ಆಡಳಿತಾರೂಢ ಬಿಜೆಪಿಯ (BJP) ವರಿಷ್ಠರ ಸರಣಿ ಸಭೆಗಳ ನಂತರ ಸಂಪುಟ ಪುನಾರಚನೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಕೇಂದ್ರ ಸಚಿವ ಸಂಪುಟದ ಸಭೆ ನಡೆಸಿದ್ದಾರೆ. ಸಭೆಯು ಪ್ರಸ್ತುತ ದೆಹಲಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿದೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ಹಿರಿಯ ನಾಯಕರು ಬುಧವಾರ ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಸಭೆ ನಡೆಸಿದ್ದರು.
ವರದಿಗಳ ಪ್ರಕಾರ, ಸಚಿವ ಸಂಪುಟ ಪುನಾರಚನೆ ಮತ್ತು 2024ರ ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅದೇ ವೇಳೆ ಮುಂಬರುವ ಚುನಾವಣೆಯ ಸಿದ್ಧತೆಯ ಭಾಗವಾಗಿ ಬಿಜೆಪಿಯ ರಾಷ್ಟ್ರೀಯ ಸಂಘಟನೆಗೆ ಮೂವರು ಪ್ರಧಾನ ಕಾರ್ಯದರ್ಶಿಗಳು ಮತ್ತು ನಾಲ್ವರು ಕಾರ್ಯದರ್ಶಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆಯಿದೆ.
ನಿರ್ಣಾಯಕ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಬದಲಾವಣೆಗಳ ಬಗ್ಗೆ ಪ್ರಧಾನಿಗೆ ವಿವರಿಸಲಾಗಿದೆ ಎಂದು ವರದಿಗಳು ಹೇಳಿವೆ.ಉತ್ತರ ಪ್ರದೇಶದ ನಾಲ್ವರು ಬಿಜೆಪಿ ನಾಯಕರು, ಮಧ್ಯಪ್ರದೇಶದ ಮುಂಬರುವ ಚುನಾವಣೆಯಿಂದ ಒಬ್ಬರು, ರಾಜಸ್ಥಾನದಿಂದ (ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ) ಮತ್ತು ಮಹಾರಾಷ್ಟ್ರದಿಂದ ಇಬ್ಬರು ಮೋದಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
ರಾಷ್ಟ್ರೀಯ ಸಾಂಸ್ಥಿಕ ಪುನಾರಚನೆ ಜೊತೆಗೆ, ಆಡಳಿತ ಪಕ್ಷವು ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಉತ್ತರ ಪ್ರದೇಶದ ರಾಜ್ಯ ಘಟಕಗಳಲ್ಲಿ ಬದಲಾವಣೆಗಳ ಬಗ್ಗೆಯೂ ಚರ್ಚಿಸಲಿದೆ, ಕರ್ನಾಟಕದಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ, ಬಿಜೆಪಿಯು ಯಾವುದೇ ಅವಕಾಶವನ್ನು ಮಿಸ್ ಮಾಡದಿರಲು ಶ್ರಮಿಸುತ್ತಿದೆ. ಬಿಜೆಪಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಹೊಂದಿದ್ದು, ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಅದನ್ನು ಮರಳಿ ಪಡೆಯುವ ಗುರಿ ಹೊಂದಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಅನ್ನು ಹತ್ತಿಕ್ಕಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ