UP Assembly Polls: ಉತ್ತರ ಪ್ರದೇಶದಲ್ಲಿಂದು 6ನೇ ಹಂತದ ಮತದಾನ; ಯೋಗಿ ಆದಿತ್ಯನಾಥ್, ಸ್ವಾಮಿ ಪ್ರಸಾದ್ ಮೌರ್ಯ ಚುನಾವಣಾ ಕಣದಲ್ಲಿ
ಗೋರಖ್ಪುರದ ಲೋಕಸಭಾ ಕ್ಷೇತ್ರದ ಎಂಪಿಯಾಗಿದ್ದ ಯೋಗಿ ಆದಿತ್ಯನಾಥ್ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದಾರೆ. ಮೊದಲು ಯೋಗಿ ಅಯೋಧ್ಯೆಯಿಂದ ಸ್ಪರ್ಧಿಸುವುದಾಗಿ ಹೇಳಲಾಗಿತ್ತು.
ಉತ್ತರ ಪ್ರದೇಶದಲ್ಲಿಂದು 6ನೇ ಹಂತದ ಮತದಾನ ಪ್ರಾರಂಭವಾಗಿದೆ. ಇಂದು 10 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ (Uttar Pradesh Assembly Election) ಇದೆ. ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ 676 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ನ ಅಜಯ್ ಕುಮಾರ್ ಲಲ್ಲು, ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಕೂಡ ಕಣದಲ್ಲಿದ್ದಾರೆ. ಈ ಸ್ವಾಮಿ ಪ್ರಸಾದ್ ಮೌರ್ಯ ಮೊದಲು ಬಿಜೆಪಿಯಲ್ಲೇ ಇದ್ದು, ಯೋಗಿ ಸಂಪುಟದಲ್ಲಿ ಸಚಿವರಾಗಿದ್ದರು. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಹಿಂದುಳಿದವರ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಮಾಡಿ, ಅಖಿಲೇಶ್ ಯಾದವ್ ಬಣ ಸೇರಿಕೊಂಡವರು. ಇವರಿಂದು ಫಜಿಲ್ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಇಂದು ಅಂಬೇಡ್ಕರ್ನಗರ, ಬಲರಾಂಪುರ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜಗಂಜ್, ಗೋರಖ್ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದ್ದು, ಇದರಲ್ಲಿ 11 ಕ್ಷೇತ್ರಗಳು ಬಿಜೆಪಿ ಪಾಲಿಗೆ ನಿರ್ಣಾಯಕ. ಯಾಕೆಂದರೆ 2017ರಲ್ಲಿ ಬಿಜೆಪಿ ಈ 57 ಕ್ಷೇತ್ರಗಳಲ್ಲಿ 46 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಉತ್ತರ ಪ್ರದೇಶದಲ್ಲಿ ಆರನೇ ಹಂತದ ಮತದಾನದ ಪ್ರಚಾರ ನಿನ್ನೆ ಸಂಜೆ 6ಗಂಟೆಗೆ ಮುಕ್ತಾಯಗೊಂಡಿತ್ತು.
ಗೋರಖ್ಪುರದ ಲೋಕಸಭಾ ಕ್ಷೇತ್ರದ ಎಂಪಿಯಾಗಿದ್ದ ಯೋಗಿ ಆದಿತ್ಯನಾಥ್ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದಾರೆ. ಮೊದಲು ಯೋಗಿ ಅಯೋಧ್ಯೆಯಿಂದ ಸ್ಪರ್ಧಿಸುವುದಾಗಿ ಹೇಳಲಾಗಿತ್ತು. ಆದರೆ ನಂತರ ಅವರು ತಮ್ಮ ತವರು ಜಿಲ್ಲೆ ಗೋರಖ್ಪುರ ವಿಧಾನಸಭಾ ಕ್ಷೇತ್ರದಿಂದಲೇ ಟಿಕೆಟ್ ಪಡೆದರು. ಇಂದು ಚುನಾವಣೆಗೂ ಪೂರ್ವ ಮಾತನಾಡಿದ ಯೋಗಿ ಆದಿತ್ಯನಾಥ್, ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ನಂಬಿಕೆ ನನಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿ ಬಿಜೆಪಿ ಅತ್ಯಂತ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದೆ. ನಾವು ಶೇ.80ರಷ್ಟು ಕ್ಷೇತ್ರಗಳನ್ನು ಗೆದ್ದುಕೊಳ್ಳುತ್ತೇವೆ. ಬಿಜೆಪಿಗೆ ಮತ ಹಾಕಿದರೆ, ಅಭಿವೃದ್ಧಿ ಮತ್ತು ಭದ್ರತೆಗೆ ಮತ ಹಾಕಿದಂತೆ ಎಂಬುದು ಜನರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತನ್ನ ವಶದಲ್ಲಿರುವ ರಷ್ಯನ್ ಸೈನಿಕರನ್ನು ಬಂದು ಕರೆದೊಯ್ಯುವಂತೆ ಅವರ ತಾಯಂದಿರಿಗೆ ಉಕ್ರೇನ್ ಆಹ್ವಾನ ನೀಡಿದೆ!