ದೆಹಲಿ ಮದ್ಯ ನೀತಿ ಹಗರಣ ಪ್ರಕರಣ: ಮಾರ್ಚ್ 23ರವರೆಗೆ ಕವಿತಾ ಇಡಿ ಕಸ್ಟಡಿಗೆ

|

Updated on: Mar 16, 2024 | 7:57 PM

ಕೆ. ಕವಿತಾ ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮಾಜಿ ಸಿಎಂ ಚಂದ್ರಶೇಖರ್ ರಾವ್ ಅವರ ಪುತ್ರಿ. 2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿನ್ನೆ (ಮಾಚ್ 15)ರಂದು ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದ್ದು, ಅಲ್ಲಿಂದ ರಾತ್ರಿ ದೆಹಲಿಗೆ ಕರೆದೊಯ್ಯಲಾಗಿತ್ತು.

ದೆಹಲಿ ಮದ್ಯ ನೀತಿ ಹಗರಣ ಪ್ರಕರಣ: ಮಾರ್ಚ್ 23ರವರೆಗೆ ಕವಿತಾ ಇಡಿ ಕಸ್ಟಡಿಗೆ
ಕೆ.ಕವಿತಾ
Follow us on

ದೆಹಲಿ ಮಾರ್ಚ್ 16: ಇದೀಗ ರದ್ದುಗೊಂಡಿರುವ ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ(Delhi liquor policy scam case) ಸಂಬಂಧಿಸಿದಂತೆ ಭಾರತ್ ರಾಷ್ಟ್ರ ಸಮಿತಿಯ ಎಂಎಲ್‌ಸಿ ಕೆ ಕವಿತಾ (K Kavitha) ಅವರು ಮಾರ್ಚ್ 23 ರವರೆಗೆ ಜಾರಿ ನಿರ್ದೇಶನಾಲಯ (Enforcement Directorate) ಕಸ್ಟಡಿಯಲ್ಲಿ ಇರಲಿದ್ದಾರೆ ಎಂದು ರೌಸ್ ಅವೆನ್ಯೂ ಕೋರ್ಟ್ ಶನಿವಾರ ತಿಳಿಸಿದೆ. ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್ ಅವರು ಬಿಆರ್‌ಎಸ್ ನಾಯಕಿ ರಿಮಾಂಡ್ ಕೋರಿ ಇಡಿ ಸಲ್ಲಿಸಿದ ಅರ್ಜಿಯ ಮೇಲೆ ಆದೇಶ ಹೊರಡಿಸಿದ್ದಾರೆ. ಕವಿತಾರನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ತನಿಖಾ ಸಂಸ್ಥೆ ಕೋರಿತ್ತು. ಆದರೆ, ನ್ಯಾಯಾಧೀಶರು ಆಕೆಯನ್ನು ಮಾರ್ಚ್ 23ರವರೆಗೆ ಮಾತ್ರ ರಿಮಾಂಡ್ ನೀಡಿದ್ದಾರೆ. ತನ್ನ ಬಂಧನಕಾನೂನು ಬಾಹಿರವಾಗಿದ್ದು, ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಎಂದು ಕವಿತಾ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಹೇಳಿದ್ದಾರೆ.

ಆಕೆಯ ವಕೀಲ ವಿಕ್ರಮ್ ಚೌಧರಿ ಕೂಡ ಬಿಆರ್‌ಎಸ್ ನಾಯಕಿಯ ಬಂಧನ “ಕಾನೂನುಬಾಹಿರ” ಎಂದು ನ್ಯಾಯಾಧೀಶರಿಗೆ ತಿಳಿಸಿದರು.
ಆದರೆ, ಇಡಿ ಪರ ವಕೀಲರು, ಕವಿತಾ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆಗಳಿವೆ ಎಂದರು. ಕವಿತಾ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. “ಕೆ ಕವಿತಾ ಅವರನ್ನು ಎದುರಿಸಲು ನಾವು ಹಲವಾರು ಸಾಕ್ಷಿಗಳನ್ನು ಕರೆಸಿದ್ದೇವೆ” ಎಂದು ಇಡಿ ಹೇಳಿದೆ.

46ರ ಹರೆಯದ ಕವಿತಾ ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮಾಜಿ ಸಿಎಂ ಚಂದ್ರಶೇಖರ್ ರಾವ್ ಅವರ ಪುತ್ರಿ. 2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿನ್ನೆ (ಮಾಚ್ 15)ರಂದು ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದ್ದು, ಅಲ್ಲಿಂದ ರಾತ್ರಿ ದೆಹಲಿಗೆ ಕರೆದೊಯ್ಯಲಾಗಿತ್ತು.

ಕವಿತಾ ಬಂಧನವನ್ನು ಖಂಡಿಸಿ ಶನಿವಾರ ತೆಲಂಗಾಣದಾದ್ಯಂತ ಬಿಆರ್‌ಎಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಪಕ್ಷವು ಆರೋಪಿಸಿದ್ದು, ಕವಿತಾ ಅವರ ಬಂಧನವನ್ನು “ಕಾನೂನುಬಾಹಿರ” ಎಂದು ಹೇಳಿದೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, “ಕೆ ಕವಿತಾ ಅವರ ಅಕ್ರಮ ಬಂಧನದ ವಿರುದ್ಧ ಬಿಆರ್‌ಎಸ್ ತೆಲಂಗಾಣದಾದ್ಯಂತ ಪ್ರತಿಭಟನೆ ನಡೆಸಿತು” ಎಂದು ಪಕ್ಷ ಹೇಳಿದೆ.

ಇದನ್ನೂ ಓದಿ: Lok Sabha Election Opinion Poll: ಲೋಕಸಭೆ ಚುನಾವಣೆ ಸಮೀಕ್ಷೆ, ಎನ್​ಡಿಎ vs ಇಂಡಿಯಾ ಬಲಾಬಲ ಹೀಗಿದೆ

ಪ್ರತಿಭಟನಾಕಾರರು ಕಪ್ಪು ಬಾವುಟಗಳನ್ನು ಹಿಡಿದು ಕುತ್ತಿಗೆಗೆ ಕಪ್ಪು ಬಟ್ಟೆಯನ್ನು ಧರಿಸಿ ರ‍್ಯಾಲಿಗಳನ್ನು ನಡೆಸಿದ್ದಾರೆ. ತೆಲಂಗಾಣದ ರಸ್ತೆಗಳಲ್ಲಿ ಧರಣಿ ನಡೆಸಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಎತ್ತಿದರು.

‘ಕವಿತಕ್ಕ ಜೊತೆ ನಾವು ನಿಲ್ಲುತ್ತೇವೆ’, ‘ಅಕ್ರಮ ಬಂಧನಗಳನ್ನು ಕೂಡಲೇ ನಿಲ್ಲಿಸಿ’, ‘ಕೇಂದ್ರ ಸರ್ಕಾರದ ಹಠಮಾರಿ ಧೋರಣೆ ಕೊನೆಗಾಣಬೇಕು’ ಎಂಬ ಬರಹಗಳಿರುವ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದ ಪ್ರತಿಭಟನಾಕಾರರು ಕೆಲವೆಡೆ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ