ಗ್ಲಾಸ್ಗೋ: ಅತಿಶೀಘ್ರದಲ್ಲಿ ತಾವು ಭಾರತಕ್ಕೆ ಭೇಟಿ ನೀಡುವುದಾಗಿ ಬ್ರಿಟಿಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್(Boris Johnson ) ಹೇಳಿದ್ದಾರೆ. ಸದ್ಯ ಯುಕೆ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ನೀಡಿರುವ ಆಮಂತ್ರಣವನ್ನು ಒಪ್ಪಿಕೊಂಡು ಈ ಮಾತುಗಳನ್ನು ಹೇಳಿದ್ದಾರೆ. 2021ರ ಜನವರಿ 26ರ ಗಣರಾಜ್ಯೋತ್ಸವಕ್ಕೆ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಗಳಾಗಿ ಆಗಮಿಸಬೇಕಿತ್ತು ಆದರೆ ಕೊರೊನಾ ಕಾರಣದಿಂದ ಈ ಭೇಟಿ ರದ್ದಾಗಿತ್ತು. ಇದೀಗ ಮೋದಿ ಅವರನ್ನು ಮತ್ತೆ ಭಾರತಕ್ಕೆ ಆಹ್ವಾನಿಸಿದ್ದಾರೆ. ಆದಷ್ಟು ಶೀಘ್ರವಾಗಿ ಈ ಬಗ್ಗೆ ಯೋಜನೆ ಹಾಕಲಾಗುವುದು..ಭಾರತಕ್ಕೆ ಬರುತ್ತೇನೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಮತ್ತು ಬೋರಿಸ್ ಜಾನ್ಸನ್ ಭೇಟಿ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಇವರಿಬ್ಬರ ನಡುವೆ ಪ್ರಾದೇಶಿಕದಿಂದ ಜಾಗತಿಕದವರೆಗಿನ ಸಮಸ್ಯೆಗಳು, ವಿಚಾರಗಳು ಚರ್ಚೆಯಾಗಿವೆ. ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಬಗ್ಗೆಯೂ ವ್ಯಾಪಕವಾಗಿ ಚರ್ಚೆ ನಡೆಸಿದ್ದಾರೆ. ಕೊವಿಡ್ 19 ಪರಿಸ್ಥಿತಿಯಿಂದ ಜಾಗತಿಕ ಆರ್ಥಿಕತೆ ಚೇತರಿಕೆಯಾಗುತ್ತಿರುವ ಬಗ್ಗೆ ವಿಚಾರ ವಿನಿಮಯ ಆಗಿದೆ ಎಂದು ಹೇಳಿದ್ದಾರೆ.
ಗ್ಲಾಸ್ಗೋದಲ್ಲಿ ನಡೆದ COP 26 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ರೊಟ್ಟಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಹವಾಮಾನ ಬದಾಲವಣೆ ಸಂಬಂಧ ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಹವಾಮಾನ ಹಣಕಾಸು, ತಂತ್ರಜ್ಞಾನ, ನಾವೀನ್ಯತೆ, ಹಸಿರು ಹೈಡ್ರೋಜನ್ ರೂಪಾಂತರ, ನವೀಕರಿಸಬಹುದಾದ ಮತ್ತು ಶುದ್ಧ ತಂತ್ರಜ್ಞಾನಗಳು, ಅಂತಾರಾಷ್ಟ್ರೀಯ ಸೌರ ಮೈತ್ರಿಗಳಡಿ ಜಂಟಿ ಉಪಕ್ರಮಗಳು, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟ (CDRI)ಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳಲ್ಲಿಯೂ ಭಾರತ ಯುಕೆಯೊಟ್ಟಿಗೆ ಸೇರಿ ಕೆಲಸ ಮಾಡಲು ಬದ್ಧವಾಗಿದೆ ಎಂಬುದನ್ನು ಪ್ರಧಾನಿ ಮೋದಿ ಬೋರಿಸ್ ಜಾನ್ಸನ್ಗೆ ತಿಳಿಸಿದ್ದಾರೆ ಎಂದು ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ. ಉಭಯ ಪ್ರಧಾನಿಗಳು ವ್ಯಾಪಾರ ಮತ್ತು ಆರ್ಥಿಕತೆ, ಆರೋಗ್ಯ, ರಕ್ಷಣೆ, ಭದ್ರತಾ ವಲಯಗಳನ್ನು ಆದ್ಯತೆಯಾಗಿಟ್ಟುಕೊಂಡು 2030ರ ಹೊತ್ತಿಗೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Har Ghar Dastak ಮನೆ ಮನೆಗೆ ಕೊವಿಡ್ ಲಸಿಕೆ ಅಭಿಯಾನ ‘ಹರ್ ಘರ್ ದಸ್ತಕ್’ ಇಂದು ಆರಂಭ
ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆಕಟ್ಟಿ ಕಾಲುವೆಗೆ ಎಸೆದ ಕೊಲೆಗಾರ, ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆ