ಬೆಂಗಳೂರು, ಆಗಸ್ಟ್ 10: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇರಳ ಸರ್ಕಾರ ಕೂಡ ಮನವಿ ಮಾಡಿದೆ. ಆದರೆ, ವಯನಾಡು ಭೂಕುಸಿತವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಲು ಈಗಿರುವ ಮಾರ್ಗಸೂಚಿಯ ಪ್ರಕಾರ ಸಾಧ್ಯವಿಲ್ಲ ಎನ್ನಲಾಗಿದೆ. ಇದಕ್ಕೆ ಆಡಳಿತಾರೂಢ ಬಿಜೆಪಿ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಸಂಭವಿಸುವ ವಿಪತ್ತುಗಳು, ನೈಸರ್ಗಿಕ ವಿಕೋಪಗಳು ಮತ್ತು ಇತರ ದುರಂತಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದಂತೆಯೇ ಮುಂದುವರಿಯುತ್ತಿದೆ. ಅದರ ಪ್ರಕಾರ, ನೈಸರ್ಗಿಕ ವಿಕೋಪಗಳನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಲು ಸಾಧ್ಯವಿಲ್ಲ ಎಂದಿದೆ.
ನೈಸರ್ಗಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಅಸ್ತಿತ್ವದಲ್ಲಿರುವ ಮಾರ್ಗಸೂಚಿಯಲ್ಲಿ ಯಾವುದೇ ಅವಕಾಶವಿಲ್ಲ ಎಂದು 2013 ರಲ್ಲಿ ಅಂದಿನ ಗೃಹ ಖಾತೆ ರಾಜ್ಯ ಸಚಿವ ಮುಲ್ಲಪ್ಪಲ್ಲಿ ರಾಮಚಂದ್ರನ್ ಲೋಕಸಭೆಗೆ ತಿಳಿಸಿದ್ದರು. ವಿಪತ್ತಿನ ತೀವ್ರತೆ, ಪ್ರಮಾಣ, ಪರಿಹಾರ ಕಾರ್ಯಕ್ಕೆ ಮಾಡಬೇಕಾದ ಸಹಾಯ, ಸಮಸ್ಯೆಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಹೊಂದಿರುವ ಸಾಮರ್ಥ್ಯ, ಇತ್ಯಾದಿ ಎಲ್ಲ ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರವು ವಿಪತ್ತನ್ನು ನಿರ್ಣಯಿಸುತ್ತದೆ. ವಿಪತ್ತಿಗೆ ಸಿಲುಕಿರುವ ರಾಜ್ಯಕ್ಕೆ ಸಹಾಯ ಮತ್ತು ಪರಿಹಾರ ಒದಗಿಸುವುದು ಆದ್ಯತೆಯಾಗಿದೆ. ಭಾರಿ ವಿಪತ್ತು ಸಂಭವಿಸಿದಲ್ಲಿ, ಎನ್ಡಿಆರ್ಎಫ್ ಹೆಚ್ಚುವರಿ ಸಹಾಯ ನೀಡುವ ಬಗ್ಗೆ ಪರಿಗಣಿಸುತ್ತದೆ ಎಂದು ಅವರು ತಿಳಿಸಿದ್ದರು.
ಈ ವಿಚಾರವಾಗಿ ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ನಾಯಕ ವಿ ಮುರಳೀಧರನ್ ಕೂಡ ಸ್ಪಷ್ಟನೆ ನೀಡಿದ್ದರು. ರಾಷ್ಟ್ರೀಯ ವಿಪತ್ತು ಎಂದು ಘೋಷಿಸದಿದ್ದರೂ, ಪ್ರತಿ ವಿಪತ್ತನ್ನು ಅದರ ತೀವ್ರತೆಗೆ ಅನುಗುಣವಾಗಿ ಪರಿಹರಿಸಲಾಗುತ್ತದೆ. ಕೇಂದ್ರವು ಅಗತ್ಯ ನೆರವು ನೀಡಿಯೇ ನೀಡುತ್ತದೆ. ಈ ದುರಂತದ ಸಮಯದಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಮುರಳೀಧರನ್ ಹೇಳಿದ್ದರು.
ವಯನಾಡು ದುರಂತ ಸಂಭವಿಸಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರ ಕುಟುಂಬಗಳಿಗೆ 50,000 ರೂಪಾಯಿಗಳನ್ನು ಘೋಷಿಸಿದ್ದರು.
ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಬೆನ್ನಲ್ಲೇ ಮೋದಿ ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್, ಸೇನೆ, ವಾಯುಪಡೆ, ನೌಕಾಪಡೆ, ಅಗ್ನಿಶಾಮಕ ಸೇವೆಗಳು, ಸಿವಿಲ್ ಡಿಫೆನ್ಸ್ ಅನ್ನು ಕಳುಹಿಸಿಕೊಟ್ಟಿದೆ. ಒಟ್ಟು 1200 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಗಾಯಾಳುಗಳ ಚಿಕಿತ್ಸೆಗಾಗಿ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳೊಂದಿಗೆ 100 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿಕೊಟ್ಟಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯು ವಯನಾಡಿನಲ್ಲಿ ರಕ್ಷಣಾ ಕಾರ್ಯಕ್ಕಾಗಿ ರಾತ್ರೋರಾತ್ರಿ 190 ಅಡಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದೆ. ಇದು ಭಾರೀ ಯಂತ್ರೋಪಕರಣಗಳ ಸಾಗಾಟ ಮತ್ತು ಆಂಬ್ಯುಲೆನ್ಸ್‌ಗಳ ಸಂಚಾರವನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಸೇತುವೆಯ ನಿರ್ಮಾಣ ಕೇವಲ 71 ಗಂಟೆಗಳಲ್ಲಿ ಪೂರ್ಣಗೊಂಡಿತ್ತು. ಇದು ಸುಮಾರು 200 ಜನರನ್ನು ರಕ್ಷಿಸಲು ನೆರವಾಯಿತು ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಪರಿಹಾರ ಮತ್ತು ಪುನರ್ವಸತಿ ಪರಿಶೀಲನೆಗಾಗಿ ವಯನಾಡ್‌ಗೆ ಭೇಟಿ ನೀಡಲಿದ್ದಾರೆ ಮೋದಿ
ಇಲ್ಲಿಯವರೆಗೆ, ಒಟ್ಟು 30 ಜನರನ್ನು ರಕ್ಷಿಸಲಾಗಿದೆ, 520 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 112 ಮೃತ ದೇಹಗಳನ್ನು ಎನ್ಡಿಆರ್ಎಫ್ ರಕ್ಷಣಾ ತಂಡಗಳು ಹೊರತೆಗೆದಿವೆ.
ಈ ವರ್ಷ ಏಪ್ರಿಲ್ 1 ರಂದು ಕೇರಳ ಎಸ್‌ಡಿಆರ್‌ಎಫ್ ಖಾತೆಯಲ್ಲಿ ಸುಮಾರು 395 ಕೋಟಿ ರೂ. ಇತ್ತು. ಎಸ್‌ಡಿಆರ್‌ಎಫ್‌ಗೆ ಕೇಂದ್ರದಿಂದ ಪಾವತಿಯಾಗಬೇಕಿದ್ದ ಮೊದಲ ಕಂತಿನ ಮೊತ್ತ 145.60 ಕೋಟಿ ರೂ. ಜುಲೈ 31 ರಂದು ಅವಧಿಗಿಂತಲೂ ಮುಂಚಿತವಾಗಿಯೇ ಬಿಡುಗಡೆ ಮಾಡಲಾಗಿದೆ. ಕಳೆದ 5 ವರ್ಷಗಳಲ್ಲಿ ಒಟ್ಟು ಸುಮಾರು 1200 ಕೋಟಿ ರೂ. ಮೊತ್ತವನ್ನು ಮೋದಿ ಸರ್ಕಾರವು ಎಸ್‌ಡಿಆರ್‌ಎಫ್‌ಗೆ ನೀಡಿದೆ. ಇದರ ಜೊತೆಗೆ ಮೋದಿ ಸರ್ಕಾರವು ಕಳೆದ 5 ವರ್ಷಗಳಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಗೆ 445 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ