ಅಲಿರಾಜ್ಪುರ: ಬಸ್ವೊಂದು ನದಿ(Bus Fell Into River)ಗೆ ಬಿದ್ದು ಒಂದು ವರ್ಷದ ಮಗು ಸೇರಿ ಮೂರು ಮಂದಿ ಮೃತಪಟ್ಟು, 28 ಜನರು ಗಾಯಗೊಂಡ ಘಟನೆ ಮಧ್ಯಪ್ರದೇಶ(Madhya Pradesh)ದ ಅಲಿರಾಜ್ಪುರ ಜಿಲ್ಲೆಯಲ್ಲಿ ನಡೆದಿದೆ. ಇಂದು ಮುಂಜಾನೆ 6ಗಂಟೆ ಹೊತ್ತಿಗೆ ಅಲಿರಾಜ್ಪುರದ ಚಾಂದ್ಪುರ ಗ್ರಾಮದ ಬಳಿ ಬಸ್ ನದಿಗೆ ಬಿದ್ದಿದೆ. ಅಂದಹಾಗೆ, ಈ ಬಸ್ ಅಲಿರಾಜ್ಪುರದಿಂದ ಗುಜರಾತ್ನ ಉದೇಪುರಕ್ಕೆ ಹೋಗುತ್ತಿತ್ತು ಎಂಬುದಾಗಿ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ಬಸ್ ನದಿಗೆ ಬೀಳಲು ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಈ ಚಾಲಕನಿಗೆ ನಿದ್ದೆ ಬಂದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಮೆಲ್ಖೋದ್ರಾ ನದಿಗೆ ಬಿದ್ದಿದೆ. ಮೃತರನ್ನು ಕೈಲಾಶ್ ಮೇದಾ (48), ಮೀರಾಬಾಯಿ (46) ಎಂದು ಗುರುತಿಸಲಾಗಿದೆ. ಮೃತಪಟ್ಟ ಒಂದು ವರ್ಷದ ಮಗುವಿನ ಹೆಸರು ಗೊತ್ತಾಗಿಲ್ಲ. ಇನ್ನು 28 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಮೂರೂ ಮಂದಿ ಗುಜರಾತ್ನವರೇ ಆಗಿದ್ದಾರೆ. ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಅವರು ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಾಗೇ, ಇದೇ ವರ್ಷ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್ವೊಂದು ಸೇತುವೆಯ ಕೆಳಗೆ ಬಿದ್ದು 51 ಮಂದಿ ಮೃತಪಟ್ಟಿದ್ದರು. ಮುಂಜಾನೆ 7.30ರ ಹೊತ್ತಿಗೆ ಘಟನೆ ನಡೆದಿತ್ತು. ಸೆಪ್ಟೆಂಬರ್ನಲ್ಲಿ ಮೇಘಾಲಯದಲ್ಲಿ ಇಂಥದ್ದೇ ಒಂದು ದುರ್ಘಟನೆ ನಡೆದಿತ್ತು. ತುರಾದಿಂದ ಶಿಲ್ಲಾಂಘ್ಗೆ ತೆರಳುತ್ತಿದ್ದ ಬಸ್ ರಂಗ್ಡಿ ನದಿಗೆ ಬಿದ್ದು, ಚಾಲಕ ಸೇರಿ ಆರು ಮಂದಿ ಮೃತಪಟ್ಟಿದ್ದರು. 2020ರ ಫೆಬ್ರವರಿಯಲ್ಲಿ ಜೈಪುರದಲ್ಲಿ. ಮುದವೆ ಮುಗಿಸಿ ವಾಪಸ್ ಬರುತ್ತಿದ್ದ ಖಾಸಗಿ ಬಸ್ವೊಂದು ಬುಂಡಿ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿಯಲ್ಲಿ ಮೇಜ್ ನದಿಗೆ ಬಿದ್ದಿತ್ತು. ಈ ದುರಂತದಲ್ಲಿ 25ಮಂದಿ ಮೃತಪಟ್ಟಿದ್ದರು.ಈ ಬಸ್ನಲ್ಲಿ ಅತ್ಯಂತ ಹೆಚ್ಚಿನ ಜನರು ತುಂಬಿ ಹೋಗಿದ್ದರು. ಚಾಲಕನಿಗೆ ನಿಯಂತ್ರಣ ಮಾಡಲಾಗದೆ ಅವಘಡ ಸಂಭವಿಸಿತ್ತು.
ಇದನ್ನೂ ಓದಿ: SSLC ಪರೀಕ್ಷೆ ದಿನಾಂಕ ಶೀಘ್ರವೇ ಪ್ರಕಟಿಸಲು ಶಿಕ್ಷಣ ಇಲಾಖೆಗೆ ಪತ್ರ ಬರೆದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ