ರೈತರ ಭವಿಷ್ಯ ಕಸಿಯಲು ಕೇಂದ್ರ ಪ್ರಯತ್ನಿಸುತ್ತಿದೆ: ಕೃಷಿ ಕಾಯ್ದೆ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

|

Updated on: Mar 21, 2021 | 4:25 PM

Rahul Gandhi: ಛತ್ತೀಸ್​ಗಢ್ ಸರ್ಕಾರ ರೈತರಿಗೆ ಬೆಂಬಲ ನೀಡಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿದೆ. ನಾವು ಗ್ರಾಮೀಣ ಆರ್ಥಿಕತೆಗೆ ಹೆಚ್ಚು ಒತ್ತುಕೊಟ್ಟ ಕಾರಣ, ಕೊರೊನಾವೈರಸ್ ಸಂಕಷ್ಟದ ಸಮಯದಲ್ಲಿ ಇತರ ರಾಜ್ಯದ ಜನರು ಕಷ್ಟ ಅನುಭವಿಸಿದಂತೆ ಇಲ್ಲಿನ ಜನರಿಗೆ ಸಮಸ್ಯೆ ಆಗಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರೈತರ ಭವಿಷ್ಯ ಕಸಿಯಲು ಕೇಂದ್ರ ಪ್ರಯತ್ನಿಸುತ್ತಿದೆ: ಕೃಷಿ ಕಾಯ್ದೆ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Follow us on

ರಾಯ್ಪುರ್ : ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಕೆಲವು ಖ್ಯಾತ ಉದ್ಯಮಿಗಳ ಹಿತಕ್ಕಾಗಿ ರೈತರ ಆದಾಯ ಮತ್ತು ಭವಿಷ್ಯವನ್ನು ಕಸಿಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ. ಛತ್ತೀಸ್​ಗಢದ ರಾಜಧಾನಿ ರಾಯ್ಪುರ್​ನಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ವಿಡಿಯೊ  ಸಂವಾದ ಮೂಲಕ ಮಾತನಾಡಿದ ರಾಹುಲ್, ನಾವು ರೈತರಿಗೆ ನೀಡಿದ್ದ ಭರವಸೆಯನ್ನು ಪೂರೈಸಿದ್ದೇವೆ. ಕೇಂದ್ರ ಸರ್ಕಾರ ಬೇರೆಯೇ ದಾರಿಯಲ್ಲಿ ಸಾಗುತ್ತಿರುವುದು ನಿಮಗೆ ತಿಳಿದಿದೆಯೇ. ಕೇಂದ್ರ ಸರ್ಕಾರ ರೈತರ ಆದಾಯ ಮತ್ತು ಭವಿಷ್ಯವನ್ನು ಕಸಿದು ಮೂವರು ದೊಡ್ಡ ಉದ್ಯಮಿಗಳಿಗೆ ನೀಡಲು ಬಯಸುತ್ತಿದೆ ಎಂದಿದ್ದಾರೆ.

ಭುಪೇಶ್ ಬಘೇಲ್ ನೇತೃತ್ವದ ಸರ್ಕಾರವನ್ನು ಹೊಗಳಿದ ರಾಹುಲ್, ಛತ್ತೀಸ್​ಗಢ ಮತ್ತು ಇತರ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು, ಯುವಕರು ಮತ್ತು ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ  ಎಂದು ಹೇಳಿದ್ದಾರೆ.

ನೋಟು ರದ್ಧತಿ ಮತ್ತು ಜಿಎಸ್​ಟಿ ​ ಜಾರಿಗೆ ಮಾಡಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಟೀಕಾ ಪ್ರಹಾರ ಮಾಡಿದ ರಾಹುಲ್, ಮೋದಿ ಸರ್ಕಾರ ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿ ಜಾರಿಗೆ ತಂದರು. ಅದರ ಪರಿಣಾಮ ಉದ್ಯೋಗ ಸೃಷ್ಟಿ ಮಾಡಲು ವಿಫಲವಾಗಿರುವುದನ್ನು ನಾವು ನೋಡಬಹುದು ಎಂದಿದ್ದಾರೆ. ಆದರೆ ಇಲ್ಲಿ ಛತ್ತೀಸ್​ಗಢ್ ಸರ್ಕಾರ ರೈತರಿಗೆ ಬೆಂಬಲ ನೀಡಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿದೆ. ನಾವು ಗ್ರಾಮೀಣ ಆರ್ಥಿಕತೆಗೆ ಹೆಚ್ಚು ಒತ್ತುಕೊಟ್ಟ ಕಾರಣ, ಕೊರೊನಾವೈರಸ್ ಸಂಕಷ್ಟದ ಸಮಯದಲ್ಲಿ ಇತರ ರಾಜ್ಯದ ಜನರು ಕಷ್ಟ ಅನುಭವಿಸಿದಂತೆ ಇಲ್ಲಿನ ಜನರಿಗೆ ಸಮಸ್ಯೆ ಆಗಲಿಲ್ಲ ಎಂದು ಹೇಳಿದ್ದಾರೆ.


ರಾಜೀವ್ ಗಾಂಧಿ ಕಿಸಾನ್ ನ್ಯಾಯ್ ಯೋಜನೆಯ ( 2019- 20ರ ಸಾಲಿನ ಖಾರಿಫ್ ಮತ್ತು ರಾಬಿ ಬೆಳೆಗೆ ) ಫಲಾನುಭವಿಗಳಿಗೆ ಪ್ರಸ್ತುತ ಯೋಜನೆಯ ನಾಲ್ಕನೇ ಮತ್ತು ಕೊನೆಯ ಕಂತಿನ ಹಣ ₹ 1,104.2 ಕೋಟಿ ರೂಪಾಯಿಗಳನ್ನು 18.43 ಲಕ್ಷ ರೈತರಿಗೆ ವಿತರಿಸಿದ್ದಾರೆ. ಇದರ ಜತೆಗೆ ಗೋಧನ್ ನ್ಯಾಯ್ ಯೋಜನೆಯಡಿಯಲ್ಲಿ ಪಶು ಸಾಕುವವರಿಗೆ ₹ 7.55 ಕೋಟಿ ರೂಪಾಯಿ ವರ್ಗಾಯಿಸಿದ್ದಾರೆ.

ರಾಜೀವ್ ಗಾಂಧಿ ಕಿಸಾನ್ ನ್ಯಾಯ್ ಯೋಜನೆಯಲ್ಲಿ ರೈತರಿಗೆ ನಾಲ್ಕು ಕಂತುಗಳಲ್ಲಿ ₹ 5,627.89 ಕೋಟಿ ಹಣವನ್ನು ನೀಡಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಗೋಧನ್ ನ್ಯಾಯ್ ಯೋಜನೆಯಲ್ಲಿ ಜೈವಿಕ ಗೊಬ್ಬರ ಮಾಡುವುದಕ್ಕಾಗಿ ರೈತರಿಗೆ ಸೆಗಣಿ ಕೆಜಿಗೆ 2 ರೂಪಾಯಿಯಂತೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Assam Assembly Elections 2021: ಜನರ ನಡುವೆ ಬಿರುಕು ಮೂಡಿಸಲು ದ್ವೇಷ ಮಾರಾಟ: ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಸದ್ದಾಂ ಹುಸೇನ್, ಗಡಾಫಿ ಕೂಡಾ ಚುನಾವಣೆ ಗೆಲ್ಲುತ್ತಿದ್ದರು: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ