CBI Probe: ಒಡಿಶಾ ರೈಲು ದುರಂತ; ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು- ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ

|

Updated on: Jun 04, 2023 | 7:31 PM

Odisha Train Accident: ಶುಕ್ರವಾರ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಲು ರೈಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

CBI Probe: ಒಡಿಶಾ ರೈಲು ದುರಂತ; ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು- ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ
ಒಡಿಶಾ ರೈಲು ದುರಂತ
Follow us on

ನವದೆಹಲಿ: ಜೂನ್ 2, ಶುಕ್ರವಾರ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಲು ರೈಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ‘ಅಪಘಾತ ಘಟನೆಯ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಲು ರೈಲ್ವೆ ನಿರ್ದರಿಸಿದೆ’ ಎಂದು ಸಚಿವ ವೈಷ್ಣವ್ ಅವರು ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೂನ್ 2ರ ರಾತ್ರಿ ಮೂರು ರೈಲುಗಳ ಮಧ್ಯೆ ಅಪಘಾತ ಸಂಭವಿಸಿ 290ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತದ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಘೋರ ಘಟನೆಗಳಲ್ಲಿ ಇದೂ ಒಂದು ಪರಿಗಣಿಸಲಾಗಿದೆ. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹಂಗ ಬಜಾರ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಕೋಲ್ಕತಾದಿಂದ ಚೆನ್ನೈಗೆ ಬರುತ್ತಿದ್ದ ಕೋರಮಂಡಲ್ ಎಕ್ಸ್​ಪ್ರೆಸ್ ರೈಲು ತಪ್ಪಾದ ಸಿಗ್ನಲ್ ಕಾರಣದಿಂದ ಟ್ರ್ಯಾಕ್ ಬದಲಿಸಿತ್ತು. ಅಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ 12 ಬೋಗಿಗಳು ಹಳಿ ತಪ್ಪಿ ಪಕ್ಕದ ಟ್ರ್ಯಾಕ್​ಗೆ ಉರುಳಿವೆ. ಅತ್ತ, ಯಶವಂತಪುರದಿಂದ ಹೌರಾಗೆ ಹೋಗುತ್ತಿದ್ದ ಇನ್ನೊಂದು ರೈಲು ಈ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಈ ಎರಡು ಪ್ಯಾಸೆಂಜರ್ ರೈಲುಗಳಿಗೆ ಬಹಳ ಹಾನಿಯಾಗಿದೆ.

ಇದನ್ನೂ ಓದಿ: Electronic Interlocking: ರೈಲುದುರಂತಕ್ಕೆ ಕಾರಣವಾದ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?

ದುರಂತ ಸಂಭವಿಸಿದ ಕೂಡಲೇ ರಕ್ಷಣಾ ತಂಡಗಳು ಕ್ಷಿಪ್ರವಾಗಿ ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ನೂರಾರು ಜೀವಗಳನ್ನು ಉಳಿಸಿದ್ದಾರೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್ ಹಾಗೂ ಹಲವು ರೈಲ್ವೆ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದು ಗಮನ ಸೆಳೆಯಿತು. ಘಟನಾ ಸ್ಥಳದಲ್ಲಿ ಬಹುತೇಕ ಎಲ್ಲವನ್ನೂ ತೆರವುಗೊಳಿಸಿ ಆದಷ್ಟೂ ಬೇಗ ಸಂಚಾರಕ್ಕೆ ಟ್ರ್ಯಾಕ್​ಗಳನ್ನು ಅನುವು ಮಾಡಿಕೊಡುವತ್ತ ಗಮನ ಕೊಡಲಾಗುತ್ತಿದೆ.

ಇದೇ ವೇಳೆ, ತಪ್ಪಾದ ಸಿಗ್ನಲ್ ಕಾರಣದಿಂದ ರೈಲು ಅಪಘಾತವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂನ ಪ್ರಕ್ರಿಯೆಯಲ್ಲಿ ಆದ ಬದಲಾವಣೆ ಕಾರಣ ಎಂಬುದು ಗೊತ್ತಾಗಿದೆ ಎಂದು ರೈಲ್ವೆ ಸಚಿವ ವೈಷ್ಣವ್ ಹೇಳಿದ್ದರು. ಇದೀಗ ಸಿಬಿಐ ತನಿಖೆಯಾದಲ್ಲಿ ಇನ್ನಷ್ಟು ವಿಚಾರಗಳು ಮತ್ತು ಲೋಪದೋಷಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Sun, 4 June 23