ಉಡುಪಿ: ನಿಮ್ಮ ನಿಮ್ಮ ಮನೆಯ ಗೋವುಗಳನ್ನು ರಕ್ಷಿಸಿಕೊಳ್ಳಲು, ಕತ್ತಿಯನ್ನು ಖರೀದಿಸಿಟ್ಟುಕೊಳ್ಳಿ ಎಂದು ವಿಶ್ವ ಹಿಂದು ಪರಿಷತ್ (VHP) ನಾಯಕಿ ಸಾದ್ವಿ ಸರಸ್ವತಿಯವರು ಕರೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಎಚ್ಪಿ ಮತ್ತು ಭಜರಂಗದಳದಿಂದ ಆಯೋಜಿಸಲಾಗಿದ್ದ ಹಿಂದು ಸಂಗಮ ಸಮಾರಂಭದಲ್ಲಿ ಮಾತನಾಡಿದ ಅವರು, ಗೋಮಾತೆಯ ರಕ್ಷಣೆ ಅತ್ಯಗತ್ಯ ಎಂದು ಹೇಳಿದ್ದಾರೆ.
ಜಗತ್ತಿನಾದ್ಯಂತ ಗೋಮಾತೆಯನ್ನು ಗೌರವಿಸುತ್ತಾರೆ, ಪೂಜಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಹಸುವನ್ನು ಅದರ ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ. ಈ ದೇಶದಲ್ಲಿ ಗೋವು ಹಂತಕರಿಗೆ ಬದುಕಲು ಹಕ್ಕಿಲ್ಲ. ಈಗೀಗಂತೂ ಗೋಶಾಲೆ, ಕೊಟ್ಟಿಗೆಗಳಿಂದ ಗೋವುಗಳನ್ನು ಕದ್ದುಕೊಂಡು ಹೋಗಿ ಕೊಲ್ಲುತ್ತಿರುವ ಘಟನೆಗಳೂ ಬೆಳಕಿಗೆ ಬರುತ್ತಿವೆ. ಇಂಥ ಪ್ರಕರಣವನ್ನು ತಡೆಯಬೇಕು. ಗೋವುಗಳನ್ನು ಸಾಕಿಕೊಂಡವರೆಲ್ಲ ಒಂದೊಂದು ಕತ್ತಿಯನ್ನೂ ಖರೀದಿಸಿಟ್ಟುಕೊಳ್ಳಬೇಕು. ಈ ಮೂಲಕ ಹಸುಗಳ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ. ಇಂದು ಅನೇಕರು ಲಕ್ಷಾಂತರ ರೂಪಾಯಿ ಮೌಲ್ಯದ ಫೋನ್ಗಳನ್ನು ಖರೀದಿಸುತ್ತಿದ್ದಾರೆ. ಅಂದರೆ ಒಂದು ಕತ್ತಿಯನ್ನು ಕೊಳ್ಳುವುದೇನೂ ಅಷ್ಟು ದೊಡ್ಡ ಹೊರೆಯಾಗಲಿಕ್ಕಿಲ್ಲ. ಹೀಗಾಗಿ ಒಂದು ಕತ್ತಿಯನ್ನು ಯಾವುದಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಕು ಹಸುಗಳನ್ನು ಕೊಲ್ಲಲು ಮುಂದಾಗುವವರ ವಿರುದ್ಧ ಕತ್ತಿ ಪ್ರಯೋಗ ತಪ್ಪಲ್ಲ ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕದಲ್ಲಿ ಕೆಲವು ರಾಷ್ಟ್ರವಿರೋಧಿಗಳು ಟಿಪ್ಪು ಸುಲ್ತಾನನ್ನು ಹೊಗಳುತ್ತಿದ್ದಾರೆ. ಅಂಥ ಜನರಿಂದಲೂ ದೇಶವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬ ಮುಖ್ಯ. ಗೋಹತ್ಯೆ, ಮತಾಂತರ, ಲವ್ ಜಿಹಾದ್ನಂತಹ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸುವ ಅಗತ್ಯ ಹೆಚ್ಚಾಗಿ ಕಾಣುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಗೌರಿಗದ್ದೆ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ವಿಎಚ್ಪಿ ನಾಯಕ ಎಂ.ಬಿ.ಪುರಾಣಿಕ್ ಇತರರು ಇದ್ದರು.
ಇದನ್ನೂ ಓದಿ: Viral Video: ಗುಜರಿ ಕಾರಿನ ಭಾಗಗಳಿಂದ ತಯಾರಾಯ್ತು ಹೆಲಿಕಾಪ್ಟರ್; ಟೇಕಾಫ್ ಆದ ಚಾಪರ್ ವಿಡಿಯೋ ವೈರಲ್