ಪಂಜಾಬ್ ಗಡಿಯಲ್ಲಿ ಬಿಎಸ್​ಎಫ್, ಪೊಲೀಸರ ಜಂಟಿ ಕಾರ್ಯಾಚರಣೆ; 7 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

| Updated By: ಸುಷ್ಮಾ ಚಕ್ರೆ

Updated on: Oct 15, 2021 | 1:51 PM

ಪಂಜಾಬ್‌ನಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರವ್ಯಾಪ್ತಿ ವಿಸ್ತರಣೆಗೆ ಸಂಬಂಧಿಸಿದಂತೆ ರಾಜಕೀಯ ಬಿಕ್ಕಟ್ಟು ಎದುರಾಗಿರುವುದರ ಮಧ್ಯೆಯೇ ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರೂ. 7 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.

ಪಂಜಾಬ್ ಗಡಿಯಲ್ಲಿ ಬಿಎಸ್​ಎಫ್, ಪೊಲೀಸರ ಜಂಟಿ ಕಾರ್ಯಾಚರಣೆ; 7 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ಸಾಂಕೇತಿಕ ಚಿತ್ರ
Follow us on

ನವದೆಹಲಿ: ಕೇಂದ್ರ ಸರ್ಕಾರವು ಪಂಜಾಬ್, ಪಶ್ಚಿಮ ಬಂಗಾಳ ರಾಜ್ಯಗಳ ಅಂತಾರಾಷ್ಟ್ರೀಯ ಗಡಿಗಳಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು 15 ಕಿ.ಮೀ.ನಿಂದ 50 ಕಿ.ಮೀ.ವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ. ಇದು ಎರಡು ರಾಜ್ಯಗಳ ಸರ್ಕಾರಗಳ ವಿರೋಧಕ್ಕೆ ಕಾರಣವಾಗಿದೆ. ಇದರ ಬಗ್ಗೆ ಈಗ ರಾಜಕೀಯ ಜಟಾಪಟಿ ಕೂಡ ನಡೆಯುತ್ತಿದೆ. ಇದರ ಮಧ್ಯೆಯೇ ಪಂಜಾಬ್ ಗಡಿಯಲ್ಲಿ ಈಗ ಬಿಎಸ್ಎಫ್, ಪಂಜಾಬ್ ಪೊಲೀಸರ ಜೊತೆಗೆ ಜಂಟಿ ಕಾರ್ಯಾಚರಣೆ ನಡೆಸಿ 7 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ.

ಪಂಜಾಬ್‌ನಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರವ್ಯಾಪ್ತಿ ವಿಸ್ತರಣೆಗೆ ಸಂಬಂಧಿಸಿದಂತೆ ರಾಜಕೀಯ ಬಿಕ್ಕಟ್ಟು ಎದುರಾಗಿರುವುದರ ಮಧ್ಯೆಯೇ ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರೂ. 7 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಗಡಿಯಿಂದ ಕೆಲವು ಮೀಟರ್ ದೂರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ತಪು ಹೊರವಲಯದಲ್ಲಿರುವ ಗಡಿ ಭದ್ರತಾ ಬೇಲಿ ಬಳಿ ಪಂಜಾಬ್ ಪೊಲೀಸರ ಮಾದಕದ್ರವ್ಯ ನಿಯಂತ್ರಣ ಕೋಶದೊಂದಿಗೆ ಜಂಟಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ. “ಕಾರ್ಯಾಚರಣೆಯ ಸಮಯದಲ್ಲಿ, ತಂಡವು ಸುಮಾರು 6.6 ಕೆಜಿ ತೂಕದ ಹೆರಾಯಿನ್ ಮತ್ತು 1.13 ಕೆಜಿ ತೂಕದ ಸಕ್ಕರೆಯ ನಾಲ್ಕು ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದೆ” ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷ ಜನವರಿಯ ನಂತರ ಇದು ಎರಡನೇ ಯಶಸ್ವಿ ಕಾರ್ಯಾರಣೆ ಎಂದು ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ. “ಫಿರೋಜ್‌ಪುರದ ಪ್ರದೇಶದಲ್ಲಿ ಈ ವರ್ಷ ಒಟ್ಟಾರೆ 94.786 ಕೆಜಿ ಹೆರಾಯಿನ್ ಅನ್ನು ಜಫ್ತಿ ಆಗಿದೆ” ಎಂದು ಅಧಿಕಾರಿ ಹೇಳಿದ್ದಾರೆ. ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ ಈಗಿರುವ 15 ಕಿಮೀಗಳ ಬದಲಾಗಿ, 50 ಕಿಮೀ ವ್ಯಾಪ್ತಿಯಲ್ಲಿ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧನಕ್ಕೆ ಬಿಎಸ್ಎಫ್‌ಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಬಿಎಸ್ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ.

ಈ ನಿರ್ಧಾರವನ್ನು ಪಂಜಾಬ್‌ನ ಕಾಂಗ್ರೆಸ್ ಸರ್ಕಾರವು ವಿರೋಧಿಸಿದೆ, ಜೊತೆಗೆ ಪಶ್ಚಿಮ ಬಂಗಾಳದ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ, ಇದು ರಾಜ್ಯದ ಹಕ್ಕುಗಳ ಮೇಲೆ ” ಕೇಂದ್ರ ಸರ್ಕಾರದ ದಾಳಿ ” ಮತ್ತು ದೇಶದ ಒಕ್ಕೂಟದ ವ್ಯವಸ್ಥೆಯ ಮೇಲಿನ ದಾಳಿ ಎಂದು ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಹೇಳಿವೆ.

ಅಂತಾರಾಷ್ಟ್ರೀಯ ಗಡಿಗಳಿಂದ 50 KM ವ್ಯಾಪ್ತಿಯವರೆಗೂ BSF ಗೆ ಹೆಚ್ಚುವರಿ ಅಧಿಕಾರವನ್ನು ನೀಡುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇವೆ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ನಡೆದ ನೇರ ದಾಳಿಯಾಗಿದೆ. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸುತ್ತೇನೆ “ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದಾರೆ. ಆದರೆ, ಶೀಘ್ರವೇ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿರುವ ಮಾಜಿ ಸಿಎಂ ಅಮರೀಂದರ್ ಸಿಂಗ್ ಈ ಅವರು ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಪಂಜಾಬಿನಲ್ಲಿ ಬಿಜೆಪಿಯ ಮಾಜಿ ಮಿತ್ರ ಶಿರೋಮಣಿ ಅಕಾಲಿದಳ ಕೂಡ ತಿದ್ದುಪಡಿಯನ್ನು ವಿರೋಧಿಸಿದೆ. ಗುರುವಾರ, ಎಸ್‌ಎಡಿ ಅಧ್ಯಕ್ಷ ಸುಖ್‌ಬೀರ್ ಬಾದಲ್ ಅವರನ್ನು ಬಿಎಸ್‌ಎಫ್‌ನ ಅಧಿಕಾರವಧಿ ವಿಸ್ತರಣೆಯ ಕುರಿತು ರಾಜಭವನದ ಹೊರಗೆ ನಡೆದ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸುಖಬೀರ್ ಬಾದಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರದ ಕ್ರಮಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ “ಸೌಮ್ಯವಾಗಿ ಶರಣಾಗಿದ್ದಾರೆ” ಎಂದು ಬಾದಲ್ ಆರೋಪಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಆದೇಶವು ಚುನಾವಣಾ ವಿಷಯವಾಗಲಿದೆ.

ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ 11ರಂದು ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಜುಲೈ 2014 ರ ನಿಯಮಕ್ಕೆ ತಿದ್ದುಪಡಿ ಮಾಡಿ ಗಡಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಬಿಎಸ್‌ಎಫ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ.

ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ, BSF ಈ ಮೊದಲು 15 ಕಿಮೀವರೆಗೆ ಮಾತ್ರ ಡ್ರಗ್ಸ್ , ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ನೀಡಲಾಗಿತ್ತು. ಆದರೇ, ಕೇಸ್ ದಾಖಲಿಸಿದ ಬಳಿಕ ಆ ಕೇಸ್ ಅನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರ ಮಾಡಬೇಕಾಗಿತ್ತು. ಈಗ ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀ ವ್ಯಾಪ್ತಿಯಲ್ಲಿ ಡ್ರಗ್ಸ್ , ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಬಿಎಸ್ಎಫ್ ಗೆ ನೀಡಲಾಗಿದೆ. ಇದು ಈಗ ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿದೆ. ಗುಜರಾತ್‌ ರಾಜ್ಯವು ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯ ಮಿತಿಯನ್ನು 80 ಕಿಮೀ ನಿಂದ 50 ಕಿಮೀಗೆ ಇಳಿಸಲಾಗಿದೆ, ಆದರೆ ರಾಜಸ್ಥಾನದಲ್ಲಿ ಮಿತಿಯನ್ನು 50 ಕಿಮೀ ಆಗಿ ಬದಲಾಯಿಸಲಾಗಿದೆ. ರಾಜಸ್ಥಾನ ಮತ್ತು ಪಂಜಾಬ್ ಕೂಡ ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿವೆ. ಅಸ್ಸಾಂ ಬಾಂಗ್ಲಾದೇಶದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದೆ.

ಬಿಎಸ್ಎಫ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ 6,300 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 2.65 ಲಕ್ಷ ಅರೆಸೇನಾ ಪಡೆ ಕಾವಲು ಕಾಯುತ್ತಿದ್ದಾರೆ. ಬಿಎಸ್‌ಎಫ್ ಅಧಿಕಾರಿಗಳು ಹೇಳುವ ಪ್ರಕಾರ, ಈ ತಿದ್ದುಪಡಿಯು ಗಡಿಯಾಚೆಗಿನ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಹಾಯ ಮಾಡುತ್ತದೆ ಮತ್ತು ಹೊಸ ತಿದ್ದುಪಡಿಯು ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂನ ಗಡಿ ರಾಜ್ಯಗಳಲ್ಲಿ ತನ್ನ ಕಾರ್ಯಾಚರಣೆಗೆ “ಏಕರೂಪತೆಯನ್ನು” ತರುತ್ತದೆ, ಅಲ್ಲಿ ಬಿಎಸ್ಎಫ್ ಈಗ 50 ಕಿಮೀ ಒಳಗೆ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದಾರೆ. ಆದರೆ, ಬಿಎಸ್ಎಫ್ ಅಧಿಕಾರಿಗಳೇ ಪ್ರಕರಣದ ತನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಲ್ಲ. ಪ್ರಕರಣ ದಾಖಲಾದ ಬಳಿಕ, ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ ಎಂದು ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ‘ಹೈಕಮಾಂಡ್ ನಾಯಕರ ನಿರ್ಧಾರಕ್ಕೆ ಬದ್ಧ’; ರಾಜೀನಾಮೆ ಹಿಂಪಡೆಯುವ ಸುಳಿವು ನೀಡಿದ ನವಜೋತ್ ಸಿಂಗ್ ಸಿಧು

ಪಂಜಾಬ್ ಗಡಿಯಲ್ಲಿ ಕ್ರೈಸ್ತ ಮಿಷನರಿಗಳಿಂದ ಬಲವಂತದ ಮತಾಂತರ; ಅಕಲ್ ತಖ್ತ್ ಜತೇದಾರ್ ಆರೋಪ

Published On - 1:50 pm, Fri, 15 October 21