ಕೋಲ್ಕತ್ತಾ: ಕೇಂದ್ರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜನವರಿಯಿಂದ ಜಾರಿಗೆ ಬರಲಿದೆ ಎಂದು ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕೈಲಾಶ್ ವಿಜಯ್ವರ್ಗಿಯಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಕೈಲಾಶ್ ವಿಜಯ್ವರ್ಗಿಯಾ ಉತ್ತರ ಪರಗಣ ಜಿಲ್ಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ನಾಗರಿಕತ್ವ ನೀಡುವ ಕೆಲಸ ಜನವರಿ ತಿಂಗಳಿಂದ ಆರಂಭಗೊಳ್ಳಲಿದೆ. ಬೇರೆ ರಾಷ್ಟ್ರಗಳಲ್ಲಿ ಕಿರುಕುಳ ಹೊಂದಿ ನಮ್ಮ ರಾಷ್ಟ್ರಕ್ಕೆ ಬಂದವರಿಗೆ ಆಶ್ರಯ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ’ ಎಂದರು.
ಬೇರೆ ರಾಷ್ಟ್ರಗಳಿಂದ ಬಂದ ನಿರಾಶ್ರಿತ ಹಿಂದುಗಳಿಗೆ ಸಿಎಎ ಅಡಿಯಲ್ಲಿ ಈಗಾಗಲೇ ಪೌರತ್ವ ನೀಡಬೇಕಿತ್ತು. ಆದರೆ, ಕೊರೊನಾ ವೈರಸ್ ಬಂದ ಕಾರಣ ಸಿಎಎ ಅನುಷ್ಠಾನ ಮಾಡುವುದು ತಡವಾಗುತ್ತಿದೆ. ಶೀಘ್ರವೇ ಸಿಎಎ ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಈ ಮೊದಲು ತಿಳಿಸಿದ್ದರು.
ಜನವರಿಯಿಂದ ಸಿಎಎ ಜಾರಿಗೆ ಬರಲಿದೆ ಎನ್ನುವ ಕೈಲಾಶ್ ವಿಜಯ್ವರ್ಗಿಯಾ ಹೇಳಿಕೆಗೆ ಆಡಳಿತಾರೂಢ ತೃಣಮೂಲ ಪಕ್ಷದ ಹಿರಿಯ ನಾಯಕ ಫಿರ್ಹಾದ್ ಹಕೀಮ್ ತಿರುಗೇಟು ನೀಡಿದ್ದಾರೆ. ಪೌರತ್ವ ನೀಡುವ ವಿಚಾರದಲ್ಲಿ ಬಿಜೆಪಿ ಎಲ್ಲರನ್ನೂ ಮೂರ್ಖರನ್ನಾಗಿ ಮಾಡುತ್ತಿದೆ. ಪಶ್ಚಿಮ ಬಂಗಾಳದ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ಬಿಜೆಪಿ ಇನ್ನಾದರೂ ನಿಲ್ಲಿಸಬೇಕಿದೆ ಎಂದು ಅವರು ಹೇಳಿದರು.
ಏನಿದು ಸಿಎಎ?
Citizenship Amendment Act (CAA) ಪೌರತ್ವ ತಿದ್ದುಪಡಿ ಕಾಯ್ದೆಗೆ ಕಳೆದ ವರ್ಷ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿತ್ತು. ಡಿಸೆಂಬರ್ 31, 2014ಕ್ಕೂ ಮೊದಲು ಭಾರತ ಪ್ರವೇಶಿಸಿದ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಹಿಂದೂಗಳು ಸೇರಿದಂತೆ ಆರು ಅಲ್ಪಸಂಖ್ಯಾತ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ. ಈ ಕಾಯ್ದೆಗೆ ಮುಸ್ಲಿಮ್ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಸಂಭವಿಸಿದ ಹಾನಿಯ ನಷ್ಟ ವಸೂಲಿ ಆದೇಶಕ್ಕೆ ಉತ್ತರ ಪ್ರದೇಶ ಹೈಕೋರ್ಟ್ ತಡೆ