Dattatreya Hosabale: ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ: ಮಿತಭಾಷಿ, ಮಧ್ಯಮ ಮಾರ್ಗಿ

Who is RSS' New Gen Secy. Dattatreya Hosabale 'Dattaji'?: ಬೆಂಗಳೂರಿನ ಹತ್ತಿರ ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆಯಲ್ಲಿ ದತ್ತಾತ್ತ್ರೇಯ ಹೊಸಬಾಳೆ ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಸಂಯಮಿ ಮಧ್ಯ ದಾರಿ ಕಂಡುಕೊಳ್ಳುವ ಹೊಸಬಾಳೆ ಮುಂದೆ ಜವಾಬ್ದಾರಿ ದೊಡ್ಡದಿದೆ.

Dattatreya Hosabale: ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ: ಮಿತಭಾಷಿ, ಮಧ್ಯಮ ಮಾರ್ಗಿ
ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ತ್ರೇಯ ಹೊಸಬಾಳೆ
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 21, 2021 | 8:59 PM

ಬೆಂಗಳೂರಿನ ಹತ್ತಿರ ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ ರಾಷ್ಟ್ರೀಯ ಸರಕಾರ್ಯವಾಹ್ ಅಂದರೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇಂದು ಆಯ್ಕೆ ಆಗಿರುವ ದತ್ತಾತ್ರೇಯ ಹೊಸಬಾಳೆ ವಿಭಿನ್ನ ವ್ಯಕ್ತಿ. ಆರ್​ಎಸ್ಎಸ್ ವಲಯದಲ್ಲಿ ಇವರನ್ನು ದತ್ತಾಜೀ ಎಂದು ಕರೆಯುತ್ತಾರೆ. ಮಿತ ಭಾಷಿ, ಚಿಂತನೆಯಲ್ಲಿ ಕೂಡ ಹಳೆಯ ಆರ್​ಎಸ್​ಎಸ್​ ಕಟ್ಟರ್​ತನ ಕಾಣದು. ತಮ್ಮ ದೃಷ್ಟಿಕೋನದಲ್ಲಿ ಮಧ್ಯಮ ದಾರಿ (middle path) ಕಂಡುಕೊಳ್ಳುವ ತವಕ ಇರುವ ಹಾಗೆ ಕಾಣುತ್ತಾರೆ.  ಪ್ರಾಯಶಃ ಹೊರ ಜಗತ್ತಿನ ದೃಷ್ಟಿಯಿಂದ ಇದು ಅವರ ವೈಶಿಷ್ಟ್ಯ.

ಇತಿಹಾಸ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೊಸಬಾಳೆ ಊರಿನವರಾದ ಇವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೊಸಬಾಳೆ, ಇಂದಿರಾಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಜೈಲಿಗೆ ಹೋದರು. ಎಲ್.ಎಸ್. ಶೇಷಗಿರಿ ರಾವ್, ಪಿ. ಲಂಕೇಶ್ ಮತ್ತು ಕೀ.ರಂ. ನಾಗರಾಜ್ ರಂಥ ಮಾಸ್ತರುಗಳ ಕೆಳಗೆ ಓದಿದ ಹೊಸಬಾಳೆ, ಇಂದಿಗೂ ಸಾಹಿತ್ಯ, ಮುಖ್ಯವಾಗಿ ಭಾರತೀಯ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯವನ್ನು ಓದುವ ಲವಲವಿಕೆ ತೋರಿಸುತ್ತಾರೆ. ಹತ್ತು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಗೋಪಾಲಕೃಷ್ಣ ಅಡಿಗರ ಸಾಹಿತ್ಯದ ಕುರಿತಾದ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಹೊಸಬಾಳೆ ಇಂದಿಗೂ, ಈ ಸಾಹಿತಿಗಳ ಒಡನಾಟದ ನೆನಪನ್ನು ಹಂಚಿಕೊಳ್ಳುತ್ತಾರೆ. ಹಾಗೆ ನೋಡಿದರೆ, ಲಂಕೇಶ್ ಎಂದೂ ಆರ್​ಎಸ್​ಎಸ್​ ಸಿದ್ಧಾಂತವನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಹೊಸಬಾಳೆ ಅವರ ಜೊತೆ ಮಾತನಾಡಿದಾಗ ಹೊರಗಿನವರಿಗೆ ಆಶ್ಚರ್ಯವಾಗಬಹುದು: ಲಂಕೇಶರ ಸಾಹಿತ್ಯದ ಕುರಿತು ಆಳವಾಗಿ ಮಾತನಾಡುತ್ತಾರೆ, ಅವರ ವಿಶ್ವ ದೃಷ್ಟಿಕೋನವನ್ನು ಹೊಸಬಾಳೆ ಗೌರವಿಸುತ್ತಾರೆ. ಪ್ರಾಯಶಃ ಅದನ್ನು ಒಪ್ಪಿಕೊಳ್ಳಲಿಕ್ಕಿಲ್ಲ. ಇದೇ ಪ್ರಾಯಶಃ ಹೊಸಬಾಳೆ ಅವರ ವ್ಯಕ್ತಿ ವೈಶಿಷ್ಟ್ಯ. ಆಂಗ್ಲ ಭಾಷೆಯಲ್ಲಿ ಹೇಳುವಂತೆ moderationನ್ನು ಇವರು ಮೈಗೂಡಿಸಿಕೊಂಡವರು ಎಂದರೆ ತಪ್ಪಾಗಲಿಕ್ಕಿಲ್ಲ.

1972 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದ ಹೊಸಬಾಳೆ 30 ವರ್ಷ ಆರ್​ಎಸ್​ಎಸ್​ ಮತ್ತು ಎಬಿವಿಪಿಯಲ್ಲಿ ಸೇವೆ ಸಲ್ಲಿಸಿದ ನಂತರ 2002 ರಲ್ಲಿ ವಾಪಸ್ ಆರ್​ಎಸ್​ಎಸ್​ ಸೇವೆಗೆ ಹಿಂತಿರುಗಿದರು. 1974 ರಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ ಓದುತ್ತಿದ್ದ ಅವರು ವಿದ್ಯಾಭ್ಯಾಸವನ್ನು ನಿಲ್ಲಿಸಿ ಜಯಪ್ರಕಾಶ್ ನಾರಾಯಣ್ ಅವರು ಪ್ರಾರಂಭಿಸಿದ ನವನಿರ್ಮಾಣ್ ಆಂದೋಲನಕ್ಕೆ ಸೇರಿ ತುರ್ತು ಪರಿಸ್ಥಿತಿ ವಿರುದ್ಧ ಜೈಲಿಗೆ ಹೋದರು. 1977 ರಲ್ಲಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಮೇಲೆ ಅವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ಸ್ನಾತಕೋತ್ತರ ಪದವಿ ಗಳಿಸಿದರು.

ಬೇರೆ ಬೇರೆ ಜವಾಬ್ದಾರಿ Dattatreya hosabale as sarkaryavah of rss ಸರಕಾರ್ಯವಾಹ್ ಆಗಿ ನಿಯುಕ್ತಿಗೊಳ್ಳುವ ಮುನ್ನ ಲಖ್ನೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಸಬಾಳೆ ಉತ್ತರ ಪ್ರದೇಶ ಮತ್ತು ಉತ್ತರ ಭಾರತದ ಸಾಮಾಜಿಕ ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ. ಅವರಿಗೆ ರಾಜಕೀಯ ಏನು ಅಪಥ್ಯ ಅಲ್ಲ. ಸ್ವಲ್ಪ ಕಾಲ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಬಹಳ ಹತ್ತಿರ ಆಗಿದ್ದರು ಎನ್ನುವುದು ವಿಶೇಷ ಅಲ್ಲ. ಅದೇ ಕಾರಣಕ್ಕೆ ಅವರನ್ನು ಸ್ವಲ್ಪ ಕಾಲ ರಾಜಕೀಯದಿಂದ ದೂರ ಇಡಲು ಉತ್ತರ ಪ್ರದೇಶಕ್ಕೆ ಕಳಿಸಲಾಗಿತ್ತು ಎಂದು ಕೆಲವು ಆರ್​ಎಸ್​ಎಸ್​ ನಾಯಕರು ಹೇಳುತ್ತಾರೆ. ಯಾರೂ ಹೇಳದ ಆದರೆ ದೆಹಲಿ ಮಾಧ್ಯಮಗಳು ಊಹೆ ಮಾಡುತ್ತಿದ್ದ ಒಂದಂಶ ಏನೆಂದರೆ, ಪ್ರಧಾನಿ ಮೋದಿ ಅವರಿಗೆ ಹತ್ತಿರವಾಗಿದ್ದರು ಎಂಬ ಕಾರಣಕ್ಕಾಗಿಯೇ ಹೊಸಬಾಳೆ ಅವರಿಗೆ ಹೊಸ ಜವಾಬ್ದಾರಿ ಕೊಡುವುದನ್ನು ಎರಡು ಬಾರಿ ತಡೆಯಲಾಯ್ತು ಎಂಬುದು.

Dattatreya hosabale as sarkaryavah of rss

ಇಂದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೊಸಬಾಳೆ ಅವರನ್ನು ಅಭಿನಂದಿಸುತ್ತಿರುವ ಹಿರಿಯ ಆರ್​ಎಸ್​ಎಸ್​ ನಾಯಕರು

ಬಹಳ ಕಡಿಮೆ ಜನರಿಗೆ ಗೊತ್ತು ಒಂದು ವಿಚಾರ. ಪದ್ಮ ಪ್ರಶಸ್ತಿಯಲ್ಲಿ ಭಾರಿ ಕ್ರಾಂತಿಯನ್ನು ತಂದು ದೇಶದ ಮೂಲೆ ಮೂಲೆಯಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಅವರಿಗೆ ಪದ್ಮ ಪ್ರಶಸ್ತಿ ಕೊಡಬೇಕು ಎಂದು ಪ್ರಧಾನಿ ಅವರಿಗೆ ಸಲಹೆ ಕೊಟ್ಟವರೇ ಹೊಸಬಾಳೆ ಎಂದು ಕೆಲವು ಆರ್​ಎಸ್​ಎಸ್​ ನಾಯಕರು ಹೇಳುತ್ತಾರೆ. ಇದನ್ನು ಹೊಸಬಾಳೆ ಅವರಿಗೆ ಕೇಳಿ.. ಅವರು ಮುಗುಳ್ನಕ್ಕು ತಲೆ ಅಲ್ಲಾಡಿಸುತ್ತಾರೆ.

ಹಾಗಂತ ಎದುರಿಗೆ ಕುಳಿತವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕುಳಿತುಕೊಳ್ಳುವ ಮನುಷ್ಯ ಅವರಲ್ಲ. ಇಂದಿನ ಬಿಜೆಪಿಯ ಸ್ಥಿತಿಗತಿ ನೋಡಿ ಆರ್​ಎಸ್​ಎಸ್​ ಸರಿಯಾಗಿ ನೈತಿಕ ತಳಹದಿ ಹಾಕುತ್ತಿಲ್ಲವೇ? ಅಥವಾ ಆ ನೈತಿಕ ತರಬೇತಿ ಸಾಕಾಗಲ್ಲ ಅಲ್ಲವೇ? ಎಂಬ ಪ್ರಶ್ನೆ ಕೇಳಿ ನೋಡಿ. ಆಗ ಹೊಸಬಾಳೆಯವರು ತಮ್ಮ ಸಂಘಟನೆಯನ್ನು ಸಮರ್ಥಿಸಿಕೊಳ್ಳುವ ಪರಿಯನ್ನು ಎದುರಿಗಿರುವವರು ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ಆದರೆ ಅವರು ಮಾತ್ರ ತಮ್ಮ ವಾದದಿಂದ ಹಿಂದೆ ಸರಿಯುವ ವ್ಯಕ್ತಿ ಅಲ್ಲ.

ಮುಂದೇನು? 

ದತ್ತಾತ್ರೇಯ ಹೊಸಬಾಳೆ

ಆರ್​ಎಸ್​ಎಸ್​ ಒಪ್ಪಿಕೊಳ್ಳಲಿ ಬಿಡಲಿ, ಹೊರ ಜಗತ್ತು ಆರ್​ಎಸ್​ಎಸ್​ನ್ನು ನೋಡುವ ದೃಷ್ಟಿಕೋನವೇ ಬೇರೆ. ವಿಶಾಲ ದೃಷ್ಟಿಕೋನವಿಲ್ಲದ ಮನುಸ್ಮೃತಿಯನ್ನು ತುರುಕಲು ಹೊರಟಿರುವ ಸಂಘ ಎಂದು ಆರ್​ಎಸ್​ಎಸ್​ ವಿರೋಧಿಸುವ ಅನೇಕ ಚಿಂತಕರು ಒಂದು ಕಡೆ. ಭಾರತೀಯ ಜನತಾ ಪಕ್ಷದಲ್ಲಿ ಕೆಲಸ ಮಾಡುವವರ ತಪ್ಪುಗಳು, ಭ್ರಷ್ಟಾಚಾರದ ಆರೋಪಗಳು, ಅನೈತಿಕ ಚಟುವಟಿಕೆಗಳನ್ನು ನೋಡಿ ಇದು ಆರ್​ಎಸ್​ಎಸ್​ ಕೊಟ್ಟ ಕಾಣಿಕೆ ಇದು; ದೇಶದ ಸಂವಿಧಾನವನ್ನೇ ಎತ್ತಿಹಾಕಲು ಹೊರಟಿದೆ ಈ ಆರ್​ಎಸ್​ಎಸ್​ ಎಂದು ಹೇಳುವ ವಿರೋಧ ಪಕ್ಷಗಳ ನಾಯಕರುಗಳ ವಾದ ಇನ್ನೊಂದೆಡೆ.

ಇವೆಲ್ಲದರ ನಡುವೆ ಅಂತರಾಷ್ಟ್ರೀಯ ಮಟ್ಟದ ಸಂಘ ಸಂಸ್ಥೆಗಳು ಆರ್​ಎಸ್​ಎಸ್​ನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗ, ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ತೆಗೆದುಕೊಳ್ಳಲು ಹೊರಟಿರುವ ಹೊಸಬಾಳೆ ಅವರ ಮುಂದೆ ಸವಾಲು ದೊಡ್ಡದಿದೆ. ಈ ಹಿಂದೆ ಕೊಟ್ಟ ಸವಾಲನ್ನು ಹೊಸ ದೃಷ್ಟಿಕೋನದಿಂದ ನೋಡುತ್ತ ಬಂದಿರುವ ಹೊಸಬಾಳೆ ಈಗ ಯಾವ ರೀತಿಯ ಚಿಂತನೆ (out of the box ideas) ತರುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ:

ರಾಮ ಮಂದಿರ ನಿಧಿ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ 12 ಕೋಟಿ ಜನ!

(Dattatreya Hosabale, a moderating voice Dattaji who is newly appointed as General Secretary of RSS)

Published On - 4:35 pm, Sat, 20 March 21