ದೆಹಲಿ ನವೆಂಬರ್ 11: ಮಗನನ್ನು ನಿಯೋಜಿಸುವ ಬಗ್ಗೆ ಹೇಳುವಾಗ ನೆನಪಿಗೆ ಬಂತು ಬಿಜೆಪಿಯ (BJP) ಸ್ವಜನಪಕ್ಷಪಾತದ (nepotism) ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ ಎಂಬುದು. ಕರ್ನಾಟಕದಲ್ಲಿ ಪೂರ್ತಿ ಗುಡಿಸಿ ಸಾರಿಸಿದ ನಂತರ ಇದೀಗ ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಪುತ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ.ಆದರೆ ಮೋದಿ ಜೀ ಮತ್ತು ಅಮಿತ್ ಶಾ ತಮ್ಮ ಭಾಷಣದಲ್ಲಿ ಬಡಾಯಿ ಬಿಡುತ್ತಲೇ ಇರುತ್ತಾರೆ, ಅವರ ಸ್ವಂತ ಪಕ್ಷದವರು ಅಥವಾ ಮನೆಯಲ್ಲಿ ಯಾರೂ ಕೇಳದಿದ್ದರೂ ಸಹ!
ಆದರೆ ಈಗ ದೇಶದ ಜನತೆ ಸುಳ್ಳು, ಲೂಟಿ, ವಂಚನೆಯಿಂದ ಕೂಡಿರುವ ಬಿಜೆಪಿಯನ್ನು ಸಂಪೂರ್ಣವಾಗಿ ‘ಅಸಮಾಧಾನ’ಗೊಳಿಸಿ ‘ಹೊರಹಾಕಲು’ ಸಿದ್ಧರಾಗಿದ್ದಾರೆ. ಮೊದಲು ಮಧ್ಯಪ್ರದೇಶ, ನಂತರ ದೇಶ..ಬರುತ್ತಿದೆ ಕಾಂಗ್ರೆಸ್ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ (BY Vijayendra) ಅವರನ್ನು ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದನ್ನು ಸುರ್ಜೇವಾಲಾ ಈ ರೀತಿ ಟ್ವೀಟ್ ಮಾಡಿ ಕುಟುಕಿದ್ದಾರೆ.
ವಿಜಯೇಂದ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದಾರೆ.ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿಟಿ ರವಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಕೇಳಿಬಂದಿತ್ತು. ಆದರೆ ಶುಕ್ರವಾರ ಬಿಜೆಪಿ ಬಿವೈ ವಿಜಯೇಂದ್ರ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ . ಇದರೊಂದಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪಗೆ ಮಣೆ ಹಾಕಿದಂತಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ದೂರವಾಗಿರುವ ಲಿಂಗಾಯತ ಸಮುದಾಯವನ್ನು ಸೆಳೆದುಕೊಳ್ಳುವ ಪ್ರಯತ್ನದ ಭಾಗವಾಗಿ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಸದ್ಯ ಜೆಡಿಎಸ್ ಎನ್ಡಿಎ ಭಾಗವಾಗಿರುವ ಕಾರಣ ಒಕ್ಕಲಿಗ ಸಮುದಾಯ ಹೊರತುಪಡಿಸಿದ ನಾಯಕನಿಗೆ ಮಣೆ ಹಾಕಲಾಗಿದೆ. ಜತೆಗೆ, ಯುವ ನಾಯಕತ್ವದ ಬಗ್ಗೆ ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ.
ಬಿಜೆಪಿ ಯುವ ಮೋರ್ಚಾದಲ್ಲಿ ಇರುವ ವಿಜಯೇಂದ್ರಗೆ ಇರುವ ನೆಟ್ವರ್ಕ್ ಬಳಸಿಕೊಳ್ಳುವುದರ ಜತೆಗೆ, ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನದ ಭಾಗವಾಗಿಯೂ ಈ ನಿರ್ಧಾರ ಮಹತ್ವದ್ದಾಗಿದೆ. ವಿಜಯೇಂದ್ರ ಅಧ್ಯಕ್ಷ ಆದರೆ ಯಡಿಯೂರಪ್ಪ ಅವರು ತಾನೇ ಅಧ್ಯಕ್ಷ ಎಂಬಂತೆ ಕೆಲಸ ಮಾಡುತ್ತಾರೆ ಎಂಬ ಲೆಕ್ಕಾಚಾರವನ್ನು ಕೂಡ ಬಿಜೆಪಿ ಹೈಕಮಾಂಡ್ ಹಾಕಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟದ ಹಿಂದೆ ನೂರೆಂಟು ಲೆಕ್ಕಾಚಾರ: ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಹೈಕಮಾಂಡ್ ಸ್ಕೆಚ್!
ವಿಜಯೇಂದ್ರ ಅವರ ಅಧ್ಯಕ್ಷ ಗಾದಿಯ ಪಯಣ ಅಪ್ಪ ತುಳಿದ ಹಾದಿಯಷ್ಟು ಕಠಿಣವಾಗಿಲ್ಲದೇ ಇರಬಹುದು. ಆಗ ಇದ್ದಷ್ಟು ಕಲ್ಲು-ಮುಳ್ಳುಗಳು ಇಲ್ಲದೇ ಇರಬಹುದು. ಆದರೆ ಸವಾಲುಗಳಂತೂ ಖಂಡಿತಾ ಕಡಿಮೆಯಲ್ಲ.
ಲೋಕಸಭೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಉಳಿಸಿಕೊಳ್ಳಬಹುದು? ಚದುರಿ ಹೋಗಿರುವ ರಾಜ್ಯ ಬಿಜೆಪಿಯ ಹಿರಿಯ ನಾಯಕರಲ್ಲಿ ಐಕ್ಯತೆ ಮೂಡಿಸುವುದು ಹೇಗೆ? ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡರೆ ಹಳೆ ಮೈಸೂರು ಭಾಗದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವ ಸವಾಲುಗಳು ಅಧ್ಯಕ್ಷ ಗಾದಿಯ ಜತೆಜತೆಗೇ ವಿಜಯೇಂದ್ರ ಅವರಿಗೆ ಎದುರಾಗುತ್ತವೆ. ಇದೆಲ್ಲದರ ಜತೆ ಕಳೆದ ಸಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಫಲಿತಾಂಶದಲ್ಲಿ 66 ಕ್ಕೆ ಕುಸಿದ ಬಿಜೆಪಿಗೆ ಪುನಶ್ಚೇತನ ನೀಡುವುದು ಹೇಗೆ? ಕಾರ್ಯಕರ್ತರಲ್ಲಿ ಶಕ್ತಿ ತುಂಬಿಸಿ ಅವರನ್ನು ಮತ್ತೆ ಕ್ರಿಯಾಶೀರನ್ನಾಗಿಸುವುದು ಹೇಗೆ ಎಂಬ ಪ್ರಶ್ನೆಗಳೂ ಅವರ ಮುಂದಿವೆ.
ಸ್ವಯಂಪ್ರೇರಿತರಾಗಿ ಚುನಾವಣಾ ಹಿಂದೆ ಸರಿಯುತ್ತಿದ್ದೇವೆ ಎಂದು ಹೇಳಿದರೂ ಒಳಗಿಂದೊಳಗೆ ಅಸಮಾಧಾನಗೊಂಡಿರುವ ಕೆಲವು ನಾಯಕರು ಬಿಜೆಪಿಯಲ್ಲಿರುವುದನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಹೈಕಮಾಂಡ್ ಪ್ರಬಲವಾಗಿರುವುದರಿಂದ ಅನಿವಾರ್ಯ ಕಾರಣಗಳಿಂದ ಮೌನವಾಗಿದ್ದು, ಒಳಗಿಂದೊಳಗೆ ಅಸಮಾಧಾನದ ಹೊಗೆಯಾಡುತ್ತಿರುವ ಕೆಲವು ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ವಿಜಯೇಂದ್ರ ಮುಂದಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Sat, 11 November 23