ಅಶೋಕ ವಿಶ್ವವಿದ್ಯಾಲಯ ವಿವಾದ: ವಿದ್ಯಾರ್ಥಿಗಳಿಗೆ ಮಾರ್ಮಿಕ ಪತ್ರ ಬರೆದು ರಾಜೀನಾಮೆ ನಿರ್ಧಾರಕ್ಕೆ ಬದ್ಧ ಎಂದ ಪ್ರತಾಪ್ ಭಾನು ಮೆಹ್ತಾ
ನನ್ನ ಬಗ್ಗೆ ನೀವು ತೋರಿರುವ ಪ್ರೀತಿ, ಒಗ್ಗಟ್ಟಿನ ಬೆಂಬಲದಿಂದ ನನಗೆ ಅತೀವ ಸಂತೋಷವಾಗಿದೆ. ಅದನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ನಿಮಗಿರುವ ನೈತಿಕ ಸ್ಪಷ್ಟತೆ ಹಾಗೂ ರಾಜಕೀಯ ವಿವೇಕದ ಎದುರು ಅಶೋಕ ವಿಶ್ವವಿದ್ಯಾಲಯ ದೋಷಿಯಾಗಿ ನಿಲ್ಲುತ್ತಿದೆ.
ದೆಹಲಿ: ಖ್ಯಾತ ರಾಜಕೀಯ ಅಂಕಣಕಾರ ಪ್ರತಾಪ್ ಭಾನು ಮೆಹ್ತಾ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಕೆಲದಿನಗಳ ಹಿಂದಷ್ಟೇ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆ ನಿರ್ಧಾರಕ್ಕೆ ಬೇಸರಿಸಿ ವಿಶ್ವವಿದ್ಯಾಲಯದ ಹಾಲಿ, ಮಾಜಿ ವಿದ್ಯಾರ್ಥಿಗಳು ಮತ್ತು ಇತರ ಉದ್ಯೋಗಿಗಳು ರಾಜೀನಾಮೆಗೆ ಕಾರಣ ತಿಳಿಸುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಪತ್ರದ ಮುಖೇನ ಪ್ರತಿಕ್ರಿಯಿಸಿರುವ ಪ್ರತಾಪ್ ಭಾನು ಮೆಹ್ತಾ, ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಮೆಹ್ತಾ ಎರಡು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅವರು ಸಂಸ್ಥೆಗೆ ರಾಜಕೀಯ ಹೊಣೆಗಾರಿಕೆ ತಂದೊಡ್ಡುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ಸ್ಥಾಪಕರು ಹೇಳಿಕೆ ನೀಡಿದ್ದರು. ಹಾಗಾಗಿ, ಈ ವಾರದ ಆರಂಭದಲ್ಲಿ ಪ್ರಾಧ್ಯಾಪಕ ಸ್ಥಾನದಿಂದಲೂ ಮೆಹ್ತಾ ಕೆಳಗಿಳಿದಿದ್ದಾರೆ. ಪ್ರತಾಪ್ ಭಾನು ಮೆಹ್ತಾ ರಾಜೀನಾಮೆ ನೀಡಿರುವುದು ಹರ್ಯಾಣ ಸೋಣಿಪತ್ನ ಅಶೋಕ ವಿಶ್ವವಿದ್ಯಾಲಯದಲ್ಲಿ ಹೊಸ ವಿವಾದದ ವಿದ್ಯಾಮಾನಗಳಿಗೆ ಸಾಕ್ಷಿಯಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿ ಪ್ರತಾಪ್ ಭಾನು ಮೆಹ್ತಾ ಬರೆದ ಪತ್ರದ ಮುಖ್ಯಾಂಶಗಳು ಇಲ್ಲಿದೆ: ನನ್ನ ಬಗ್ಗೆ ನೀವು ತೋರಿರುವ ಪ್ರೀತಿ, ಒಗ್ಗಟ್ಟಿನ ಬೆಂಬಲದಿಂದ ನನಗೆ ಅತೀವ ಸಂತೋಷವಾಗಿದೆ. ಅದನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ನಿಮಗಿರುವ ನೈತಿಕ ಸ್ಪಷ್ಟತೆ ಹಾಗೂ ರಾಜಕೀಯ ವಿವೇಕದ ಎದುರು ಅಶೋಕ ವಿಶ್ವವಿದ್ಯಾಲಯ ದೋಷಿಯಾಗಿ ನಿಲ್ಲುತ್ತಿದೆ. ಈ ಕಾರಣದಿಂದ ಪತ್ರ ಬರೆಯಲು ನಾನು ಬಹಳ ಕಷ್ಟಪಟ್ಟಿದ್ದೇನೆ. ನೀವು ನಡೆಸುತ್ತಿರುವ ಪ್ರತಿಭಟನೆ ಅಶೋಕ ಯುನಿವರ್ಸಿಟಿಯನ್ನು ಗುರಿಯಾಗಿಸಿ ನಡೆಯುತ್ತಿರುವುದು ಆಗಿರಬಹುದು. ಆದರೆ, ನಿಜವಾಗಿ ಇದು ಅಶೋಕ ಯುನಿವರ್ಸಿಟಿಗಿಂತ ದೊಡ್ಡ ಮೌಲ್ಯಗಳ ಕುರಿತದ್ದಾಗಿದೆ. ನಿಮ್ಮ ಹೋರಾಟವು ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ನೆಲೆಯಲ್ಲಿ ನಡೆಯುತ್ತಿರುವ ಗೌರವಯುತ ಪ್ರತಿಭಟನೆಯಾಗಿದೆ.
ಒಂದು ನೋಟದಂತೆ ಈ ಪ್ರತಿಭಟನೆಯಿಂದ ಅಶೋಕ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಆಗಿದೆ ಎಂದುಕೊಳ್ಳಹುದು. ಆದರೆ, ನಿಜವಾಗಿ ಈ ಘಟನೆಯಿಂದ ಅಶೋಕ ವಿಶ್ವವಿದ್ಯಾಲಯದ ಘನತೆ ಹೆಚ್ಚಾಗಿದೆ. ವಿಶ್ವವಿದ್ಯಾಲಯ ಏನು ಮಾಡಿದೆಯೋ ಅದರಿಂದಲ್ಲ. ಬದಲಾಗಿ, ನೀವು ಏನು ಮಾಡಿದ್ದೀರೋ ಅದರಿಂದ. ಈ ಸಂದರ್ಭ ನೀವು ಕೆಲವು ಪ್ರಾಧ್ಯಾಪಕರನ್ನು ಕಳೆದುಕೊಳ್ಳಬಹುದು. ಆದರೆ, ನಿಮ್ಮನ್ನು ನೋಡುತ್ತಿರುವ ಹಲವರು, ನೀವು ಮೌಲ್ಯಗಳ ಪರವಾಗಿ ಹೇಗೆ ನಿಂತಿದ್ದೀರಿ. ವಿಶ್ವವಿದ್ಯಾಲಯದ ಪ್ರತಿಕ್ರಿಯೆಯನ್ನು ಕೇಳಿದ್ದೀರಿ ಎಂದು ಆಶ್ಚರ್ಯಗೊಳ್ಳಬಹುದು. ಅದರಿಂದ ಜನರು ಈ ವಿಶ್ವವಿದ್ಯಾಲಯದ ಜೊತೆ ಸಂಬಂಧ ಹೊಂದಲು ಬಯಸುವಂತಾಗಬಹುದು. ನಿಮ್ಮ ಧ್ವನಿಯು ಮುಂದೆ ಈ ವಿಶ್ವವಿದ್ಯಾಲಯವನ್ನು ಇನ್ನಷ್ಟು ಉತ್ತಮ ವಿದ್ಯಾಸಂಸ್ಥೆಯಾಗಿ ರೂಪಿಸಬಹುದು. ನೀವು ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು. ಅತ್ಯುತ್ತಮ ಜಗತ್ತು ಸೃಷ್ಟಿಮಾಡುತ್ತೇವೆ ಎಂದು ಧೈರ್ಯವಾಗಿರಬೇಕು.
ಅಶೋಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ ದಿನಗಳನ್ನು ಮರೆಯುವಂತಿಲ್ಲ. ಅಶೋಕದ ವಿದ್ಯಾರ್ಥಿಗಳು, ಸಹೋದ್ಯೋಗಿಗಳನ್ನು ತೊರೆಯುವುದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ, ನಾನು ನನ್ನ ಮೌಲ್ಯಗಳಿಗೆ ಬೆಲೆ ಕೊಟ್ಟು ಈ ನಿರ್ಧಾರ ಕೈಗೊಂಡಿದ್ದೇನೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನಾವು ಕ್ಲಿಷ್ಟಕರ ಸಂದರ್ಭದಲ್ಲಿ ಬದುಕುತ್ತಿದ್ದೇವೆ. ಭಾರತ ಸೃಜನಶೀಲತೆಯಿಂದ ಮಿಂಚುತ್ತಿದೆ. ಆದರೆ, ಸರ್ವಾಧಿಕಾರವಾದದ ಕರಿನೆರಳು ನಮ್ಮ ಮೇಲಿದೆ. ದೀಪದಂತೆ ಬೆಳಗಬಲ್ಲ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ನೀವೆಲ್ಲರೂ ಹಾಗಾಗುತ್ತೀರಿ ಎಂದು ನಾನು ನಂಬುತ್ತೇನೆ.
ಶಿಕ್ಷಣ ತಜ್ಞರ ಅಸಮಾಧಾನ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಅಭಿಪ್ರಾಯಗಳ ಬಗ್ಗೆ ಧ್ವನಿ ಎತ್ತದಂತೆ ಒತ್ತಡವಿದೆ ಎಂದು ತಿಳಿಸಿ ಮೆಹ್ತಾ ಪ್ರಾಧ್ಯಾಪಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿಚಾರವಾಗಿ ಜಗತ್ತಿನ ಪ್ರಮುಖ ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾರ್ವರ್ಡ್, ಏಲ್, ಕೊಲಂಬಿಯಾ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಎಂಐಟಿಯ ಸುಮಾರು 150ಕ್ಕೂ ಹೆಚ್ಚು ಪ್ರಾಧ್ಯಾಪಕರು ಈ ಸಂಬಂಧ ಅಶೋಕ ಯುನಿವರ್ಸಿಟಿಯ ಟ್ರಸ್ಟಿಗಳಿಗೆ ತೆರೆದ ಪತ್ರ ಬರೆದಿದ್ದರು.
ಇದನ್ನೂ ಓದಿ: Dattatreya Hosabale: ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ: ಮಿತಭಾಷಿ, ಮಧ್ಯಮ ದಾರಿಹೋಕ