ರಾಜಕೀಯ ಅಂಕಣಕಾರ, ಪ್ರಾಧ್ಯಾಪಕ ಪ್ರತಾಪ್ ಭಾನು ಮೆಹ್ತಾ ರಾಜೀನಾಮೆ; ಅಶೋಕ ಯುನಿವರ್ಸಿಟಿ ಟ್ರಸ್ಟ್ ವಿರುದ್ಧ ಶಿಕ್ಷಣ ತಜ್ಞರ ಅಸಮಾಧಾನ
ಮೆಹ್ತಾ ಹಾಗೂ ಸುಬ್ರಮಣಿಯನ್ ರಾಜೀನಾಮೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಕುತ್ತು ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ: ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ, ರಾಜಕೀಯ ವಿಶ್ಲೇಷಕ ಪ್ರತಾಪ್ ಭಾನು ಮೆಹ್ತಾ ರಾಜಕೀಯ ಅಭಿಪ್ರಾಯದ ಬಗ್ಗೆ ಧ್ವನಿ ಎತ್ತದಂತೆ ಒತ್ತಡವಿದೆ ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ವಿಚಾರವಾಗಿ ಜಗತ್ತಿನ ಪ್ರಮುಖ ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾರ್ವರ್ಡ್, ಏಲ್, ಕೊಲಂಬಿಯಾ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಎಂಐಟಿಯ ಸುಮಾರು 150ಕ್ಕೂ ಹೆಚ್ಚು ಪ್ರಾಧ್ಯಾಪಕರು ಈ ಸಂಬಂಧ ಅಶೋಕ ಯುನಿವರ್ಸಿಟಿಯ ಟ್ರಸ್ಟೀಗಳಿಗೆ ತೆರೆದ ಪತ್ರ ಬರೆದಿದ್ದಾರೆ.
ಮೆಹ್ತಾ ಎರಡು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅವರು ಸಂಸ್ಥೆಗೆ ರಾಜಕೀಯ ಹೊಣೆಗಾರಿಕೆ ತಂದೊಡ್ಡುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ಸ್ಥಾಪಕರು ಹೇಳಿಕೆ ನೀಡಿದ್ದರು. ಹಾಗಾಗಿ, ಈ ವಾರದ ಆರಂಭದಲ್ಲಿ ಅವರು ಪ್ರಾಧ್ಯಾಪಕ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ. ಪ್ರತಾಪ್ ಬಾನು ಮೆಹ್ತಾ ರಾಜೀನಾಮೆ ನೀಡಿರುವುದು ಹರ್ಯಾಣ ಸೋಣಿಪತ್ನ ಅಶೋಕ ವಿಶ್ವವಿದ್ಯಾಲಯದಲ್ಲಿ ಹೊಸ ವಿವಾದದ ಆರಂಭಕ್ಕೆ ಸಾಕ್ಷಿಯಾಗಿದೆ.
ಮೆಹ್ತಾ ರಾಜೀನಾಮೆ ಬಳಿಕ ಅವರಿಗೆ ಬೆಂಬಲ ಸೂಚಿಸಿ, ವಿಶ್ವವಿದ್ಯಾಲಯದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಮೆಹ್ತಾ ಹಾಗೂ ಸುಬ್ರಮಣಿಯನ್ ರಾಜೀನಾಮೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಕುತ್ತು ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ವಿಶ್ವವಿದ್ಯಾಲಯಕ್ಕೆ ನಷ್ಟವಾಗಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಶೋಕ ವಿಶ್ವವಿದ್ಯಾಲಯದ ರಾಜಕೀಯ ಒತ್ತಡದಿಂದ ಪ್ರತಾಪ್ ಬಾನು ಮೆಹ್ತಾ ರಾಜೀನಾಮೆ ನೀಡಿರುವುದು ಬಹಳ ಬೇಸರವಾಗಿದೆ. ಈಗಿನ ಭಾರತ ಸರ್ಕಾರದ ಪ್ರಮುಖ ಟೀಕಾಕಾರ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯದ ಬೆಂಬಲಿಗ ತಮ್ಮ ಬರಹಗಳಿಂದಾಗಿ ಗುರಿಯಾಗಿದ್ದರು . ತಮ್ಮ ಸಂಸ್ಥೆಯ ಕೆಲಸಗಾರ ಎಂಬ ನೆಲೆಯಲ್ಲಿ ಮೆಹ್ತಾರ ಪರ ನಿಲ್ಲಬೇಕಿದ್ದ ಅಶೋಕ ಸಂಸ್ಥೆಯ ಟ್ರಸ್ಟೀಗಳು, ಮೆಹ್ತಾರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪತ್ರಕ್ಕೆ ನ್ಯೂಯಾರ್ಕ್ ವಿಶ್ವವಿದ್ಯಾಲಯ, ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್, ಸ್ಟಾನ್ಫೋರ್ಡ್ ಯುನಿವರ್ಸಿಟಿ, ಪ್ರಿನ್ಸ್ಟನ್ ಯುನಿವರ್ಸಿಟಿ, ಕ್ಯಾಂಬ್ರಿಡ್ಜ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಹಾಗೂ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಪ್ರಾಧ್ಯಾಪಕರು ಅಶೋಕ ವಿಶ್ವವಿದ್ಯಾಲಯಕ್ಕೆ ಬರೆದ ಪತ್ರಕ್ಕೆ ಸಹಿ ಹಾಕಿ ಮೆಹ್ತಾ ರಾಜೀನಾಮೆಗೆ ಅಸಮಾಧಾನ ಸೂಚಿಸಿದ್ದಾರೆ.
ಅಶೋಕ ಯುನಿವರ್ಸಿಟಿಯ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು ಹಾಗೂ ಇತರ ಉದ್ಯೋಗಿಗಳು ಮೆಹ್ತಾ ರಾಜೀನಾಮೆಗೆ ಕಾರಣವೇನು ಎಂದು ಆಡಳಿತವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸ್ರಲ್ಲಿ ತಾಯ್ನಾಡಿಗೆ ದ್ರೋಹ, ಅಮೂಲ್ಯ, ಆರ್ದ್ರಾಳ ಹಿಂದಿದೆಯಾ ಕಾಣದ ಕೈ?
Published On - 6:03 pm, Sat, 20 March 21