ಯುದ್ಧವನ್ನು ನಿಲ್ಲಿಸುವಂತೆ ನಾವು ರಷ್ಯಾ ಅಧ್ಯಕ್ಷ ಪುಟಿನ್ (Vladimir Putin) ಬಳಿ ಕೇಳಿಕೊಳ್ಳಬಹುದೇ ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (CJI N.V Ramana) ಪ್ರಶ್ನಿಸಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಶೀಘ್ರವೇ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಲಾದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆಯನ್ನು ಅವರು ಕೇಳಿದ್ದಾರೆ. ಈ ವಿಚಾರದಲ್ಲಿ ನಾವು ಅಂದರೆ ಸುಪ್ರೀಂಕೋರ್ಟ್ ಏನು ಮಾಡಬಹುದು? ಇದೀಗ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ಎನ್ನುತ್ತೀರಿ. ನಾಳೆ ಪುಟಿನ್ಗೇ ಆದೇಶ ನೀಡಿ ಎಂದು ಕೇಳುತ್ತೀರಿ. ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ನಮಗೂ ಕನಿಕರವಿದೆ. ಕೇಂದ್ರ ಸರ್ಕಾರವೂ ತನ್ನ ಕೆಲಸ ಮಾಡುತ್ತಿದೆ. ಹೀಗಿರುವಾಗ ನಾವು ಹೋಗಿ ಪುಟಿನ್ ಬಳಿ ಯುದ್ಧ ನಿಲ್ಲಿಸಲು ಕೇಳಲು ಸಾಧ್ಯವೇ ಎಂದು ಸಿಜೆಐ ಎನ್.ವಿ.ರಮಣ ಅರ್ಜಿದಾರರಿಗೆ ಪ್ರಶ್ನಿಸಿದ್ದಾರೆ.
ಏನಿದು ಅರ್ಜಿ?
ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿನಿ ಫಾತಿಮಾ ಅಹಾನಾ (24) ಅವರ ತಂದೆ ಕುಟುಂಬ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಒಡೆಸ್ಸಾ ಯೂನಿರ್ವಸಿಟಿಯಲ್ಲಿ ಮೆಡಿಕಲ್ ಓದುತ್ತಿರುವ ಸುಮಾರು 250 ವಿದ್ಯಾರ್ಥಿಗಳು ಕಳೆದ ಆರು ದಿನಗಳಿಂದ ಮೋಲ್ಡೋವಾ-ರೊಮೇನಿಯಾ ಗಡಿಯಲ್ಲಿ ಸಿಲುಕಿದ್ದಾರೆ. ಅವರಿಗೆ ಯಾರದ್ದೂ ಸಹಾಯ ದೊರೆಯುತ್ತಿಲ್ಲ. ಊಟ ತಿಂಡಿ ಏನೂ ಲಭ್ಯವಿಲ್ಲ. ರೊಮೇನಿಯಾಕ್ಕೆ ಕಾಲಿಡಲು ಅವರಿಗೆ ಅನುಮತಿ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಉಕ್ರೇನ್ ದಾಟಿ ಮೋಲ್ಡೋವಾಕ್ಕೆ ಪ್ರವೇಶಿಸಲೂ ಸಾಧ್ಯವಾಗುತ್ತಿಲ್ಲ. ಆದರೆ ಏರ್ ಇಂಡಿಯಾ ವಿಮಾನಗಳು ರೊಮೇನಿಯಾದಿಂದ ಸಂಚಾರ ಮಾಡುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಿ, ಅವರಿಗೆ ಗಡಿ ದಾಟಲು ಅನುಮತಿ ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಕೋರ್ಟ್ ಹೇಳಿದ್ದೇನು?
ಈ ಅರ್ಜಿ ವಿಚಾರಣೆಯನ್ನು ಇಂದು ಮುಂಜಾನೆ ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠ ಕೈಗೆತ್ತಿಕೊಂಡಿತ್ತು. ಹಿರಿಯ ವಕೀಲ ಎ.ಎಂ.ಡಾರ್ ಈ ವಿಚಾರ ಪ್ರಸ್ತಾಪ ಮಾಡಿದಾಗ ಸಿಜೆಐ ಪ್ರಶ್ನೆ ಮಾಡಿದ್ದಾರೆ. ನಿಜಕ್ಕೂ ಈ ವಿಚಾರದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ. ಪುಟಿನ್ ಯುದ್ಧ ನಿಲ್ಲಿಸಲಿ ಎಂದು ನಾವು ಆದೇಶ ನೀಡಬೇಕೆಂಬುದು ನಿಮ್ಮ ಅಭಿಲಾಷೆಯೇ? ಎಂದು ಕೇಳಿದ್ದಾರೆ. ನಂತರ ಅಟರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿ, ವಿದ್ಯಾರ್ಥಿಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ನಾಲ್ವರು ಸಚಿವರನ್ನು ಉಕ್ರೇನ್ ಗಡಿ ರಾಷ್ಟ್ರಗಳಿಗೆ ಕಳಿಸಿದೆ. ರೊಮೇನಿಯಾಕ್ಕೂ ತೆರಳಿದ್ದಾರೆ. ಅಲ್ಲಿದ್ದವರಿಗೆ ಖಂಡಿತ ವಿಮಾನ ಸಿಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ ದೇಶದ ಮೇಲೆ ಅವಲಂಬನೆ ಸೃಷ್ಟಿಸಿದ್ದು ಕಾಂಗ್ರೆಸ್; ಈಗ ಮುಂದಾಲೋಚನೆಯಿಂದ ತಟಸ್ಥ ನಿಲುವು: ಪ್ರತಾಪ್ ಸಿಂಹ
Published On - 2:58 pm, Thu, 3 March 22