ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರಕ್ಕೆ ಪಾಕಿಸ್ತಾನ ವಾಯುಮಾರ್ಗ ಬಳಕೆ ಮಾಡಿಕೊಳ್ಳದ ವಾಯುಸೇನೆ

ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರಕ್ಕೆ ಪಾಕಿಸ್ತಾನ ವಾಯುಮಾರ್ಗ  ಬಳಕೆ ಮಾಡಿಕೊಳ್ಳದ ವಾಯುಸೇನೆ
ಸಾಂಕೇತಿಕ ಚಿತ್ರ

ಈ ಹಿಂದೆ ಲಡಾಖ್​​ನಲ್ಲಿ ಚೀನಾದೊಂದಿಗೆ ಸಂಘರ್ಷ ಹೆಚ್ಚಾಗಿದ್ದಾಗ ಅಲ್ಲಿಗೆ ಯುದ್ಧ ಟ್ಯಾಂಕ್​​ಗಳನ್ನು ಸಾಗಿಸಿದ್ದು ಇದೇ ಸಿ-17 ಗ್ಲೋಬ್​ ಮಾಸ್ಟರ್​ ಏರ್​ಕ್ರಾಫ್ಟ್​. ಅಷ್ಟೇ ಅಲ್ಲ, ಕೊವಿಡ್​ 19 ಎರಡನೇ ಅಲೆಯಲ್ಲಿ ದೇಶದಲ್ಲಿ ಆಕ್ಸಿಜನ್​ ಕೊರತೆಯಾದಾಗ ವಿವಿಧ ದೇಶಗಳಿಂದ ಆಕ್ಸಿಜನ್​ ಟ್ಯಾಂಕರ್​ ಹೊತ್ತು ತಂದಿದೆ.

TV9kannada Web Team

| Edited By: Lakshmi Hegde

Mar 03, 2022 | 10:18 AM

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡುತ್ತಿರುವ ಭಾರತೀಯ ವಾಯುಪಡೆ (Air Force) ತನ್ನ ವಿಮಾನ ಸಂಚಾರಕ್ಕೆ ಪಾಕಿಸ್ತಾನ ವಾಯುಮಾರ್ಗವನ್ನು ಬಳಸುತ್ತಿಲ್ಲ ಎಂದು ಹೇಳಲಾಗಿದೆ. ಐಎಎಫ್​​ನ ಸಿ-17 ಗ್ಲೋಬ್​ಮಾಸ್ಟರ್​ ಟ್ರಾನ್ಸ್​ಪೋರ್ಟ್​ನ ನಾಲ್ಕು ವಿಮಾನಗಳು ಯುದ್ಧ ಪೀಡಿತ ಉಕ್ರೇನ್​​ನಿಂದ  (Ukraine)ಭಾರತೀಯರನ್ನು ವಾಪಸ್​ ಕರೆತರುವ ಕೆಲಸ ಮಾಡುತ್ತಿವೆ. ಈಗಾಗಲೇ ಏರ್​​ಫೋರ್ಸ್​ ವಿಮಾನಗಳು 800 ಭಾರತೀಯರನ್ನು ಕರೆತಂದಿವೆ. ಆದರೆ ಇವು ಪಾಕಿಸ್ತಾನದ ಏರ್​ಸ್ಪೇಸ್​ ಬಳಸಿಕೊಳ್ಳುತ್ತಿಲ್ಲ. ಇಂಥ ಸಂದರ್ಭದಲ್ಲಿ ನಾವ್ಯಾಕೆ ಪಾಕಿಸ್ತಾನದಿಂದ ಸಹಾಯ ಕೇಳಬೇಕು? ಆ ದೇಶದಿಂದ ಮಿಲಿಟರಿ ಸಹಕಾರವನ್ನು ಕೇಳಬೇಕು? ಪಾಕಿಸ್ತಾನ ವಾಯುಮಾರ್ಗ ಬಳಸಿಕೊಳ್ಳದೆ ಇದ್ದರೆ 25-30 ನಿಮಿಷ ಹೆಚ್ಚು ಸಮಯ ಬೇಕಾಗಬಹುದು ಹೊರತು ಇನ್ನೇನೂ ವ್ಯತ್ಯಾಸ ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಉಕ್ರೇನ್​​ನಲ್ಲಿ ಪರಿಸ್ಥತಿ ಹದಗೆಟ್ಟಿದೆ. ಭಾರತೀಯರು ಸೇರಿ ಹಲವು ದೇಶಗಳ ಪ್ರಜೆಗಳನ್ನು ಬಂಕರ್​​ನಲ್ಲಿ, ಹಾಸ್ಟೆಲ್​ನ ಬೇಸ್​​ಮೆಂಟ್​ಗಳಲ್ಲಿ ಅವಿತಿಟ್ಟುಕೊಂಡು ಜೀವ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ವಾಪಸ್​ ಕರೆತರಲು ಕೇಂದ್ರ ಸರ್ಕಾರ ಆಪರೇಶನ್​ ಗಂಗಾ ಎಂಬ ಕಾರ್ಯಾಚರಣೆ ನಡೆಸುತ್ತಿದೆ. ಇನ್ನಿತರ ಕಮರ್ಷಿಯಲ್​ ವಿಮಾನಗಳ ಜತೆ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ. ಈ ಹಿಂದೆ ಲಡಾಖ್​​ನಲ್ಲಿ ಚೀನಾದೊಂದಿಗೆ ಸಂಘರ್ಷ ಹೆಚ್ಚಾಗಿದ್ದಾಗ ಅಲ್ಲಿಗೆ ಯುದ್ಧ ಟ್ಯಾಂಕ್​​ಗಳನ್ನು ಸಾಗಿಸಿದ್ದು ಇದೇ ಸಿ-17 ಗ್ಲೋಬ್​ ಮಾಸ್ಟರ್​ ಏರ್​ಕ್ರಾಫ್ಟ್​. ಅಷ್ಟೇ ಅಲ್ಲ, ಕೊವಿಡ್​ 19 ಎರಡನೇ ಅಲೆಯಲ್ಲಿ ದೇಶದಲ್ಲಿ ಆಕ್ಸಿಜನ್​ ಕೊರತೆಯಾದಾಗ ವಿವಿಧ ದೇಶಗಳಿಂದ ಆಕ್ಸಿಜನ್​ ಟ್ಯಾಂಕರ್​ ಹೊತ್ತು ತಂದಿದೆ. ಇತ್ತೀಚೆಗೆ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗ ಅಲ್ಲಿರುವವ ಭಾರತೀಯರು, ಅಲ್ಪಸಂಖ್ಯಾತರನ್ನೂ ಹೊತ್ತು ತಂದಿದ್ದು ಇದೇ ವಿಮಾನವಾಗಿದೆ. ಸುಮಾರು 80 ಟನ್​​ಗಳಷ್ಟು ತೂಕವನ್ನು ಹೊರಬಲ್ಲ ಸಾಮರ್ಥ್ಯ ಇರುವ ಸಿ-17 ಗ್ಲೋಬ್​ ಮಾಸ್ಟರ್​ ಸದ್ಯ ಉಕ್ರೇನ್​ನಿಂದ ಭಾರತೀಯರನ್ನು ಏರ್​​ಲಿಫ್ಟ್ ಮಾಡಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್​ ಜತೆ ಫೋನ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ; ಭಾರತೀಯರ ಸ್ಥಳಾಂತರದ ಬಗ್ಗೆ ಚರ್ಚೆ

Follow us on

Related Stories

Most Read Stories

Click on your DTH Provider to Add TV9 Kannada