ನವದೆಹಲಿ: ಐಟಿ ಸರ್ವರ್ ಹಾಗೂ ಹಾರ್ಡ್‌ವೇರ್ ಉತ್ಪಾದನೆಗೆ ‘ಉತ್ಪಾದನೆ ಆಧಾರಿತ ಭತ್ಯೆ ಯೋಜನೆ’ಯ (PLI scheme) ಎರಡನೇ ಹಂತದ ಅನುದಾನವನ್ನು ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ನಿರ್ಧಾರವನ್ನು ಕೈಗಾರಿಕೋದ್ಯಮಿಗಳು ಶ್ಲಾಘಿಸಿದ್ದಾರೆ ಎಂದು ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಜೋಶ್ ಹೆಚ್ಚಿದೆ! ಐಟಿ ಸರ್ವರ್ ಹಾಗೂ ಹಾರ್ಡ್‌ವೇರ್ ಉತ್ಪಾದನೆಗೂ ಪಿಎಲ್‌ಐ ಸ್ಕೀಮ್ ಘೋಷಿಸುವ ಸಚಿವ ಸಂಪುಟ ನಿರ್ಧಾರಕ್ಕೆ ಉದ್ಯಮದ ಚಾಂಪಿಯನ್‌ಗಳು ಪ್ರಧಾನಿಯನ್ನು ಶ್ಲಾಘಿಸಿದರು’ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಸಂಪುಟ ಸಭೆಯ ನಂತರ ಸಚಿವ ಅಶ್ವಿನಿ ವೈಷ್ಣವ್ ಅವರು, ಐಟಿ ಹಾರ್ಡ್‌ವೇರ್‌ಗಾಗಿ 17,000 ಕೋಟಿ ರೂಪಾಯಿ ಮೌಲ್ಯದ ಪಿಎಲ್‌ಐ ಯೋಜನೆಯ ಎರಡನೇ ಹಂತಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು. ಸರ್ಕಾರವು ದೇಶದ ವಿವಿಧ ವಲಯಗಳಿಗೆ ‘ಉತ್ಪಾದನೆ ಆಧಾರಿತ ಭತ್ಯೆ ಯೋಜನೆ’ಯನ್ನು ಪ್ರಾರಂಭಿಸಿದೆ. ಇದರಡಿ, ಭಾರತದಲ್ಲಿನ ಕಂಪನಿಗಳು ತಮ್ಮ ಉತ್ಪಾದನೆಯ ಆಧಾರದ ಮೇಲೆ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.
Josh is high!
Industry champions lauded PM @narendramodi Ji’s Cabinet decision on PLI scheme for IT Hardware. pic.twitter.com/XNLNmK0V12— Ashwini Vaishnaw (@AshwiniVaishnaw) May 17, 2023
ಐಟಿ ಹಾರ್ಡ್‌ವೇರ್‌ಗಾಗಿ ಪಿಎಲ್‌ಐ ಯೋಜನೆಯಡಿ ಸರ್ಕಾರವು 17,000 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಒದಗಿಸಲಿದೆ ಎಂದು ವೈಷ್ಣವ್ ಮಾಹಿತಿ ನೀಡಿದರು. ಈ ಮೊತ್ತವನ್ನು ಮುಂದಿನ 6 ವರ್ಷಗಳಲ್ಲಿ ಖರ್ಚು ಮಾಡಲಾಗುವುದು. ಇದರಿಂದ ದೇಶದಲ್ಲಿ ಸುಮಾರು 75,000 ಮಂದಿಗೆ ನೇರ ಉದ್ಯೋಗ ಹಾಗೂ ಸುಮಾರು 2 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ. ಇದರೊಂದಿಗೆ, ಸರ್ಕಾರದ ಈ ಯೋಜನೆಯ ಲಾಭವು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಪರ್ಸನಲ್ ಕಂಪ್ಯೂಟರ್‌ಗಳು, ಸರ್ವರ್‌ಗಳು ಮತ್ತು ಇತರ ಸಣ್ಣ ಐಟಿ ಹಾರ್ಡ್‌ವೇರ್ ಸಾಧನಗಳನ್ನು ತಯಾರಿಸುವ ಕಂಪನಿಗಳಿಗೆ ದೊರೆಯಲಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಪ್ರತಿ ವರ್ಷ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಉತ್ಪಾದನೆ ಹೆಚ್ಚಾಗಲಿದ್ದು, ಈ ಮೂಲಕ 3.35 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಇದೇ ವೇಳೆಗೆ ಒಟ್ಟು 2,430 ಕೋಟಿ ರೂ.ಗಳ ಹೂಡಿಕೆಯೂ ಬರಲಿದೆ ಎಂದರು.
ಇದನ್ನೂ ಓದಿ: ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಘೋಷಿಸಿದ ಸಿಸ್ಕೋ; ಪ್ರಧಾನಿ ಮೋದಿ ಬಗ್ಗೆ ಚಕ್ ರಾಬಿನ್ಸ್ ಮೆಚ್ಚುಗೆ
ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಮತ್ತು ಈ ವಿಷಯದಲ್ಲಿ ಚೀನಾಕ್ಕೆ ಕಠಿಣ ಸ್ಪರ್ಧೆಯನ್ನು ನೀಡಲು ಕೇಂದ್ರ ಸರ್ಕಾರ ಬಹಳ ಸಮಯದಿಂದ ಪ್ರಯತ್ನಿಸುತ್ತಿದೆ. ಭಾರತದಲ್ಲಿ ಆ್ಯಪಲ್ ಇಂಕ್ನ ದೊಡ್ಡ ಪ್ರಮಾಣದ ಉತ್ಪನ್ನಗಳ ತಯಾರಿಕೆಯೊಂದಿಗೆ ಇದು ಪ್ರಾರಂಭವಾಗಿದೆ. ಈಗ ಸರ್ಕಾರವು ದೇಶದಲ್ಲಿ ಅಗ್ಗದ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಐಟಿ ಹಾರ್ಡ್‌ವೇರ್‌ಗಳನ್ನು ತಯಾರಿಸಲು ಪ್ರೋತ್ಸಾಹಿಸುತ್ತಿದೆ. ಇದರಿಂದ ದೇಶದ 2 ಲಕ್ಷ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯೂ ಇದೆ.
ಸರ್ಕಾರವು 2020 ರ ಏಪ್ರಿಲ್ನಲ್ಲಿ ಪಿಎಲ್‌ಐ ಯೋಜನೆಯನ್ನು ಪ್ರಾರಂಭಿಸಿತು. ಐಟಿ ಹಾರ್ಡ್‌ವೇರ್‌ಗಾಗಿ ಪಿಎಲ್‌ಐ ಯೋಜನೆಯನ್ನು 2021 ರ ಫೆಬ್ರವರಿಯಲ್ಲಿ ಪ್ರಾರಂಭಿಸಲಾಗಿದ್ದು, 7,350 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇದನ್ನು ಹೆಚ್ಚಿಸುವಂತೆ ಕಂಪನಿಗಳು ಮನವಿ ಮಾಡಿದ್ದವು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:16 pm, Wed, 17 May 23