ತಿರುವನಂತಪುರಂ: ತೀವ್ರ ಸಂಚಲನ ಮೂಡಿಸಿದ್ದ ಸೋಲಾರ್ ಹಗರಣದ (Solar Scam) ಪ್ರಮುಖ ಆರೋಪಿ ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ (Oommen Chandy) ಅವರಿಗೆ ಸಿಬಿಐ (CBI) ಕ್ಲೀನ್ ಚಿಟ್ ನೀಡಿದೆ. ಸಿಬಿಐ ಮಂಗಳವಾರ ತಿರುವನಂತಪುರಂನ ನ್ಯಾಯಾಲಯಕ್ಕೆ ಈ ವರದಿಯನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸೋಲಾರ್ ಶಕ್ತಿ ಹಗರಣದ ಆರೋಪಿ ಸರಿತಾ ನಾಯರ್ ಅವರು ಉಮ್ಮನ್ ಚಾಂಡಿ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು. 2012ರಲ್ಲಿ ಸೋಲಾರ್ ಫಲಕವನ್ನು ಅಳವಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಲು ಹೋಗಿದ್ದಾಗ ಸಿಎಂ ಆಗಿದ್ದ ಉಮ್ಮನ್ ಚಾಂಡಿ ತಮ್ಮ ಮನೆಯಲ್ಲೇ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸರಿತಾ ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕೇರಳದ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸರು ಉಮ್ಮನ್ ಚಾಂಡಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು.
ಸೋಲಾರ್ ಹಗರಣದಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಆರೋಪಿ ಬಿಜು ರಾಧಾಕೃಷ್ಣನ್ ಕೂಡ ಮಾಜಿ ಸಿಎಂ ಉಮ್ಮನ್ ಚಾಂಡಿ ಮೇಲೆ ಇದೇ ರೀತಿಯ ಆರೋಪ ಮಾಡಿದ್ದರು. ತಮ್ಮ ಜೊತೆ ಉಮ್ಮನ್ ಚಾಂಡಿ ಲೈಂಗಿಕ ಕ್ರಿಯೆ ನಡೆಸಲು ಬಯಸಿದ್ದರು ಎಂದು ಅವರು ಹೇಳಿಕೆ ನೀಡಿದ್ದರು. ಅದಾದ ಬಳಿಕ ಸರಿತಾ ನಾಯರ್ ಕೂಡ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು.
ಇದನ್ನೂ ಓದಿ: ಸೋಲಾರ್ ಹಗರಣದ ಆರೋಪಿಯ ಲೈಂಗಿಕ ಕಿರುಕುಳ ಪ್ರಕರಣ: ಕೇರಳ ಸಿಎಂ ನಿವಾಸದಲ್ಲಿ ಸಿಬಿಐ ಪರಿಶೀಲನೆ
ಸೋಲಾರ್ ಫಲಕಗಳನ್ನು ಅಳವಡಿಸುವ ಹಗರಣಕ್ಕೆ ಸಂಬಂಧಿಸಿದಂತೆ ಅಂದು ಸಿಎಂ ಆಗಿದ್ದ ಉಮ್ಮನ್ ಚಾಂಡಿ ಸರ್ಕಾರಕ್ಕೆ ಸುಮಾರು 2 ಕೋಟಿ ರೂ. ಲಂಚ ನೀಡಿದ್ದಾಗಿ ಸರಿತಾ ಮತ್ತು ಬಿಜು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಸೋಲಾರ್ ಹಗರಣದ ಮುಖ್ಯ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಮತ್ತು ಸರಿತಾ ನಾಯರ್ ಅವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಉಮ್ಮನ್ ಚಾಂಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಲಿಫ್ ಹೌಸ್‌ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರುದಾರರು ಆರೋಪಿಸಿದ್ದರು. ಕಳೆದ ವರ್ಷ, ಆರೋಪಿ ಮಹಿಳೆಯ ಲೈಂಗಿಕ ಶೋಷಣೆ ಆರೋಪಗಳಿಗೆ ಸಂಬಂಧಿಸಿದಂತೆ ಉಮ್ಮನ್ ಚಾಂಡಿ, ಮಾಜಿ ಕೇಂದ್ರ ಸಚಿವ ಕೆಸಿ ವೇಣುಗೋಪಾಲ್ ಮತ್ತು ಇತರ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು.
ಇದನ್ನೂ ಓದಿ: ಸಮ್ಮತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ಒಂದು ವರ್ಷ ಕಾಯುವಿಕೆ ಅಸಾಂವಿಧಾನಿಕ: ಕೇರಳ ಹೈಕೋರ್ಟ್
ಯುಡಿಎಫ್ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣದ ಆರೋಪಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕಳೆದ ಕೆಲವು ವರ್ಷಗಳಿಂದ ಉಮ್ಮನ್ ಚಾಂಡಿ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣಗಳನ್ನು ಕೇರಳ ಪೊಲೀಸರ ಅಪರಾಧ ವಿಭಾಗವು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 2012 ರಲ್ಲಿ ಅವರು ಲೈಂಗಿಕವಾಗಿ ಶೋಷಣೆಗೆ ಒಳಗಾಗಿದ್ದರು.
ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರವು 2021ರ ಆರಂಭದಲ್ಲಿ ಈ ಪ್ರಕರಣಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಇದೀಗ ಉಮ್ಮನ್ ಚಾಂಡಿ ವಿರುದ್ಧದ ಮಹಿಳೆಯ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಸಿಬಿಐ ಹೇಳಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.