ತನ್ನ ವಶದಲ್ಲಿರುವ ರಷ್ಯನ್ ಸೈನಿಕರನ್ನು ಬಂದು ಕರೆದೊಯ್ಯುವಂತೆ ಅವರ ತಾಯಂದಿರಿಗೆ ಉಕ್ರೇನ್ ಆಹ್ವಾನ ನೀಡಿದೆ!

ತನ್ನ ವಶದಲ್ಲಿರುವ ರಷ್ಯನ್ ಸೈನಿಕರನ್ನು ಬಂದು ಕರೆದೊಯ್ಯುವಂತೆ ಅವರ ತಾಯಂದಿರಿಗೆ ಉಕ್ರೇನ್ ಆಹ್ವಾನ ನೀಡಿದೆ!
ಉಕ್ರೇನ್​ ಸೈನಿಕರು

ರಷ್ಯಾ ಯುದ್ಧ ಘೋಷಿಸಿದ ನಂತರ ಒಂದು ವಾರದ ಅವಧಿಯಲ್ಲಿ ಹಲವಾರು ರಷ್ಯನ್ ಯೋಧರು, ಅವರ ಸೆಲ್ ಫೋನ್​ಗಳನ್ನು ವಶಕ್ಕೆ ಪಡೆದಿರುವುದಾಗಿ ಕೀವ್ ಹೇಳಿಕೊಂಡಿದೆ.

TV9kannada Web Team

| Edited By: ganapathi bhat

Mar 03, 2022 | 8:07 AM

ರಷ್ಯಾದ ಪಡೆಗಳು ಉಕ್ರೇನ್ ಮೇಲೆ ದಾಳಿ ಆರಂಭಿಸಿ ಒಂದ ವಾರ ಕಳೆದಿದೆ. ವ್ಯಾಪಕ ಅಂತರರಾಷ್ಟ್ರೀಯ ಒತ್ತಡ ಮತ್ತು ನಿರ್ಬಂಧಗಳ (sanctions) ಹೊರತಾಗಿಯೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಯುದ್ಧವಿರಾಮ (ceasefire) ಘೋಷಿಸುತ್ತಿಲ್ಲ. ಅತ್ತ ಉಕ್ರೇನ್ ಸೇನೆ ಮತ್ತು ನಾಗರಿಕರು ದಿಟ್ಟತನದಿಂದ ಹೋರಾಡುತ್ತಿದ್ದಾರೆ. ತನ್ನ ದಾಳಿಯಿಂದ ಕಂಗಲಾಗಿ ಉಕ್ರೇನ್ ತನ್ನ ಮುಂದೆ ಮಂಡಿಯೂರುತ್ತದೆ ಅಂದುಕೊಂಡಿದ್ದ ಪುಟಿನ್ ತೀವ್ರ ಮುಖಭಂಗವಾಗಿದೆ. ಬುಧವಾರದಂದು ಉಕ್ರೇನ್ ನ ತೋರಿರುವ ಒಂದು ಔದಾರ್ಯ ಪುಟಿನ್ ಅವರನ್ನು ಮತ್ತಷ್ಟು ಸಣ್ಣವನಾಗಿಸುತ್ತದೆ.

ಹಲವಾರು ರಷ್ಯನ್ ಸೈನಿಕರನ್ನು ಉಕ್ರೇನ್ ಸೆರೆಹಿಡಿದು ಯುದ್ಧ ಸಮಯದ ಕೈದಿಗಳ ಹಾಗೆ ಬಂಧನದಲ್ಲಿರಿಸಿದೆ. ಆದರೆ ಬುಧವಾರ ಉಕ್ರೇನ್ ತನ್ನ ವಶದಲ್ಲಿರುವ ಸೈನಿಕರ ತಾಯಂದಿರಿಗೆ ಅಪೀಲ್ ಮಾಡಿ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದೆ. ಈ ಔದಾರ್ಯತೆ ನಿಸ್ಸಂದೇಹವಾಗಿ ಪುಟಿನ್ ಮತ್ತು ರಷ್ಯಾಗೆ ಕಸಿವಿಸಿಯನ್ನುಂಟು ಮಾಡುತ್ತದೆ.

‘ನಮ್ಮ ವಶದಲ್ಲಿರುವ ರಷ್ಯನ್ ಸೈನಿಕರನ್ನು ಅವರ ತಾಯಂದಿರಿಗೆ ಹಸ್ತಾಂತರ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅವರು ಕೀವ್ ಗೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು,’ ಎಂದು ರಕ್ಷಣಾ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾ ಯುದ್ಧ ಘೋಷಿಸಿದ ನಂತರ ಒಂದು ವಾರದ ಅವಧಿಯಲ್ಲಿ ಹಲವಾರು ರಷ್ಯನ್ ಯೋಧರು, ಅವರ ಸೆಲ್ ಫೋನ್​ಗಳನ್ನು ವಶಕ್ಕೆ ಪಡೆದಿರುವುದಾಗಿ ಕೀವ್ ಹೇಳಿಕೊಂಡಿದೆ. ದಿಗಿಲುಗೊಂಡಿರುವ ನಿರಾಯುಧ ಆದರೆ ಸೇನೆಯ ಯೂನಿಫಾರ್ಮ್ ನಲ್ಲಿರುವ ಯುವ ರಷ್ಯನ್ ಸೈನಿಕರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ, ಇಂಟರ್ನೆಟ್ ನಲ್ಲಿ ಹರಿದಾಡುತ್ತಿವೆ.

ರಷ್ಯನ್ ಆಕ್ರಮಣವನ್ನು ಬೆಂಬಲಿಸುತ್ತಿರುವ ಆ ದೇಶದ ನಾಗರಿಕರ ಮನಸ್ಸಿನಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕೀವ್ ರಷ್ಯನ್ ಪೋಷಕರಿಗೆ ಹಾಟ್ ಲೈನ್ ಒಂದನ್ನು ಆರಂಭಿಸಿ, ಅವರ ಮಕ್ಕಳು ತಮ್ಮ ಸೆರೆಯಲ್ಲಿರುವರಲ್ಲಿ ಒಬ್ಬರಾಗಿದ್ದಾರೋ ಅಥವಾ ಯುದ್ಧದಲ್ಲಿ ಮಡಿದಿದ್ದಾರೋ ಅನ್ನೋದನ್ನ ಖಾತ್ರಿ ಪಡಿಸಿಕೊಳ್ಳಿ ಎಂದು ಹೇಳಿದೆ.

ತನ್ನ ವಶದಲ್ಲಿರುವ ರಷ್ಯನ್ ಸೈನಿಕರ ಮಾಹಿತಿಯನ್ನು ಜನರಿಗೆ ತಲುಪುವಂತಾಗಲು ಉಕ್ರೇನ್ ರಕ್ಷಣಾ ಸಚಿವಾಲಯವು ಟೆಲಿಫೋನ್ ನಂಬರ್ ಮತ್ತು ಈಮೇಲ್ ವಿಳಾಸವನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದೆ ಮತ್ತು ಸೈನಿಕರ ತಾಯಂದಿರು ಕೀವ್ ಗೆ ಬಂದು ಕಳೆದು ಹೋಗಿದ್ದ ತಮ್ಮ ಮಕ್ಕಳನ್ನು ಕರೆದೊಯ್ಯಲು ಆಹ್ವಾನಿಸಿದೆ.

‘ನಿಮ್ಮನ್ನು ಉಕ್ರೇನ್ ಗೆ ಬರಮಾಡಿಕೊಳ್ಳಲಾಗುವುದು ಮತ್ತು ಕೀವ್ ಗೆ ಕರೆದುಕೊಂಡು ಹೋಗಿ ನಿಮ್ಮ ಮಕ್ಕಳನ್ನು ನಿಮಗೆ ಒಪ್ಪಿಸಲಾಗುವುದು,’ ಎಂದು ಸಚಿವಾಲಯದ ಹೇಳಿಕೆ ತಿಳಿಸುತ್ತದೆ. ‘ಸರ್ವಾಧಿಕಾರಿ ಪುಟಿನ್ ಹಾಗೆ ಉಕ್ರೇನಿಯನ್ ಸೈನಿಕರು ತಾಯಂದಿರು ಮತ್ತು ಸೆರೆ ಸಿಕ್ಕಿರುವ ಅವರ ಮಕ್ಕಳ ವಿರುದ್ಧ ಯುದ್ಧ ಮಾಡುತ್ತಿಲ್ಲ,’ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ:  ರಷ್ಯಾ ಗಡಿ ಮೂಲಕ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲು ಪ್ರಯತ್ನ; ಮಾಸ್ಕೋದೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿರುವ ಭಾರತ ಸರ್ಕಾರ

Follow us on

Most Read Stories

Click on your DTH Provider to Add TV9 Kannada