಪರ್ಕಿಸಿ ತ್ವರಿತ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವ ಪೊಲೀಸರು
ಸದ್ಯ ಎರಡೂ ನಾಯಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಾಯಿಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಮತ್ತೊಂದೆಡೆ, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ, ಇಬ್ಬರ ನಡುವಿನ ವೈಯಕ್ತಿಕ ಸಂಬಂಧದ ಸಂಘರ್ಷಕ್ಕೆ ಮೂಕಪ್ರಾಣಿಗಳು ಬಲಿಯಾಗಿರುವ ಘಟನೆ ಪ್ರಾಣಿ ಪ್ರಿಯರು ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
