ಯುದ್ಧನೆಲ ಉಕ್ರೇನ್ನಿಂದ ಭಾರತೀಯರ ಸ್ಥಳಾಂತರಕ್ಕೆ ಏರ್ಫೋರ್ಸ್ ಬಲ; ಕಾರ್ಯಾಚರಣೆಗೆ ಸಾಥ್ ನೀಡುವಂತೆ ಪ್ರಧಾನಿ ಮೋದಿ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಸೂಚನೆ ಅನ್ವಯ ಭಾರತೀಯ ವಾಯುಪಡೆ ಉಕ್ರೇನ್ನಲ್ಲಿರುವ ಭಾರತೀಯರನ್ನು ಏರ್ಲಿಫ್ಟ್ ಮಾಡುವ ಮೂಲಕ ಸ್ಥಳಾಂತರಿಸಲು ಸಿ-17 ವಿಮಾನವನ್ನು ಬಳಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಕ್ರೇನ್ನಲ್ಲಿ ರಷ್ಯಾ ಯುದ್ಧ (Russia Attack On Ukraine) ಸಾರಿದಾಗಿನಿಂದಲೂ ಅಲ್ಲಿರುವ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರ ಎಡಬಿಡದೆ ಪ್ರಯತ್ನ ಮಾಡುತ್ತಲೇ ಇದೆ. ಇಷ್ಟು ದಿನ ಆಪರೇಶನ್ ಗಂಗಾ (Operation Ganga) ಹೆಸರಿನ ಕಾರ್ಯಾಚರಣೆಯನ್ನು ಏರ್ ಇಂಡಿಯಾ ವಿಮಾನಗಳ ಮೂಲಕ ನಡೆಸಲಾಗುತ್ತಿತ್ತು. ಅಂದರೆ ಏರ್ ಇಂಡಿಯಾ ವಿಮಾನ ಉಕ್ರೇನ್ನ ನೆರೆ ರಾಷ್ಟ್ರಗಳಾದ ಪೋಲ್ಯಾಂಡ್, ರೊಮೇನಿಯಾಗಳಿಗೆ ತೆರಳಿ ಅಲ್ಲಿಂದ ಭಾರತೀಯರನ್ನು ಕರೆತರುತ್ತಿದೆ. ಇಲ್ಲಿಯವರೆಗೆ ಏರ್ ಇಂಡಿಯಾದ ಏಳು ವಿಮಾನಗಳು ಉಕ್ರೇನ್ನಲ್ಲಿರುವ ಸುಮಾರು 1600 ಭಾರತೀಯರನ್ನು ವಾಪಸ್ ಕರೆತಂದಿವೆ. ಆದರೆ ಈ ಕಾರ್ಯಾಚರಣೆಗೆ ಇನ್ನು ಭಾರತೀಯ ವಾಯು ಸೇನೆ (Airforce) ಬಲ ಸಿಗಲಿದೆ. ಉಕ್ರೇನ್(Ukraine)ನಿಂದ ಭಾರತೀಯರನ್ನು ಸ್ಥಳಾಂತರ ಮಾಡುವ ಕಾರ್ಯಕ್ಕೆ ಸಾಥ್ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಏರ್ಫೋರ್ಸ್ಗೆ ಸೂಚನೆ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಸೂಚನೆ ಅನ್ವಯ ಭಾರತೀಯ ವಾಯುಪಡೆ ಉಕ್ರೇನ್ನಲ್ಲಿರುವ ಭಾರತೀಯರನ್ನು ಏರ್ಲಿಫ್ಟ್ ಮಾಡುವ ಮೂಲಕ ಸ್ಥಳಾಂತರಿಸಲು ಸಿ-17 ವಿಮಾನವನ್ನು ಬಳಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ನಡೆಯುತ್ತಿರುವ ಆಪರೇಶನ್ ಗಂಗಾ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ, ಸಾಥ್ ನೀಡುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನರನ್ನು ಅಲ್ಲಿಂದ ಕರೆತರುವ ಅನಿವಾರ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಲವಾದ ಮೂಲಗಳು ಮಾಹಿತಿ ನೀಡಿವೆ.
ಇನ್ನು ಉಕ್ರೇನ್ಗೆ ಮಾನವೀಯ ನೆರವು ನೀಡಲು ಭಾರತ ಮುಂದಾಗಿದ್ದು, ಅದಕ್ಕೆ ಕೂಡ ಏರ್ಫೋರ್ಸ್ ವಿಮಾನಗಳೇ ಬಳಕೆಯಾಗಲಿವೆ. ಉಕ್ರೇನ್ ರಾಯಭಾರಿ ಮಾಡಿದ್ದ ಮನವಿ ಮೇರೆಗೆ ಆಹಾರ, ಇಂಧನಗಳು, ಔಷಧ ಸೇರಿ ಇನ್ನಿತರ ಅಗತ್ಯವಸ್ತುಗಳ ಪೂರೈಕೆ ಮಾಡಲು ಭಾರತ ನಿರ್ಧಾರ ಮಾಡಿದೆ. ಹಾಗೇ, ಇನ್ನೊಂದೆಡೆ ಕೇಂದ್ರದ ನಾಲ್ವರು ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಹರ್ದೀಪ್ ಸಿಂಗ್ ಪುರಿ, ವಿಕೆ ಸಿಂಗ್ ಮತ್ತು ಕಿರಣ್ ರಿಜಿಜು ಉಕ್ರೇನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಅಲ್ಲಿಗೆ ತೆರಳುತ್ತಿದ್ದರು. ಹರ್ದೀಪ್ ಸಿಂಗ್ ಪುರಿ ಇಂದು ಹಂಗೇರಿಯಲ್ಲಿರುವ ಬುಡಾಪೆಸ್ಟ್ನತ್ತ ತೆರಳುತ್ತಿದ್ದು, ಅದೇ ವಿಮಾನದಲ್ಲಿ ಇನ್ನೊಂದು ಬ್ಯಾಚ್ನಲ್ಲಿ ಭಾರತೀಯರು ಆಗಮಿಸಲಿದ್ದಾರೆ.
ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರುವುದಕ್ಕೆ 5 ಮುಖ್ಯ ಕಾರಣಗಳು ಇಲ್ಲಿವೆ
Published On - 1:33 pm, Tue, 1 March 22