ಕೋಲ್ಕತ್ತಾ, ಮಾ.23: ಪಶ್ಚಿಮ ಬಂಗಾಳದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರ ನಿವಾಸ ಸೇರಿದಂತೆ ಕೋಲ್ಕತ್ತಾ ಮತ್ತು ಅವರಿಗೆ ಸಂಬಂಧಿಸಿದ ಇತರ ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ ಎಂದು ವರದಿ ಹೇಳಿದೆ. ಕೇಂದ್ರ ತನಿಖಾ ಸಂಸ್ಥೆಯ ತಂಡಗಳು ಶನಿವಾರ ಬೆಳಗ್ಗೆ ಮೊಯಿತ್ರಾ ಅವರ ಕೋಲ್ಕತ್ತಾ ನಿವಾಸ ಮತ್ತು ಇತರ ನಗರಗಳನ್ನು ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ನಿರ್ದೇಶನದ ಮೇರೆಗೆ ಸಿಬಿಐ ಗುರುವಾರ ಟಿಎಂಸಿ ಮಾಜಿ ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಡಿಸೆಂಬರ್‌ನಲ್ಲಿ ಸಂಸತ್ತಿನಿಂದ ಮಹುವಾ ಮೊಯಿತ್ರಾ ಅವರನ್ನು ಹೊರಹಾಕಲಾಯಿತು. ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅದಾನಿ ವಿರುದ್ಧ ಮಾತನಾಡಲು ಹಣ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಆರೋಪಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯ ವರದಿಯನ್ನು ಪಡೆದು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಒಂಬುಡ್ಸ್‌ಮನ್ ಲೋಕಪಾಲ್, ಸಿಬಿಐಗೆ ಈ ಬಗ್ಗೆ ನಿರ್ದೇಶನಗಳನ್ನು ನೀಡಿದರು.
ಇದನ್ನೂ ಓದಿ: ಚುನಾವಣಾ ಬಾಂಡ್ ಬಳಸುವ ಮುಖ್ಯ ಉದ್ದೇಶವೇನು? ಅರುಣ್ ಜೇಟ್ಲಿ ಮಾತನ್ನು ನೆನಪಿಸಿದ ಕೇಂದ್ರ ಸಚಿವ ಗಡ್ಕರಿ
ದುಬೈನಲ್ಲಿ ನೆಲೆಸಿರುವ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಹಣ ಮತ್ತು ಉಡುಗೊರೆಯನ್ನು ಪಡೆದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಹಾಗೂ ಇತರರ ವಿರುದ್ಧ ಸದನದಲ್ಲಿ ಮೊಯಿತ್ರಾ ಪ್ರಶ್ನಿಸಿದ್ದಾರೆ. ಇದೀಗ ಈ ಕಾರಣಕ್ಕೆ ಸಿಬಿಐ ಅವರ ಮನೆಯ ಮೇಲೆ ದಾಳಿ ನಡೆಸಿದೆ. ಹಾಗೂ ಮೊಯಿತ್ರಾ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧವನ್ನು ನಡೆಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Sat, 23 March 24