West Bengal Elections 2021: ಬಂಗಾಳ ಟಿಎಂಸಿ ಅಭ್ಯರ್ಥಿ ಜ್ಯೋತ್ಸಾ ಮಂಡಿ ಆಸ್ತಿ 5 ವರ್ಷಗಳಲ್ಲಿ ಶೇ 1985 ಹೆಚ್ಚಳ!
ಕೆಲ ಅಭ್ಯರ್ಥಿಗಳ ಆಸ್ತಿಯ ಮೊತ್ತದಲ್ಲಿ ಕುಸಿತವೂ ಆಗಿದೆ ಎಂಬುದು ಅಚ್ಚರಿ ಹುಟ್ಟಿಸುವ ವಿಷಯ. ಟಿಎಂಸಿ ಶಾಸಕಿ ಸಂಧ್ಯಾರಾಣಿ ತುಡು ಅವರ ಆಸ್ತಿಯ ಮೊತ್ತದಲ್ಲಿ ಗಣನೀಯ ಇಳಿಕೆಯಾಗಿದೆ. ಈ ಬಾರಿ ಅವರು ಸ ಲ್ಲಿಸಿರುವ ಅಫಿಡವಿಟ್ ಪ್ರಕಾರ 2016ರ ಆಸ್ತಿಯ ಮೊತ್ತಕ್ಕಿಂತ ಈ ಬಾರಿ ಶೇ 60.20ರಷ್ಟು ಇಳಿಕೆಯಾಗಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ಒಂದಿಲ್ಲೊಂದು ಸಂಗತಿಗಳಿಂದ ಸದ್ದು ಮಾಡುತ್ತಿದೆ. ಹಿಂಸಾಚಾರ, ಪಕ್ಷಾಂತರ ಪರ್ವಗಳ ಬಳಿಕ ಇದೀಗ ಅಭ್ಯರ್ಥಿಗಳ ಆರ್ಥಿಕ ಸ್ಥಿತಿಯಲ್ಲಿ ತೀವ್ರ ಏರಿಕೆ ಕಂಡುಬಂದಿರುವುದು ಸುದ್ದಿ ಮಾಡುತ್ತಿದೆ. ತೃಣಮೂಲ ಕಾಂಗ್ರೆಸ್ನ ಅಭ್ಯರ್ಥಿ ಮತ್ತು ಶಾಸಕಿ ಜ್ಯೋತ್ಸಾ ಮಂಡಿ ಆಸ್ತಿಯ ಮೊತ್ತದಲ್ಲಿ ಶೇ 1985.68ರಷ್ಟು ಏರಿಕೆಯಾಗಿರುವುದು ಬಯಲಾಗಿದೆ. ಜ್ಯೋತ್ಸಾ ಮಂಡಿ ಸಲ್ಲಿಸಿದ ಅಫಿಡವಿಟ್ ಆಧರಿಸಿ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆ ನೀಡಿದ ವರದಿಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.
2016ರಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದ, ಬಂಕುರಾ ಜಿಲ್ಲೆಯ ಎಸ್ಟಿ ಮೀಸಲು ಕ್ಷೇತ್ರವಾದ ರಾಣಿಬಂದ್ನಿಂದ ಈ ಬಾರಿಯ ಚುನಾವಣೆಯಲ್ಲೂ ಸ್ಪರ್ಧಿಸುತ್ತಿರುವ ಜ್ಯೋತ್ಸಾ ಮಂಡಿ ಆಸ್ತಿಯ ಮೊತ್ತ ₹1,96,633ರಷ್ಟಿತ್ತು. ಈ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಅವರ ಆಸ್ತಿಯ ಮೊತ್ತ ₹41,01,144. ಕಳೆದ ಐದು ವರ್ಷಗಳಲ್ಲಿ ಹೆಚ್ಚಾದ ಒಟ್ಟು ಆಸ್ತಿಯ ಮೊತ್ತ ₹39,04.511. ಅಂದರೆ ಆಸ್ತಿಯ ಮೊತ್ತದಲ್ಲಿ ಆದ ಹೆಚ್ಚಳ ಶೇ 1985.68ರಷ್ಟು!
ಆಸ್ತಿಯ ಮೊತ್ತದಲ್ಲಿ ತೀವ್ರ ಹೆಚ್ಚಳ ಕಂಡುಬಂದಿರುವ ಇನ್ನೋರ್ವ ಅಭ್ಯರ್ಥಿ ಬಿಜೆಪಿಯ ಸುದಿಪ್ ಕುಮಾರ್ ಮುಖರ್ಜಿ. 2016ರಲ್ಲಿ ಪುರುಲಿಯಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ಅವರು ಈಗ ಬಿಜೆಪಿ ತೆಕ್ಕೆಯಲ್ಲಿದ್ದಾರೆ. 2016ರಲ್ಲಿ ಸುದಿಪ್ ಕುಮಾರ್ ಮುಖರ್ಜಿ ₹11,57,94ರಷ್ಟು ಆಸ್ತಿಯ ಮೊತ್ತ ಹೊಂದಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ ಸುದಿಪ್ ಕುಮಾರ್ ಮುಖರ್ಜಿ ಆಸ್ತಿಯ ಮೊತ್ತ ₹45,02,782. ಅಂದರೆ ಆಸ್ತಿಯ ಮೊತ್ತದಲ್ಲಿ ಒಟ್ಟು ಶೇ 288.86ರಷ್ಟು ಏರಿಕೆಯಾಗಿದೆ.
ಆಸ್ತಿಯ ಮೊತ್ತದಲ್ಲಿ ಗಣನೀಯ ಏರಿಕೆ ಕಂಡುಬಂದ ಇನ್ನೋರ್ವ ಕೇಶೈರಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಪರೇಶ್ ಮುರ್ಮು. ಟಿಎಂಸಿಯ ಶಾಸಕರೂ ಆಗಿರುವ ಅವರ ಆಸ್ತಿಯ ಮೊತ್ತದಲ್ಲಿ ಶೇ 246.34ರಷ್ಟು ಏರಿಕೆ ಕಂಡುಬಂದಿದೆ. 2016ರಲ್ಲಿ ಪರೇಶ್ ಮುರ್ಮು ಆಸ್ತಿಯ ಮೊತ್ತ ₹11,57,926ರಷ್ಟಿದ್ದು, ಇದೀಗ ₹40,10,329ರಷ್ಟಾಗಿದೆ.
ಕಡಿಮೆಯೂ ಆಗಿದೆ ಆಸ್ತಿ 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕೆಲ ಅಭ್ಯರ್ಥಿಗಳ ಆಸ್ತಿಯ ಮೊತ್ತದಲ್ಲಿ ಕುಸಿತವೂ ಆಗಿದೆ ಎಂಬುದು ಅಚ್ಚರಿ ಹುಟ್ಟಿಸುವ ವಿಷಯ. ಉತ್ತರ 24 ಪರಗಣದ ಜಯನಗರ ಕ್ಷೇತ್ರದ ಶಾಸಕ ಬಿಸ್ವಾಂತ್ ದಾಸ್ ಅವರ ಆಸ್ತಿಯ ಮೊತ್ತ 2016ರಲ್ಲಿ ₹46,85,523 ರಷ್ಟಿದ್ದು ಈ ಬಾರಿಯ ಅಫಿಡವಿಟ್ನಲ್ಲಿ ಬಿಸ್ವಾಂತ್ ದಾಸ್ ಆಸ್ತಿಯ ಮೊತ್ತ ₹14,41,200 ಎಂದು ನಮೂದಿಸಲಾಗಿದೆ.
ಟಿಎಂಸಿ ಶಾಸಕಿ ಸಂಧ್ಯಾರಾಣಿ ತುಡು ಅವರ ಆಸ್ತಿಯ ಮೊತ್ತದಲ್ಲಿ ಗಣನೀಯ ಇಳಿಕೆಯಾಗಿದೆ. ಈ ಬಾರಿ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ 2016ರ ಆಸ್ತಿಯ ಮೊತ್ತಕ್ಕಿಂತ ಈ ಬಾರಿ ಶೇ 60.20ರಷ್ಟು ಇಳಿಕೆಯಾಗಿದೆ.
West Bengal Election 2021 Opinion Poll: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ