ಸೂರತ್: ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ಟ್ರಸ್ಟ್ನ ಮುಖ್ಯಸ್ಥ ಆಚಾರ್ಯ ಧೀರೇಂದ್ರ ಶಾಸ್ತ್ರಿ (Acharya Dhirendra Shastri) ಇದೀಗ ಮತ್ತೊಮ್ಮೆ ಹಿಂದುತ್ವದ ಪುನಶ್ಚೇತನದ ಬಗ್ಗೆ ಮಾತನಾಡಿದ್ದಾರೆ. ಗುಜರಾತ್ನ ಸೂರತ್ ನಗರದಲ್ಲಿ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಧಿರೇಂದ್ರ ಶಾಸ್ತ್ರಿ, ಪಾಕಿಸ್ತಾನವನ್ನು ಬೇಕಾದರೆ ಹಿಂದೂ ರಾಷ್ಟ್ರವಾಗಿ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಜನರು ಒಗ್ಗಟ್ಟು ತೋರಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವರು ಪಾಕಿಸ್ತಾನವನ್ನು ಹಿಂದೂ ರಾಷ್ಟ್ರವಾಗಿ ಮಾಡಬಹುದು ಎಂದು ನಿದರ್ಶನ ಕಲ್ಪಿಸಿದ್ದಾರೆ.
ಗುಜರಾತ್ ರಾಜ್ಯದ ಜನರಿಂದ ತನಗೆ ಹಣವಾಗಲೀ, ಹೆಸರಾಗಲೀ ಮಾಡುವ ಉದ್ದೇಶ ಇಲ್ಲ. ಹಿಂದುತ್ವದ ಅಡಿಯಲ್ಲಿ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸುವುದು ನನ್ನ ಪ್ರಯತ್ನ. ನೀವು ಹಿಂದೂಗಳು ಒಗ್ಗಟ್ಟಾಗಿದ್ದರೆ ಭಾರತವನ್ನಾಗಲೀ ಅಥವಾ ಪಾಕಿಸ್ತಾನವನ್ನಾಗಲೀ ಹಿಂದೂ ದೇಶವಾಗಿ ಮಾಡಬಹುದು ಎಂದು ಬಾಗೇಶ್ವರ್ ಧಾಮ್ ಸರ್ಕಾರ್ ಎಂದು ಖ್ಯಾತರಾಗಿರುವ ಧೀರೇಂದ್ರ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಕೆಲವರು ಭಾರತ ದೇಶವನ್ನು ಹಿಂದೂ ರಾಷ್ಟ್ರವಾಗಿ ಹೇಗೆ ಮಾಡುತ್ತೀರಿ ಎಂದು ಕೇಳುತ್ತಾರೆ. ಭಾರತ ಈಗಾಗಲೇ ಹಿಂದೂ ರಾಷ್ಟ್ರವೇ ಆಗಿದೆ. ಮುಂದೆಯೂ ಹಿಂದೂ ದೇಶವಾಗಿಯೇ ಮುಂದುವರಿಯುತ್ತದೆ ಎಂದು ಬಾಗೇಶ್ವರ್ ಧಾಮ್ ಪೀಠದ ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ: Manipur: ಮಣಿಪುರದಲ್ಲಿ ಕಮಾಂಡೋ ಕಾರ್ಯಾಚರಣೆ; ಕೆಲವೇ ಗಂಟೆಯಲ್ಲಿ 40 ಮಂದಿ ಎನ್ಕೌಂಟರ್
ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣ ಆಗುತ್ತಿದೆ. ಇದು ಹಿಂದೂಗಳಿಗೆ ಸಿಕ್ಕ ಗೆಲುವು. ಈಗ ಮಥುರಾದ ಸರದಿ ಇದೆ. ಸನಾತನಿಗಳು ಮತ್ತೆ ಎಚ್ಚೆತ್ತು ಮಥುರಾದಲ್ಲಿ ಹಿಂದೂಗಳು ಕೃಷ್ಣ ಜನ್ಮಸ್ಥಾನವನ್ನು ಮರಳಿಪಡೆಯಬೇಕಿದೆ ಎಂದು ಧಿರೇಂದ್ರ ಶಾಸ್ತ್ರಿ ಕರೆ ನೀಡಿದ್ದಾರೆ.
ಇದೇ ವೇಳೆ, ಪಾಕಿಸ್ತಾನವನ್ನು ಹಿಂದೂ ದೇಶವಾಗಿ ಮಾಡಬಹುದು ಎಂಬ ಪೀಠಾಧಿಪತಿಯ ಹೇಳಿಕೆಗೆ ಹಲವು ಅಚ್ಚರಿ ವ್ಯಕ್ತಪಡಿಸುತ್ತಿರುವುದು ಹೌದು. ಬಹುತೇಕ ನೂರಕ್ಕೆ ನೂರು ಇಸ್ಲಾಮಿಕ್ ದೇಶವಾಗಿರುವ ಪಾಕಿಸ್ತಾನವನ್ನು ಹಿಂದೂ ದೇಶವಾಗಿ ಮಾಡುವ ಉಪಾಯವಾದರೂ ಏನು ಎಂಬುದನ್ನು ಸ್ವಾಮಿಗಳು ತಿಳಿಸಬೇಕು ಎಂದು ಕೆಲವರು ಕೇಳಿದ್ದಾರೆ.