ಕೇರಳ ಸರ್ಕಾರಕ್ಕೆ 11.7 ಕೋಟಿ ರೂಪಾಯಿ ಪಾವತಿ ಸಾಧ್ಯವಿಲ್ಲ: ಪದ್ಮನಾಭಸ್ವಾಮಿ ದೇವಾಲಯ ಸಮಿತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 12, 2021 | 8:55 PM

ದೇವಸ್ಥಾನದ ಆಗು ಹೋಗುಗಳನ್ನು ನೋಡಿಕೊಳ್ಳಲು ಸುಪ್ರೀಂಕೋರ್ಟ್​ ತಾತ್ಕಾಲಿಕ ಸಮಿತಿ ಒಂದನ್ನು ರಚಿಸಿದೆ. ಈ ಸಮಿತಿಯು ಸುಪ್ರೀಂಕೋರ್ಟ್​ ಬಳಿ ಈ ವಿಚಾರವನ್ನು ಹೇಳಿದೆ.

ಕೇರಳ ಸರ್ಕಾರಕ್ಕೆ 11.7 ಕೋಟಿ ರೂಪಾಯಿ ಪಾವತಿ ಸಾಧ್ಯವಿಲ್ಲ: ಪದ್ಮನಾಭಸ್ವಾಮಿ ದೇವಾಲಯ ಸಮಿತಿ
ಪದ್ಮನಾಭಸ್ವಾಮಿ ದೇವಾಲಯ
Follow us on

ನವದೆಹಲಿ: ವಿಶ್ವವಿಖ್ಯಾತ ಪದ್ಮನಾಭಸ್ವಾಮಿ ದೇವಾಲಯವು ಕೇರಳ ಸರ್ಕಾರಕ್ಕೆ ಪಾವತಿಸಬೇಕಿರುವ ₹ 11.7 ಕೋಟಿ ನಿರ್ವಹಣಾ ವೆಚ್ಚವನ್ನು ಕೊರೊನಾ ಕಾರಣದಿಂದ ಈ ವರ್ಷ ಪಾವತಿಸಲು ಸಾಧ್ಯವಿಲ್ಲ ಎಂದು ದೇವಾಲಯ ನಿರ್ವಹಣಾ ಸಮಿತಿ ಸುಪ್ರಿಂಕೋರ್ಟ್​ಗೆ​ ಹೇಳಿದೆ. ದೇವಾಲಯದ ಭದ್ರತೆ ಹಾಗೂ ನಿರ್ವಹಣೆಗೆ ದೇವಾಲಯವು ರಾಜ್ಯ ಸರ್ಕಾರಕ್ಕೆ ₹ 11.7 ಕೋಟಿ ಪಾವತಿಸಬೇಕಿದೆ. ಆದರೆ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬರಬೇಕಿದ್ದ ದೇಣಿಗೆ ಪ್ರಮಾಣ ತೀವ್ರವಾಗಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಸಾಧ್ಯವೇ ಇಲ್ಲ ಎನ್ನುವುದು ದೇವಸ್ಥಾನದ ನಿಲುವು.

ದೇವಸ್ಥಾನದ ಆಗು ಹೋಗುಗಳನ್ನು ನೋಡಿಕೊಳ್ಳಲು ಸುಪ್ರೀಂಕೋರ್ಟ್​ ತಾತ್ಕಾಲಿಕ ಸಮಿತಿ ಒಂದನ್ನು ರಚಿಸಿದೆ. ಈ ಸಮಿತಿಯು ಸುಪ್ರೀಂಕೋರ್ಟ್​ ಬಳಿ ಈ ವಿಚಾರವನ್ನು ಹೇಳಿದೆ. ಈ ಸಮಯದಲ್ಲಿ ನಾವು ಯಾವುದೇ ಆದೇಶ ಹೊರಡಿಸುವುದಿಲ್ಲ. ಕೇರಳ ಸರ್ಕಾರವು ಈ ಕೋರಿಕೆಯನ್ನು ಪರಿಗಣಿಸಲಿ ಎಂದು ಉನ್ನತ ನ್ಯಾಯಾಲಯ ನಿರ್ದೇಶಿಸಿದೆ.

ರಾಜವಂಶಸ್ಥರೇ ದೇವಸ್ಥಾನವನ್ನು ನಡೆಸಬೇಕು ಎನ್ನುವ ಕೇರಳ ಹೈಕೋರ್ಟ್​ ಆದೇಶವನ್ನು ರದ್ದು ಮಾಡಿದ್ದ ಸುಪ್ರೀಂಕೋರ್ಟ್​, ಭದ್ರತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ರಾಜ್ಯ ಸರ್ಕಾರ ಮೊದಲು  ಭರಿಸಲಿ. ನಂತರ ದೇವಾಲಯ ಅದನ್ನು ಸರ್ಕಾರಕ್ಕೆ ಪಾವತಿಸಲಿ ಎಂದು ಹೇಳಿತ್ತು. ಅದರಂತೆ ಸರ್ಕಾರಕ್ಕೆ 11.7 ಕೋಟಿ ರೂಪಾಯಿ ಪಾವತಿಸಬೇಕಿದೆ.

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಕಳೆದ ಮಾರ್ಚ್​ನಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಈ ವೇಳೆ ದೇವಾಲಯದ ಬಾಗಿಲನ್ನು ಹಾಕಲಾಗಿತ್ತು. ನಂತರ 2020ರ ಆಗಸ್ಟ್​ 26ರಂದು ದೇವಾಲಯವನ್ನು ತೆರೆಯಲಾಗಿತ್ತು. ಆದರೆ, ಅಕ್ಟೋಬರ್​ನಲ್ಲಿ ದೇವಾಲಯದ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡಿತ್ತು. ಹೀಗಾಗಿ, ದೇವಸ್ಥಾನವನ್ನು ಮತ್ತೆ ಮುಚ್ಚಲಾಗಿತ್ತು.

ಇದನ್ನೂ ಓದಿ: 5 ತಿಂಗಳ ಬಳಿಕ ಭಕ್ತರಿಗೆ ಪದ್ಮನಾಭ ಸ್ವಾಮಿಯ ಅನಂತ ದರ್ಶನ