ಉಕ್ರೇನ್ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ, ನಾವು ಸ್ಥಳಾಂತರ ಮಾಡಲು ಹೋದಾಗ ಸೇನೆ ತಡೆಯಿತು: ರಷ್ಯಾ ಆರೋಪ
ಇನ್ನೊಂದೆಡೆ ಉಕ್ರೇನ್ ಕೂಡ ಇದೇ ಆರೋಪ ಮಾಡಿದೆ. ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳಗಳನ್ನಾಗಿ ಇಟ್ಟುಕೊಂಡಿದೆ ಎಂದು ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿ (Russia Attack On Ukraine) ಇಂದು ಎಂಟನೇ ದಿನ. ದಾಳಿಯನ್ನು ನಿಲ್ಲಿಸಿ ಎಂದು ಯಾರು ಎಷ್ಟೇ ಹೇಳಿದರೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಉಕ್ರೇನ್ನ್ನು ನ್ಯಾಟೋಕ್ಕೆ (NATO) ಸೇರ್ಪಡೆ ಮಾಡುವುದಿಲ್ಲ ಎಂಬ ಭರವಸೆ ಕೊಡಿ. ಅದಕ್ಕೆ ಬದ್ಧವಾಗಿ ನಡೆದುಕೊಂಡರೆ ಮಾತ್ರ ನಾವು ಯುದ್ಧ ನಿಲ್ಲಿಸುತ್ತೇವೆ ಎಂದು ಖಡಕ್ ಆಗಿ ಹೇಳಿಬಿಟ್ಟಿದ್ದಾರೆ. ಹಾಗಾಗಿ ಈ ಸಮಸ್ಯೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅದರ ಮಧ್ಯೆ ಭಾರತ, ಉಕ್ರೇನ್ನಲ್ಲಿರುವ ತನ್ನ ನಾಗರಿಕನ್ನು ಸುರಕ್ಷಿತವಾಗಿ ದೇಶಕ್ಕೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಷ್ಟು ದಿನ ಉಕ್ರೇನ್ನ ಪಶ್ಚಿಮ ಗಡಿ ದೇಶಗಳ ಮೂಲಕ ಮಾತ್ರ ಭಾರತೀಯರನ್ನು ಸ್ಥಳಾಂತರ ಮಾಡುತ್ತಿದ್ದ ಭಾರತಕ್ಕೆ ಇದೀಗ ರಷ್ಯಾ ತನ್ನ ಮಾರ್ಗದ ಮೂಲಕವೂ ಸ್ಥಳಾಂತರ ಮಾಡಲು ಅನುಮತಿ ಕೊಟ್ಟಿದೆ. ಆದರೆ ಈ ಮಧ್ಯೆ ರಷ್ಯಾ, ಭಾರತೀಯರ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ ಎಂಬ ಗಂಭೀರ ಆರೋಪ ಮಾಡಿದೆ.
ರಷ್ಯಾ ರಕ್ಷಣಾ ಸಚಿವಾಲಯ ಬುಧವಾರ ಈ ಆರೋಪ ಮಾಡಿದೆ. ಖಾರ್ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಡಲಾಗಿದೆ. ದಾಳಿ ತೀವ್ರವಾಗಿರುವ ಖಾರ್ಕೀವ್ನಲ್ಲಿರುವ ಭಾರತೀಯರನ್ನು ಅಲ್ಲಿಂದ ಸ್ಥಳಾಂತರ ಮಾಡಲು ರಷ್ಯಾ ಮುಂದಾದಾಗ, ಉಕ್ರೇನ್ ಸೇನೆ ಅವರನ್ನು ತಡೆಯಿತು ಮತ್ತು ವಾಪಸ್ ಕರೆದುಕೊಂಡುಹೋಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತು ಎಂದು ತಿಳಿಸಿದೆ. ಖಾರ್ಕೀವ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅಲ್ಲಿಂದ ರಷ್ಯಾದ ಬೆಲ್ಗೊರೊಡ್ಗೆ ಹೋಗಲು ಇಚ್ಛಿಸಿದ್ದರು. ಅಲ್ಲಿಂದ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿತ್ತು. ಆದರೆ ಅವರೆಲ್ಲರನ್ನೂ ಉಕ್ರೇನ್ ವಶಕ್ಕೆ ಪಡೆಯಿತು ಎಂದು ರಷ್ಯಾ ರಕ್ಷಣಾ ಸಚಿವಾಲಯದ ಮೇಜರ್ ಜನರಲ್ ಇಗೋರ್ ಕೊನಾಶೆಂಕೋವ್ ತಿಳಿಸಿದ್ದಾರೆ.
ರಷ್ಯಾ ವಿರುದ್ಧ ಉಕ್ರೇನ್ ಆರೋಪ
ಇನ್ನೊಂದೆಡೆ ಉಕ್ರೇನ್ ಕೂಡ ಇದೇ ಆರೋಪ ಮಾಡಿದೆ. ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳಗಳನ್ನಾಗಿ ಇಟ್ಟುಕೊಂಡಿದೆ ಎಂದು ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಫೋನ್ನಲ್ಲಿ ಮಾತನಾಡಿದ್ದಾರೆ. ಅದರ ಬೆನ್ನಲ್ಲೇ ಈ ಆರೋಪ-ಪ್ರತ್ಯಾರೋಪಗಳು ಹೊರಬಿದ್ದಿವೆ.
The MFA of Ukraine calls on the RF to immediately cease its hostilities in Kharkiv and Sumy so that we can arrange the evacuation of the civilian population, including foreign students, to safer Ukrainian cities. https://t.co/sm15hSLdGF pic.twitter.com/gRTywxjZLs
— MFA of Ukraine ?? (@MFA_Ukraine) March 2, 2022
ಇದನ್ನೂ ಓದಿ: ಕೂಡಲೇ ಯುದ್ಧವಿರಾಮ ಘೋಷಿಸಿ ಹಿಂಸಾಚಾರ ನಿಲ್ಲಿಸುವಂತೆ ವ್ಲಾದಿಮಿರ್ ಪುಟಿನ್ಗೆ ಪ್ರಧಾನಿ ಮೋದಿ ಆಗ್ರಹಿಸಿದರು
Published On - 7:55 am, Thu, 3 March 22