ರಷ್ಯಾ ಅಧ್ಯಕ್ಷ ಪುಟಿನ್ ಜತೆ ಫೋನ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ; ಭಾರತೀಯರ ಸ್ಥಳಾಂತರದ ಬಗ್ಗೆ ಚರ್ಚೆ
ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷರ ನಡುವೆ ನಡೆಯುತ್ತಿರುವ ಎರಡನೇ ದೂರವಾಣಿ ಮಾತುಕತೆ ಇದಾಗಿದೆ.
ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ನಿನ್ನೆ (ಮಾರ್ಚ್ 2) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಉಕ್ರೇನ್ನಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ರಷ್ಯಾ ಸೇನೆಯ ತೀವ್ರದಾಳಿಗೆ ತುತ್ತಾಗಿರುವ ಖಾರ್ಕೀವ್ನಿಂದ ಭಾರತೀಯರನ್ನು ಸ್ಥಳಾಂತರ ಮಾಡಬೇಕಾಗಿದೆ. ಸದ್ಯ ಇದು ಆದ್ಯತೆ ಮತ್ತು ಅಗತ್ಯತೆಯಾಗಿದೆ ಎಂದೂ ರಷ್ಯಾ ಅಧ್ಯಕ್ಷರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷರ ನಡುವೆ ನಡೆಯುತ್ತಿರುವ ಎರಡನೇ ದೂರವಾಣಿ ಮಾತುಕತೆ ಇದಾಗಿದೆ. ಉಕ್ರೇನ್-ರಷ್ಯಾ ಮಧ್ಯದ ಬಿಕ್ಕಟ್ಟಿಗೆ ದೀರ್ಘ ಇತಿಹಾಸವಿದ್ದರೂ ಯುದ್ಧದ ರೂಪ ತಳೆದದ್ದು ಫೆ.24ರಂದು. ಉಕ್ರೇನ್ನ ಬಂಡಾಯ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ಗಳ ಬೆಂಬಲದಿಂದ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿದರು. ಅಂದಿನಿಂದ ರಷ್ಯಾ ಸೇನೆ ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿದೆ. ಹಾಗೇ ಇತ್ತ ಭಾರತ ಕೂಡ ಅಲ್ಲಿರುವ ತನ್ನ ನಾಗರಿಕರನ್ನು ಕರೆಸುಕೊಳ್ಳುವ ಪ್ರಯತ್ನವನ್ನು ಅವಿರತವಾಗಿ ನಡೆಸುತ್ತಿದೆ. ಅದರಲ್ಲೂ ಖಾರ್ಕೀವ್ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ರಷ್ಯಾ ದಾಳಿಗೆ ಮೃತಪಟ್ಟ ನಂತರ ಸ್ಥಳಾಂತರ ಕಾರ್ಯಾಚರಣೆ ಇನ್ನಷ್ಟು ಚುರುಕಾಗಿದೆ.
ಇಬ್ಬರು ನಾಯಕರ ದೂರವಾಣಿ ಮಾತುಕತೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜಾಸ್ತಿ ಏನೂ ವಿವರಣೆ ನೀಡಿಲ್ಲ. ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಬ್ಬರೂ ಉಕ್ರೇನ್ ಬಗ್ಗೆಯೇ ಮಾತನಾಡಿದ್ದಾರೆ. ಅದರಲ್ಲೂ ಖಾರ್ಕೀವ್ ಪರಿಸ್ಥಿತಿ, ಅಲ್ಲಿರುವ ಭಾರತೀಯ ಸ್ಥಿತಿಗತಿ ಬಗ್ಗೆ ಚರ್ಚೆ ನಡೆದಿದೆ. ಭಾರತೀಯರ ಸುರಕ್ಷಿತ ಸ್ಥಳಾಂತರದ ಕುರಿತೂ ಮಾತುಕತೆ ನಡೆದಿದೆ ಎಂದು ಹೇಳಿದೆ.
ಖಾರ್ಕೀವ್ನಲ್ಲಿ ಭಾರತದ ವಿದ್ಯಾರ್ಥಿ ಮೃತಪಟ್ಟ ನಂತರ ಭಾರತ ಸರ್ಕಾರ, ಇಲ್ಲಿರುವ ರಷ್ಯಾ ಮತ್ತು ಉಕ್ರೇನ್ ರಾಯಭಾರಿಗಳನ್ನು ಕರೆಸಿತ್ತು. ಖಾರ್ಕಿವ್, ಸುಮಿ ಪ್ರದೇಶಗಳೆಲ್ಲ ರಷ್ಯಾ ಗಡಿಗೆ ಹತ್ತಿರ ಇರುವ ಕಾರಣ ಅಲ್ಲಿರುವ ಭಾರತೀಯರನ್ನು ರಕ್ಷಿಸಲು ಅನುವು ಮಾಡಿಕೊಡುವಂತೆ ರಷ್ಯಾಕ್ಕೆ ಕೂಡ ಮನವಿ ಮಾಡಿತ್ತು. ಅದನ್ನು ರಷ್ಯಾ ಪುರಸ್ಕರಿಸಿದೆ. ಹೀಗಾಗಿ ಖಾರ್ಕಿವ್ ಮತ್ತು ಸುಮಿ ಯುದ್ಧವಲಯದಲ್ಲಿರುವ ಸುಮಾರು 4000 ಭಾರತೀಯರನ್ನು ರಷ್ಯಾ ಮೂಲಕ ರಕ್ಷಿಸುವ ವ್ಯವಸ್ಥೆ ಆಗುತ್ತಿದೆ. ಇನ್ನು ರಷ್ಯಾ ದಾಳಿಗೆ ನವೀನ್ ಮೃತಪಟ್ಟ ಪ್ರಕರಣದ ತನಿಖೆಯನ್ನೂ ನಡೆಸುವುದಾಗಿ ರಷ್ಯಾ ರಾಯಭಾರಿ ಭಾರತ ಸರ್ಕಾರಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಿಂದ ಭಾರತೀಯರ ಸ್ಥಳಾಂತರಕ್ಕೆ ಪಾಕಿಸ್ತಾನ ವಾಯುಮಾರ್ಗ ಬಳಕೆ ಮಾಡಿಕೊಳ್ಳದ ವಾಯುಸೇನೆ
Published On - 9:47 am, Thu, 3 March 22