ಜಲಾಂತರ್ಗಾಮಿ ಮಾಹಿತಿ ಸೋರಿಕೆ ಮಾಡಿದ ಆರೋಪ: ನೌಕಾದಳದ ಇಬ್ಬರು ಕಮಾಂಡರ್​ ಸೇರಿ 6 ಮಂದಿ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 02, 2021 | 6:13 PM

ಪ್ರಲೋಭನೆಗೆ ಒಳಗಾಗಿದ್ದ ಇವರು ಜಲಾಂತರ್ಗಾಮಿಯ ಮೀಡಿಯಂ ರಿಫಿಟ್ ಲೈಫ್ ಸರ್ಟಿಫಿಕೇಶನ್ (MRLC)) ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ಹಸ್ತಾಂತರಿಸಿದ್ದರು ಎಂದು ಸಿಬಿಐ ಹೇಳಿದೆ

ಜಲಾಂತರ್ಗಾಮಿ ಮಾಹಿತಿ ಸೋರಿಕೆ ಮಾಡಿದ ಆರೋಪ: ನೌಕಾದಳದ ಇಬ್ಬರು ಕಮಾಂಡರ್​ ಸೇರಿ 6 ಮಂದಿ ಬಂಧನ
ಕಿಲೊ ಕ್ಲಾಸ್ ಸಬ್​ಮರೀನ್
Follow us on

ದೆಹಲಿ: ಭಾರತೀಯ ನೌಕಾಪಡೆಯ ಕಿಲೋ ಕ್ಲಾಸ್​ ಜಲಾಂತರ್ಗಾಮಿಗಳ ಗೌಪ್ಯ ಮಾಹಿತಿಯನ್ನು ‘ಅನಧಿಕೃತ ವ್ಯಕ್ತಿಗಳಿಗೆ’ ಹಸ್ತಾಂತರಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (Central Bureau of Investigation – CBI) ಆರು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಈ ಪೈಕಿ ಇಬ್ಬರು ನೌಕಾಪಡೆಯ ಹಾಲಿ ಕಮಾಂಡರ್​ಗಳು ಮತ್ತು ಇಬ್ಬರು ನೌಕಾಪಡೆಯ ನಿವೃತ್ತ ಅಧಿಕಾರಿಗಳು. ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಪರಿಚ್ಛೇದಗಳ ಅನ್ವಯ ಇವರ ಮೇಲೆ ಆರೋಪ ಹೊರಿಸಲಾಗಿದೆ.

ಪ್ರಲೋಭನೆಗೆ ಒಳಗಾಗಿದ್ದ ಇವರು ಜಲಾಂತರ್ಗಾಮಿಯ ಮೀಡಿಯಂ ರಿಫಿಟ್ ಲೈಫ್ ಸರ್ಟಿಫಿಕೇಶನ್ (MRLC)) ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ಹಸ್ತಾಂತರಿಸಿದ್ದರು ಎಂದು ಸಿಬಿಐ ಹೇಳಿದೆ. ಸೆಪ್ಟೆಂಬರ್ 3ರಂದು ಸಿಬಿಐ ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್ ಮತ್ತು ಎಸ್.ಜೆ.ಸಿಂಗ್ ಅವರನ್ನು ಸಿಬಿಐ ಬಂಧಿಸಿದ ನಂತರ ಪ್ರಕರಣ ಬೆಳಕಿಗೆ ಬಂತು. ಕಮೋಡರ್ (ನಿವೃತ್ತ) ರಣದೀಪ್ ಸಿಂಗ್ ಅವರಿಗೆ ಸೇರಿದ್ದ ಸ್ಥಳದಲ್ಲಿ ನಡೆಸಿದ ತಪಾಸಣೆಗಳಲ್ಲಿ ₹ 2 ಕೋಟಿ ನಗದು ಪತ್ತೆಯಾಗಿತ್ತು.

ನೌಕಾಪಡೆಯ ಪಶ್ಚಿಮ ಕಮಾಂಡ್​ನ ಮುಖ್ಯ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಕಮಾಂಡರ್ ಅಜಿತ್ ಕುಮಾರ್ ಪಾಂಡೆ ಅವರನ್ನು ತನಿಖೆಯ ವೇಳೆ ಪತ್ತೆಯಾದ ಮಾಹಿತಿ ಆಧರಿಸಿ ಸಿಬಿಐ ಬಂಧಿಸಿತ್ತು. ಪಾಂಡೆ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಕಮಾಂಡರ್​ ಪಾಂಡೆ ಅವರನ್ನೂ ಸಿಬಿಐ ಬಂಧಿಸಿತು.

ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರೂ ಕಿಲೊ ಕ್ಲಾಸ್ ಸಬ್​ಮರೀನ್ ಕುರಿತ ಮಾಹಿತಿಯನ್ನು ನೌಕಾಪಡೆಯ ನಿವೃತ್ತ ಅಧಿಕಾರಿಗಳಿಗೆ ನೀಡುತ್ತಿದ್ದರು. ವಿದೇಶಿ ಕಂಪನಿಗಳಿಗೆ ಕೆಲಸ ಮಾಡುತ್ತಿದ್ದ ಅವರು, ಈ ಮಾಹಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು. ಇದೇ ವರ್ಷ ನೌಕಾಪಡೆಯಿಂದ ನಿವೃತ್ತರಾದ ಕಮಾಂಡರ್ ಎಸ್.ಜೆ.ಸಿಂಗ್ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿ ಸಹಭಾಗಿಯಾಗಿರುವ ಕೊರಿಯಾದ ಕಂಪನಿಗಾಗಿ ಕೆಲಸ ಮಾಡುತ್ತಿದ್ದಾರೆ. ರೇರ್​ ಅಡ್ಮಿರಲ್​ರಂಥ ಉನ್ನತ ಹಂತದ ಅಧಿಕಾರಿಗಳಿಂದ ಹಿಡಿದು, ಸುಮಾರು 12 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಶ್ನಿಸಿತ್ತು.

ಇಂದು ಆರೋಪ ಪಟ್ಟಿ ಸಲ್ಲಿಸದಿದ್ದರೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ಸಾಧ್ಯತೆಯಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಆರೋಪಪಟ್ಟಿ ಸಲ್ಲಿಸಬೇಕಾಯಿತು ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಎನ್​ಡಿಟಿವಿ ಜಾಲತಾಣ ವರದಿ ಮಾಡಿದೆ. ಈ ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿರುವ ಕಾರಣ ಸಿಬಿಐನ ಉನ್ನತ ಅಧಿಕಾರಿಗಳು ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ. ಎಫ್​ಐಆರ್ ಸೇರಿ ಪ್ರಕರಣದ ವಿವರಗಳನ್ನು ಗೌಪ್ಯವಾಗಿಯೇ ಇರಿಸಲಾಗಿದೆ.

ಇದನ್ನೂ ಓದಿ: Indian Navy: ಗೌಪ್ಯ ಮಾಹಿತಿ ಸೋರಿಕೆ ಆರೋಪದಲ್ಲಿ ಸಿಬಿಐನಿಂದ ನೌಕಾಪಡೆ ಅಧಿಕಾರಿಯ ಬಂಧನ
ಇದನ್ನೂ ಓದಿ: ಸಮುದ್ರದ ಮಧ್ಯೆ ಅಸ್ವಸ್ಥರಾದ ಗೋವಾ ಮೀನುಗಾರರನ್ನು ರಕ್ಷಿಸಿದ ನೌಕಾಪಡೆಯ ಹೆಲಿಕಾಪ್ಟರ್

Published On - 6:12 pm, Tue, 2 November 21